Karnataka Caste Census Report: ಜಾತಿಗಣತಿ ಜಟಾಪಟಿ: ಒಕ್ಕಲಿಗ ಶಾಸಕರ ಜೊತೆಗೆ ಡಿ ಕೆ ಶಿವಕುಮಾರ್ ಸಭೆ: ಚರ್ಚೆಯಾಗಿದ್ದೇನು?
ಬೆಂಗಳೂರು, ಏಪ್ರಿಲ್ 16: ಕರ್ನಾಟಕ ಸರ್ಕಾರದಲ್ಲೇ ಜಾತಿ ಗಣತಿ ಜಟಾಪಟಿ ತಾರಕಕ್ಕೇರಿದೆ. ಲಿಂಗಾಯತ, ಒಕ್ಕಲಿಗ ಸೇರಿ ಪ್ರಬಲ ಸಮುದಾಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಜಾತಿ ಗಣತಿ ವಿಚಾರ ರಾಜ್ಯ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದು, ಈ ನಡುವೆ ಡಿ.ಕೆ ಶಿವಕುಮಾರ್ ಒಕ್ಕಲಿಗರ ಶಾಸಕರ ಜೊತೆಗೆ ಚರ್ಚೆ ನಡೆಸಿದ್ದಾರೆ. ಜಾತಿಗಣತಿ ಜಟಾಪಟಿಗೆ ಪ್ರಬಲ ಒಕ್ಕಲಿಗ ಸಮುದಾಯದ ವಿರೋಧವೂ ಕಾರಣ. ಈ ನಿಟ್ಟಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಒಕ್ಕಲಿಗ ಶಾಸಕರ ಸಭೆ ನಡೆಸಿದ್ರು.
ಜಾತಿಗಣತಿ ವರದಿಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಮಾರಪಾರ್ಕ್ ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಂಗಳವಾರ ಒಕ್ಕಲಿಗ ಸಚಿವರು, ಶಾಸಕರು, ರಾಜ್ಯಸಭೆ ಸದಸ್ಯರು ಹಾಗೂ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಕೆಲವು ಮಾಧ್ಯಮಗಳಲ್ಲಿ ಹಾಗೂ ವಿರೋಧ ಪಕ್ಷದವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅದಕ್ಕೆ ನಾವು ಸೂಕ್ತ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯದ 11ನೇ ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದೆ. ಈ ವರದಿ ಬಗ್ಗೆ ಚರ್ಚೆ ನಡೆಸಲು ಇದೇ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ ಎಂದು ತಿಳಿಸಿದರು. ಈ ಮಧ್ಯೆ ಮಾಧ್ಯಮಗಳಲ್ಲಿ ವಿವಿಧ ವರದಿಗಳು ಪ್ರಕಟವಾಗುತ್ತಿದ್ದು, ಬೇರೆ ನಾಯಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಒದಗಿಸಿಕೊಡಬೇಕಾಗಿರುವುದು ನಮ್ಮ ಕರ್ತವ್ಯ. ಈ ವರದಿಯ ಸಾರಾಂಶವನ್ನು ನಮ್ಮ ಶಾಸಕರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದೇನೆ. ನಮ್ಮ ನಾಯಕರು ಅವರದೇ ಆದ ಅಭಿಪ್ರಾಯ ತಿಳಿಸಿದ್ದಾರೆ ಎಂದರು.
ಜಾತಿಗಳ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಲು ನಮ್ಮ ಸರ್ಕಾರವೇ ತೀರ್ಮಾನ ಮಾಡಿ, ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಈ ಸಮಿತಿ ಎಲ್ಲಾ ಕಡೆ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿದೆ. ಶಾಸಕರು ಹೆಚ್ಚಿನ ಮಾಹಿತಿ ಬೇಕು ಎಂದು ಕೇಳಿರುವ ಹಿನ್ನೆಲೆಯಲ್ಲಿ ಅವರಿಗೂ ವರದಿ ಪ್ರತಿ ನೀಡಲಾಗಿದೆ. ಈ ಸಮಿತಿಯು ವಿಸ್ತೃತವಾಗಿ ಅಧ್ಯಯನ ಮಾಡಿದ್ದು, ಅವರ ವರದಿ ಬಗ್ಗೆ ಲೋಪದೋಷ ಹುಡುಕಲು ನಾವು ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲವು ಮಾಧ್ಯಮಗಳಲ್ಲಿ ವಾಸ್ತವಾಂಶ ಹೊರತಾಗಿ ಅನೇಕ ವರದಿ ಮಾಡಲಾಗಿದೆ. ಮುಸಲ್ಮಾನರೆ ಹೆಚ್ಚಾಗಿದ್ದಾರೆ ಎಂಬ ಅರ್ಥ ಬರುವ ರೀತಿ ವರದಿ ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ನಾವು ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ಕೆಲಸ ಮಾಡುತ್ತೇವೆ. ಈ ಸಭೆಯಲ್ಲಿ ಚರ್ಚೆ ಮಾಡಿರುವ ಅಂಶವನ್ನು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ. ಈ ವಿಚಾರವನ್ನು ಸಧ್ಯಕ್ಕೆ ಮಾಧ್ಯಮಗಳ ಮುಂದೆ ಪ್ರಸ್ತಾಪ ಮಾಡುವುದಿಲ್ಲ. ಅನೇಕರು ಆಫ್ ದ ರೆಕಾರ್ಡ್ ಎಂದು ಏನೇನೋ ಹೇಳಿರಬಹುದು. ಅದಕ್ಕೆಲ್ಲ ನಾವು ತೆರೆ ಎಳೆಯುತ್ತೇವೆ ಎಂದು ಹೇಳಿದರು.
ಬಹಿರಂಗವಾಗಿರುವ ಅಂಕಿ ಅಂಶಗಳ ಬಗ್ಗೆ ಶಾಸಕರ ಅಭಿಪ್ರಾಯ ಏನು ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಒಂದು ಸಮಾಜದ ಬಗ್ಗೆ ಮಾತ್ರ ಚಿಂತೆ ಮಾಡುತ್ತಿಲ್ಲ. ಎಲ್ಲಾ ವರ್ಗದವರ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಇನ್ನು ಕೆಲವರು ಸಚಿವರಾಗಿದ್ದು, ಎಲ್ಲಾ ಸಮಾಜಕ್ಕೆ ರಕ್ಷಣೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಆನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಹಿಂದೆ ಅನೇಕ ಸಚಿವರು ಜಾತಿಗಣತಿ ಬಗ್ಗೆ ಅಪಸ್ವರ ವ್ಯಕ್ತಪಡಿಸುತ್ತಿದ್ದ ಕುರಿತು ಮಾತನಾಡಿ, ಆಗ ಯಾರ ಬಳಿಯೂ ಮಾಹಿತಿ ಇರಲಿಲ್ಲ. ಮಾಹಿತಿ ಬಹಿರಂಗವಾಗಿರುವುದೇ ಮೂರು ದಿನಗಳ ಹಿಂದೆ. ಮೊನ್ನೆ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾದ ಬಳಿಕವಷ್ಟೇ ನಮಗೆ ಇದರ ಬಗ್ಗೆ ಮಾಹಿತಿ ಸಿಕ್ಕಿದೆ. ನಮಗೆ ಸಿಕ್ಕ ಮಾಹಿತಿಯನ್ನು ನಮ್ಮ ಸಹೋದ್ಯೋಗಿ ಶಾಸಕರ ಜತೆ ಹಂಚಿಕೊಳ್ಳುವುದು ನಮ್ಮ ಕರ್ತವ್ಯ. ಹೀಗಾಗಿ ಸಭೆ ಮಾಡಿದ್ದೇವೆ. ಅವರಿಗೂ ವರದಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅವರು ತಮ್ಮ ಸಲಹೆ ನೀಡಬಹುದು ಎಂದು ತಿಳಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ. ಕಾಂಗ್ರೆಸ್ ಮುಖಂಡರ ಆಸ್ತಿಮುಟ್ಟುಗೋಲು ಹಾಕಿಕೊಂಡು ಆರೋಪಪಟ್ಟಿ ಸಲ್ಲಿಸಿರುವುದನ್ನು ನಾವು ಖಂಡಿಸುತ್ತೇವೆ, ಇದರ ವಿರುದ್ಧ ಪ್ರತಿಭಟನೆ ಮಾಡಲಾಗುವುದು" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಏಪ್ರಿಲ್ 17ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ಆಸ್ತಿ ಮುಟ್ಟುಗೋಲು ವಿರುದ್ಧ ಪ್ರತಿಭಟನೆ ನಿಗದಿ ಮಾಡಲಾಗುವುದು ಎಂದು ಹೇಳಿದರು.
ನ್ಯಾಷನಲ್ ಹೆರಾಲ್ಡ್ ಜವಾಹರ್ ಲಾಲ್ ನೆಹರು ಅವರು ಹುಟ್ಟುಹಾಕಿದ ಸಂಸ್ಥೆ. ಅವರ ಕುಟುಂಬ ಇದನ್ನು ಎಂದೂ ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ಅವರು ಈ ಸಂಸ್ಥೆಯಿಂದ ಆಸ್ತಿ ಮಾಡಿಕೊಂಡಿಲ್ಲ. ಅನೇಕರ ಸಹಕಾರದಿಂದ ಈ ಸಂಸ್ಥೆ ನಡೆಸಿಕೊಂಡು ಬರಲಾಗಿದೆ. ಅನಗತ್ಯವಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಿರಂಗ ಪ್ರತಿಭಟನೆ ಮಾಡುತ್ತೇವೆ ಎಂದು ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ನಾನು ಈ ಸಮಾಜದ ಪ್ರತಿನಿಧಿಯಾಗಿ, ಸಚಿವ ಸಂಪುಟ ಸಭೆಯಲ್ಲಿ ನಮ್ಮ ವಿಚಾರವನ್ನು ಹೇಗೆ ಮಂಡಿಸಬೇಕು, ಯಾವ ರೀತಿ ಸಲಹೆ ನೀಡಬೇಕು ಎಂದು ಚರ್ಚೆ ಮಾಡಬೇಕಲ್ಲವೇ? ಏಕಾಏಕಿ ನಾನೊಬ್ಬನೇ ಸರ್ವಜ್ಞನಲ್ಲ. ದೊಡ್ಡ ಪಂಡಿತನೂ ಅಲ್ಲ. ನಾನು ಹಳ್ಳಿಯಿಂದ ಬಂದು ಬೆಂಗಳೂರು ಸೇರಿರುವವನು. ಹಿರಿಯರು, ಸ್ನೇಹಿತರು, ಶಾಸಕರ ಅನುಭವ, ತಮ್ಮ ಕ್ಷೇತ್ರಗಳಲ್ಲಿ ಜನ ಏನು ಹೇಳುತ್ತಿದ್ದಾರೆ, ಮಾಧ್ಯಮಗಳು ನೀಡಿರುವ ವರದಿ ಎಲ್ಲವನ್ನು ಚರ್ಚೆ ಮಾಡಿ ಅವಲೋಕಿಸಿ ಚರ್ಚೆ ಮಾಡಬೇಕಿದೆ. ನಾನು ಈ ವಿಚಾರವನ್ನು ಮಾಧ್ಯಮಗಳ ಮುಂದೆ ಮಾತನಾಡುವವನಲ್ಲ ಎಂದು ತಿಳಿಸಿದರು.












Click it and Unblock the Notifications