ಸಚಿವ ಸಂಪುಟ ವಿಸ್ತರಣೆ ಆದರೆ ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ : ಡಿ ಕೆ ಶಿವಕುಮಾರ್ ಏನಂದ್ರು?
ಬೆಳಗಾವಿ, ಜನವರಿ 20: ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷದ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗುತ್ತಿದೆ. ಈ ನಡುವೆ ಸಚಿವ ಸಂಪುಟ ವಿಸ್ತರಣೆ ಆದರೆ ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ನೀಡುವ ಕುರಿತು ಚರ್ಚೆಯಾಗುತ್ತಿದ್ದು, ಈ ವಿಚಾರ ಚರ್ಚೆ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಗಾಂಧಿ ಭಾರತ ಹಿನ್ನೆಲೆಯಲ್ಲಿ ಹೊಸದಾದ ಕಾರ್ಯಕ್ರಮ ಘೋಷಣೆ ಕುರಿತು ನಮ್ಮ ನಾಯಕರಾದ ಹೆಚ್. ಕೆ ಪಾಟೀಲ್, ವೀರಪ್ಪ ಮೊಯ್ಲಿ, ಬಿ.ಎಲ್ ಶಂಕರ್, ಮುನಿಯಪ್ಪ, ರೆಹಮಾನ್ ಖಾನ್ ಅವರ ನೇತೃತ್ವದ ಸಮಿತಿ ನಮಗೆ ಅನೇಕ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಶಾಲಾ ಕಾಲೇಜುಗಳಿಂದ ಬೇರೆ ಬೇರೆ ಕಡೆಗಳಲ್ಲಿ ಇದನ್ನು ಆಚರಿಸಲು ಸೂಚಿಸಿದ್ದಾರೆ. ಮುಖ್ಯಮಂತ್ರಿಗಳು ಇದಕ್ಕಾಗಿ ಬಜೆಟ್ ನಲ್ಲಿ ಹಣ ಇಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಡೀ ವರ್ಷ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ನವರು ಸರ್ಕಾರದ ಹಣದಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಗಾಂಧಿ ಫೋಟೋ ಹಾಕದೇ ಕಾಂಗ್ರೆಸ್ ನಾಯಕರ ಫೋಟೋ ಹಾಕಿದ್ದಾರೆ ಎಂದು ಜಗದೀಶ್ ಶೆಟ್ಟರ್ ಅವರ ಆರೋಪದ ಕುರಿತು ಮಾತನಾಡಿ, ಜಗದೀಶ್ ಶೆಟ್ಟರ್ ಅವರು ಬಂದರೆ ಅವರನ್ನು ಬೆಳಗಾವಿ ಪ್ರವಾಸ ಮಾಡಿಸುತ್ತೇನೆ. ನಾವು ಎಲ್ಲೆಲ್ಲಿ ಏನು ಮಾಡಿದ್ದೇವೆ ಎಂದು ಅವರಿಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗ ಆಡಿದ ನುಡಿಮುತ್ತುಗಳನ್ನು ನೋಡಲಿಎಂದು ತಿಳಿಸಿದರು.
ದೇವಾಲಯಗಳ ಭೇಟಿ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದಿನಾ ಬೆಳಗಾದರೆ ದೇವರಿಗೆ ಪೂಜೆ ಮಾಡಿಯೇ ಮನೆಯಿಂದ ಹೊರಬರುತ್ತೇನೆ. ನಾಳೆ ನಾಡಿದ್ದು ಕಾರ್ಯಕ್ರಮಗಳ ಕೆಲಸದಲ್ಲಿ ನಿರತನಾಗುತ್ತೇನೆ. ಹೀಗಾಗಿ ಇಂದು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ. ನಿಮ್ಮಿಂದ (ಮಾಧ್ಯಮಗಳ) ರಕ್ಷಣೆಗೆ ಭೇಟಿ ನೀಡುತ್ತಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಗಾಂಧಿ ಭಾರತದ ಅಂಗವಾಗಿ ಜ.21ರಂದು ನಡೆಯಲಿರುವ ಗಾಂಧಿ ಪ್ರತಿಮೆ ಅನಾವರಣ ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ತಯಾರಿ ನಡೆಯುತ್ತಿದ್ದು, ಸಚಿವರುಗಳು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜ.21ರ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಆಹಾರ ಸಮಿತಿ ಜವಾಬ್ದಾರಿ ಹೊತ್ತಿರುವ ಸಚಿವರಾದ ಕೆ.ಹೆಚ್. ಮುನಿಯಪ್ಪ, ವಸತಿ ಸಮಿತಿ ಮುಖ್ಯಸ್ಥರಾದ ಸುಧಾಕರ್ ಅವರು ಈಗಾಗಲೇ ಬೆಳಗಾವಿಗೆ ಆಗಮಿಸಿದ್ದು, ಸ್ವಾಗತ ಸಮಿತಿ ಮುಖ್ಯಸ್ಥರಾದ ಪರಮೇಶ್ವರ್ ಅವರು ಶೀಘ್ರದಲ್ಲೇ ಆಗಮಿಸಲಿದ್ದಾರೆ. ನಾವು ಯಾರಿಗೆಲ್ಲ ಜವಾಬ್ದಾರಿ ವಹಿಸಿದ್ದೇವೋ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜಿಲ್ಲಾ ಸಚಿವರು ಸಂಘಟನೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
21ರ ಬೆಳಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಬೆಳಗ್ಗೆ ಸುವರ್ಣಸೌಧದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ನಂತರ ಔತಣಕೂಟ ಏರ್ಪಡಿಸಲಾಗಿದೆ. ಆನಂತರ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications