2028ರ ವಿಧಾನಸಭೆ ಚುನಾವಣೆಗೆ ಪುತ್ರಿ, ಪತ್ನಿ ಕಣಕ್ಕಿಳಿಸುವ ಬಗ್ಗೆ ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 15: ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ 224 ಕ್ಷೇತ್ರಗಳ ಪೈಕಿ 74 ಮಹಿಳಾ ಅಭ್ಯರ್ಥಿಗಳು ಬೇಕಾಗುತ್ತಾರೆ. ಈಗ ನಾವು 10-12 ಅಭ್ಯರ್ಥಿಗೆ ಟಿಕೆಟ್ ನೀಡುತ್ತಿದ್ದೇವೆ. ಈ 74 ಅಭ್ಯರ್ಥಿಗಳನ್ನು ಯಾರು ತಯಾರು ಮಾಡಬೇಕು? ನನಗೆ ನನ್ನ ಮಗಳು, ಪತ್ನಿಯನ್ನು ಅಭ್ಯರ್ಥಿ ಮಾಡುವುದು ಮುಖ್ಯವಲ್ಲ. ನಿಮ್ಮಂತಹ ಕಾರ್ಯಕರ್ತರು, ಜನಸಾಮಾನ್ಯರು ಪಕ್ಷದ ಅಭ್ಯರ್ಥಿಯಾಗುವ ಮಟ್ಟಕ್ಕೆ ಬೆಳೆಯಬೇಕು. ಆಗ ಮಾತ್ರ ನಾವು ನಿಮಗೆ ಶಕ್ತಿ ನೀಡಿದಂತಾಗುತ್ತದೆ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಸಾಧ್ಯವಾಗಲಿಲ್ಲ. ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಣಾಳಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸಿವೆ.

ಮಹಿಳಾ ಮೀಸಲಾತಿ ಜಾರಿಯಾದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಅಭ್ಯರ್ಥಿಗಳಾಗುತ್ತಾರೆ. ಹೀಗಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಬೇಕು. ನಿಮ್ಮೆಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. ನೆಹರೂ ಅವರು ಅವರು ಒಂದು ಮಾತು ಹೇಳಿದ್ದಾರೆ. ಜನರನ್ನು ಜಾಗೃತರನ್ನಾಗಿ ಮಾಡಬೇಕಾದರೆ ಮಹಿಳೆಯರು ಜಾಗೃತರಾಗಿರಬೇಕು. ಆಕೆ ನಡೆದರೆ ಕುಟುಂಬ ನಡೆದಂತೆ, ಕುಟುಂಬ ನಡೆದರೆ ಗ್ರಾಮ ನಡೆದಂತೆ, ಸಮಾಜ ಹಾಗೂ ದೇಶ ನಡೆಯುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 1.23 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. 1.50 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೂ ಬಸ್ ನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದೇವೆ. ಇನ್ನು ಬಡವರಿಗೆ ನೀಡುವ ಮನೆ ಹಾಗೂ ನಿವೇಶನಗಳನ್ನು ಆ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಮಾಡಬೇಕು ಎಂದು ಕಡ್ಡಾಯ ನಿಯಮ ಮಾಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಆಶ್ರಯ 7 ಸಾವಿರ ನಿವೇಶನ ನೀಡಿದ್ದೆ. ಎಲ್ಲವನ್ನು ಮಹಿಳೆಯರ ಹೆಸರಿಗೆ ನಿವೇಶನ ಹಂಚಿದೆ. ಆದಾದ ನಂತರದ ಚುನಾವಣೆಯಲ್ಲಿ ಜನ ನನ್ನನ್ನು 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದರು ಎಂದು ತಿಳಿಸಿದರು.
18 ಕ್ಷೇತ್ರಗಳ ಉಪಚುನಾವಣೆಯಲ್ಲಿ 15 ರಲ್ಲಿ ಸೋತು ಪಕ್ಷ ಕಷ್ಟದ ಪರಿಸ್ಥಿತಿಯಲ್ಲಿತ್ತು. ಮಾರ್ಚ್ 11ರಂದು ನಾನು ಅಧ್ಯಕ್ಷನಾಗಿ ನೇಮಕಗೊಂಡು 5 ವರ್ಷವಾಗಿದೆ. ನಾನು ಇಲ್ಲಿ ಅಧಿಕಾರ ಸ್ವೀಕರಿಸಿದ ದಿನ 'ನನಗೆ ಭವಿಷ್ಯ ಕಾಣಬೇಕಾದರೆ ಮಹಿಳೆ ಹಾಗೂ ಯುವಕರಿಂದ ಮಾತ್ರ ಸಾಧ್ಯ' ಎಂದು ಹೇಳಿದ್ದೆ. ಅದರಂತೆ ನಾವು ಚುನಾವಣೆ ಪ್ರಣಾಳಿಕೆ ಮಾಡುವಾಗ ಯುವಕರು ಹಾಗೂ ಮಹಿಳೆಯರಿಗೆ ಆದ್ಯತೆ ನೀಡಿದೆವು ಎಂದು ತಿಳಿಸಿದರು.
ನಮ್ಮ ಈ ಯೋಜನೆಗಳು ಜಾರಿ ಸಾಧ್ಯವೇ? ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಹಾಗೂ ದೇಶ ದಿವಾಳಿಯಾಗಲಿದೆ ಎಂದು ಪ್ರಧಾನಮಂತ್ರಿಯಾದಿಯಾಗಿ ಬಿಜೆಪಿ ನಾಯಕರು ಟೀಕೆ ಮಾಡಿದರು. ಆದರೆ ಈಗ ನಮ್ಮ ಮಾದರಿ ಅನುಸರಿಸಿ ಬಿಜೆಪಿ ರಾಜ್ಯಗಳು ಗ್ಯಾರಂಟಿ ಯೋಜನೆ ನೀಡುತ್ತಿವೆ. ನಾವು ಕಾರ್ಯಕರ್ತರಿಗಾಗಿ ಗ್ಯಾರಂಟಿ ಸಮಿತಿ ರಚಿಸಿದ್ದೇವೆ. ಇದರ ವಿರುದ್ಧ ಅಧಿವೇಶನದಲ್ಲಿ ವಿರೋಧ ಪಕ್ಷದವರು ನಮ್ಮ ಮೇಲೆ ವಾಗ್ದಾಳಿಗೆ ಮುಂದಾಗಿದ್ದಾರೆ. ಶಾಸಕರ ಹಕ್ಕು ಕಸಿಯುತ್ತಿದ್ದೀರಿ ಎಂದು ತಿಳಿಸಿದರು. ಕಾರ್ಯಕರ್ತರು ಅಧಿಕಾರಕ್ಕೆ ತಂದಿದ್ದಾರೆ. ಅದಕ್ಕಾಗಿ ಮಾಡಿದ್ದೇವೆ.
ಅಧಿಕಾರಕ್ಕೆ ತರದಿದ್ದರೆ ನಾವು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಯಾರ ಹಕ್ಕನ್ನು ಕಸಿಯುತ್ತಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಫಲಾನುಭವಿಗಳಿಗೆ ಈ ಯೋಜನೆಗಳು ಸರಿಯಾಗಿ ತಲುಪುತ್ತಿವೆಯೇ ಇಲ್ಲವೇ ಎಂದು ಪರಿಶೀಲನೆಗೆ ಈ ಸಮಿತಿ ಮಾಡಿದ್ದೇವೆ. ತಾಲುಕು ಮಟ್ಟದಲ್ಲಿ ಕಚೇರಿ ನೀಡಿ ಅವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಇದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ನಾನು ಇತ್ತೀಚೆಗೆ ಉಡುಪಿಗೆ ಹೋಗಿದ್ದಾಗ ಅಲ್ಲಿನ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳಿಗೆ ವಿರೋಧ ಮಾಡುತ್ತಿದ್ದರಂತೆ. ಅದಕ್ಕೆ ನಾನು ಅವರಿಗೆ ಒಂದು ಸವಾಲಾಕಿದೆ. ನಿಮ್ಮ ಪಕ್ಷದ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ತ್ಯಜಿಸಿರಿ ಎಂದು ಕರೆ ಕೊಡುವಂತೆ ಹೇಳಿದೆ. ಇದನ್ನು ಮಾಡಲು ಅವರಿಂದ ಸಾಧ್ಯವೇ? ಅವರ ಬೆಂಬಲಿಗರೇ ಅವರಿಗೆ ಛೀಮಾರಿ ಹಾಕುತ್ತಾರೆ ಎಂದು ತಿಳಿಸಿದರು.
ನಮ್ಮ ಭಾಷೆಯನ್ನು ಮಾತೃಭಾಷೆ ಎಂದು ಕರೆಯುತ್ತೇವೆ. ನಮ್ಮ ನಾಡಿನ ದೇವತೆ ಚಾಮುಂಡೇಶ್ವರಿ, ಭುವನೇಶ್ವರಿ. ಹಳ್ಳಿಗಳಿಗೆ ಹೋದರೆ ಗ್ರಾಮ ದೇವತೆ ಕೇಳುತ್ತೇವೆ. ಭೂಮಿಯನ್ನು ಭೂತಾಯಿ ಎಂದು ಪರಿಗಣಿಸುತ್ತೇವೆ. ಯಾವುದೇ ಶುಭ ಕಾರ್ಯಕ್ರಮದಲ್ಲಿ ಆಹ್ವಾನ ನೀಡಬೇಕಾದರೆ ಮೊದಲು ಶ್ರೀಮತಿ ನಂತರ ಶ್ರೀ ಎಂದು ನಮೂದಿಸುತ್ತೇವೆ. ಹೀಗೆ ಪ್ರತಿ ಹಂತದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ನೀವೆಲ್ಲರೂ ನಾಯಕಿಯರು ಎಂದು ತಿಳಿಸಿದರು.












Click it and Unblock the Notifications