ಸರ್ಕಾರ ಕೆಡವಲು ಹೊರಟ ಮೈತ್ರಿ ನಾಯಕರಿಗೆ ಕೈ ಪಡೆಯಿಂದ ಮಾಸ್ಟರ್ ಪ್ಲಾನ್: ವೇದಿಕೆ ರೆಡಿ ಎಂದ ಡಿ ಕೆ ಶಿವಕುಮಾರ್
ಹಾಸನ, ಡಿಸೆಂಬರ್ 03: ಆರು ತಿಂಗಳಲ್ಲಿ ಸರ್ಕಾರ ತೆಗೆಯುತ್ತೇವೆ ಎಂದಿದ್ದರು. ದೇವೇಗೌಡರು ಈ ಸರ್ಕಾರ ತೆಗೆಯಬೇಕು ಎಂದು ಹೇಳಿದ್ದರು. ಅವರಿಗೆ ಜನ ಈಗಾಗಲೇ ಉತ್ತರ ನೀಡಿದ್ದು, ನಾವು ಹಾಸನ ಸಮಾವೇಶದ ವೇದಿಕೆ ಮೂಲಕ ಅವರಿಗೆ ಉತ್ತರ ನೀಡುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಹಾಸನದಲ್ಲಿ ಡಿಸೆಂಬರ್ 5 ರಂದು ಸಮಾವೇಶ ನಡೆಯಲಿರುವ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಭೇಟಿ ನೀಡಿ ಪೂರ್ವಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾಧ್ಯಮಗಳ ಜೊತೆಗೆ ಮಾತನಾಡಿ, ನಮ್ಮನ್ನು ನಂಬಿರುವ ಜನರ ನಂಬಿಕೆ ಉಳಿಸಿಕೊಂಡು ನುಡಿದಂತೆ ನಡೆದಿದ್ದೇವೆ. ಮುಂದೆಯೂ ಅವರ ವಿಶ್ವಾಸ ಉಳಿಸಿಕೊಳ್ಳುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡಿದರು.

ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಈ ಹಿಂದೆ ಆರು ತಿಂಗಳಲ್ಲಿ ಸರ್ಕಾರ ತೆಗೆಯುತ್ತೇವೆ ಎಂದಿದ್ದರು. ದೇವೇಗೌಡರು ಈ ಸರ್ಕಾರ ತೆಗೆಯಬೇಕು ಎಂದು ಹೇಳಿದ್ದರು. ಅವರಿಗೆ ಜನ ಈಗಾಗಲೇ ಉತ್ತರ ನೀಡಿದ್ದು, ನಾವು ಈ ವೇದಿಕೆ ಮೂಲಕ ಅವರಿಗೆ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಅಭಿಮಾನಿಗಳು ಪಕ್ಷದ ಹೊರತಾಗಿ ಮಾಡುತ್ತಿದ್ದ ಸಮಾವೇಶ ಈ ಹಂತಕ್ಕೆ ಬಂದು ನಿಂತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನನಗೆ ಆ ಬಗ್ಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಒಂದೇ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿಗಳೇ ನನ್ನ ಜತೆ ಚರ್ಚೆ ಮಾಡಿದ್ದಾರೆ. ನಮ್ಮ ಕೆಲವು ಸಚಿವರು ಚರ್ಚೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಈಗಾಗಲೇ ತಿಳಿಸಿದ್ದಾರೆ ಎಂದರು.
ಜನ ಕಲ್ಯಾಣ ಸಮಾವೇಶ ಹಾಸನದಿಂದಲೇ ಯಾಕೆ ಆರಂಭ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಜಿಲ್ಲೆಯಲ್ಲಿ ನಮಗೆ ಒಬ್ಬರೇ ಶಾಸಕರಿದ್ದಾರೆ. ಹೀಗಾಗಿ ಇಲ್ಲಿಂದಲೇ ಆರಂಭಿಸುತ್ತಿದ್ದೇವೆ. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರದಲ್ಲಿ ಹೆಚ್ಚು ಶಾಸಕರಿದ್ದಾರೆ. ಈ ಜಿಲ್ಲೆಯಲ್ಲೂ ಪಕ್ಷ ಸಂಘಟನೆ ಮಾಡಲು ಸಮಾವೇಶ ಮಾಡುತ್ತಿದ್ದೇವೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಪ್ರತಿಯಾಗಿ ಈ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು ಇಬ್ಬರು ಮೈತ್ರಿ ಮಾಡಿಕೊಂಡಿದ್ದಾರೋ, ಮೂವರು ಮೈತ್ರಿ ಮಾಡಿಕೊಂಡಿದ್ದಾರೋ, ಬಿಜೆಪಿಯಲ್ಲಿ ಎರಡು ಪಕ್ಷವಿದ್ದು, ಜೆಡಿಎಸ್ ನಲ್ಲಿ ಎಷ್ಟು ಪಕ್ಷವಿದೆಯೋ ಗೊತ್ತಿಲ್ಲ. ಅವರೆಲ್ಲರೂ ಸೇರಿ ನಮ್ಮ ಪಾಲಿಗೆ ಎನ್ ಡಿಎ. ಈ ಎನ್ ಡಿಎಗೆ ಜನ ಈಗಾಗಲೇ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಇಲ್ಲದಿದ್ದರೂ ನಮ್ಮ ಯೋಜನೆಗಳು ಜನರಿಗೆ ಮುಟ್ಟಿದೆಯೋ ಇಲ್ಲವೋ ಎಂದು ಪರಿಶೀಲಿಸಲಾಗುವುದು. ಗ್ಯಾರಂಟಿ ಯೋಜನೆ ಜಾರಿಗೆ ಸಮಿತಿ ರಚಿಸಿದ್ದೇವೆ. ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಅನರ್ಹರು ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಮಾನದಂಡದಂತೆ ಪರಿಶೀಲನೆಗೆ ಮುಂದಾದೆವು. ಆದರೆ ಬಿಜೆಪಿಯವರು ಬಡವರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದರು. ಯಾರಿಗೆ ಅನ್ಯಾಯವಾಗಿದೆಯೋ ಅದನ್ನು ಸರಿಪಡಿಸಲು ನಾವು ಬದ್ಧವಾಗಿದ್ದೇವೆ ಎಂದರು.
ನಮ್ಮ ಸಂವಿಧಾನದ ಮೂಲ ಉದ್ದೇಶ ಸರ್ವರಿಗೂ ಸಮಬಾಳು, ಸಮಪಾಲು. ನಮ್ಮ ಸಿದ್ಧಾಂತವೂ ಅದೇ ಆಗಿದೆ. ಹೀಗಾಗಿ ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಳ್ಳದ ಸ್ವಾಭಿಮಾನಿಗಳು ಈ ಸರ್ಕಾರದ ಕಾರ್ಯ ನೋಡಿ ಬೆಂಬಲ ಸೂಚಿಸುತ್ತಿದ್ದಾರೆ. ಈ ಸಮಾವೇಶ ಪೂರ್ವಸಿದ್ಧತೆ ಪರಿಶೀಲಿಸಿ, ನಮ್ಮ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಲು ಬಂದಿದ್ದೇನೆ. ಡಿ. 5 ರಂದು ನಾನು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ನಾಯಕರು ಬಂದು ರಾಜ್ಯದ ಜನರಿಗೆ ಸಂದೇಶ ರವಾನಿಸುತ್ತೇವೆ ಎಂದು ತಿಳಿಸಿದರು












Click it and Unblock the Notifications