Namma Metro: ಭರ್ಜರಿ ಗುಡ್ ನ್ಯೂಸ್: ಬಿಡದಿವರೆಗೆ ಮೆಟ್ರೋ ವಿಸ್ತರಣೆ: ಮಹತ್ವದ ಮಾಹಿತಿ, ವಿವರ ತಿಳಿಯಿರಿ
ಬೆಂಗಳೂರು, ಆಗಸ್ಟ್ 12: ರಾಜ್ಯ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಆರ್.ವಿ ರಸ್ತೆ-ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಉದ್ಘಾಟನೆ ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಈಗಾಗಲೇ ನಮ್ಮ ಮೆಟ್ರೋ ವಿಚಾರವಾಗಿ ಜಟಾಪಟಿ ನಡೆಯುತ್ತಿದ್ದು, ಇದೀಗ ಬಿಡದಿವರೆಗೂ ಮೆಟ್ರೋ ವಿಸ್ತರಣೆ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಈ ಕುರಿತು ಡಿ ಕೆ ಶಿವಕುಮಾರ್ ಮಾತನಾಡಿ, ಬೆಂಗಳೂರು ಕೆಂಪೇಗೌಡರು ಕಟ್ಟಿದ ನಗರ. ಇದು ಈ ಪ್ರಮಾಣಕ್ಕೆ ಬೆಳೆಯುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಬೆಂಗಳೂರು ಯೋಜಿತ ನಗರವಲ್ಲ ಆದರೆ ನಾವು ಸಾಧ್ಯದಷ್ಟು ಪರ್ಯಾಯ ಮಾರ್ಗದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಈಗ ಗ್ರೇಟರ್ ಬೆಂಗಳೂರು ಮೂಲಕ ಹೊಸ ನಗರಗಳ ನಿರ್ಮಾಣ ಮಾಡಲಾಗುವುದು. ಬಿಡದಿಯಲ್ಲಿ 10 ಸಾವಿರ ಎಕರೆಯಲ್ಲಿ ಟೌನ್ ಶಿಪ್ ಮಾಡಲಾಗುವುದು. ಮುಂದಿನ ಹತ್ತು, ಹದಿನಾದು ದಿನಗಳಲ್ಲಿ ಇದರ ಮಾಹಿತಿ ಬಿಡುಗಡೆ ಮಾಡಲಾಗುವುದು. ಇದರ ಜತೆಗೆ ಮೆಟ್ರೋವನ್ನು ಬಿಡದಿವರೆಗೆ ವಿಸ್ತರಣೆ ಮಾಡಲು ತಯಾರಿ ಮಾಡುತ್ತಿದ್ದೇವೆ. ಇನ್ನು ರಸ್ತೆ ಅಭಿವೃದ್ಧಿಗೆ 450 ಕಿ.ಮೀ ವೈಟ್ ಟ್ಯಾಪಿಂಗ್ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ಮೂಲಕ ಹೆಚ್ಚು ಐಟಿ ತೆರಿಗೆ ಪಾವತಿಸುತ್ತಿದ್ದೇವೆ. ಪ್ರಧಾನಮಂತ್ರಿಗಳ ಬಳಿ ನಾನು ಇದೇ ವಿಚಾರ ಪ್ರಸ್ತಾಪ ಮಾಡಿ, ನೀವು ಬೆಂಗಳೂರನ್ನು ರಾಜ್ಯದ ರಾಜಧಾನಿಯಾಗಿ ನೋಡಬೇಡಿ, ರಾಷ್ಟ್ರದ ರಾಜಧಾನಿಯಾಗಿ ನೋಡಿ. ಬೆಂಗಳೂರಿನಲ್ಲಿರುವ ಸಂಚಾರ ಹಾಗೂ ತ್ಯಾಜ್ಯ ವಿಲೇವಾರಿ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತ್ಯಾಜ್ಯ ವಿಲೇವಾರಿ ವಿಚಾರವಾಗಿ ಯಾರಾದರೂ ಸಂಶೋಧನೆ ಮಾಡಲು ಆಸಕ್ತರಿದ್ದರೆ, ನಾವು ಅವರಿಗೆ ಅವಕಾಶ ಕಲ್ಪಿಸಿಕೊಡುತ್ತೇವೆ. ಈ ವಿಚಾರದಲ್ಲಿ ನೀವು ಬೆಂಬಲ ನೀಡಿ, ನಮಗೆ ಮಾರ್ಗದರ್ಶನ ನೀಡಬೇಕು.
ಇದು ಬೆಂಗಳೂರಿನ ದೊಡ್ಡ ಸಮಸ್ಯೆಯಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಾವು 1.50 ಲಕ್ಷ ಕೋಟಿ ಮೀಸಲಿಟ್ಟಿದ್ದು, 40 ಸಾವಿರ ಕೋಟಿ ವೆಚ್ಚದಲ್ಲಿ 50 ಕಿ.ಮೀ ಉದ್ದದ 2 ಟನಲ್ ರಸ್ತೆ, 110 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್, 44 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಿಸುತ್ತಿದ್ದೇವೆ. ಬೆಂಗಳೂರಿನ ಬಗ್ಗೆ ನಿಮಗೆ ಗೊತ್ತಿದೆ. ಇಲ್ಲಿನ ಪ್ರತಿಭೆ, ಹವಾಮಾನ, ಪ್ರಗತಿ ಬಗ್ಗೆ ನಿಮಗೆ ಗೊತ್ತೇ ಇದೆ. ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದಿದ್ದರು. ಬೆಂಗಳೂರಿನ ಬಗ್ಗೆ ಅವರು ಆಡಿದ್ದ ಮಾತುಗಳನ್ನು ನೀವು ಕೇಳಿದ್ದೀರಿ. ಬೆಂಗಳೂರು ಜಾಗತಿಕ ನಗರ ಎಂಬುದನ್ನು ಅವರೂ ಒಪ್ಪಿದ್ದಾರೆ. ಇಡೀ ವಿಶ್ವ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ ಎಂದು ಹೇಳಿದ್ದಾರೆ ಎಂದರು.
ಐಟಿ, ಬಿಟಿ, ಸಂಶೋಧನೆ ಸೇರಿದಂತೆ ವ್ಯಾಪಾರ ಉದ್ದೇಶಿತ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಗಳು ಬೆಂಗಳೂರಿನಲ್ಲಿವೆ. ಸುಮಾರು 7 ಸಾವಿರ ವಿದೇಶಿ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಓದುತ್ತಿದ್ದಾರೆ. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಮೊದಲ ಬಾರಿಗೆ ಜಾರಿಗೆ ತಂದ ಐಟಿ ನೀತಿ ಇದಕ್ಕೆ ಕಾರಣ. ಆಗ ನಗರಾಭಿವೃದ್ಧಿ ಸಚಿವನಾಗಿ ನಾನು ಭಾರತದ ರಾಯಭಾರಿಗಳನ್ನು ಭೇಟಿ ಮಾಡಿದಾಗ ನಮ್ಮಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಶಾಲೆಗಳು ಬೇಕು ಎಂದು ಕೇಳಿದ್ದೆ. ಈಗ ನಮ್ಮಲ್ಲಿ ಸುಮಾರು 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಶಾಲೆಗಳಿವೆ ಎಂದು ಹೇಳಿದರು.
ನಾವೆಲ್ಲರೂ ಸೇರಿ ಕರ್ನಾಟಕವನ್ನು ಮುನ್ನಡೆಸೋಣ. ನೀವು ಬಲಿಷ್ಠರಾದಷ್ಟು ನಾವು ಬಲಿಷ್ಠವಾಗುತ್ತೇವೆ. ನೀವು ದುರ್ಬಲರಾದರೆ, ನಾವು ದುರ್ಬಲವಾಗುತ್ತೇವೆ ಎಂದು ನಾವು ನಂಬಿದ್ದೇವೆ. ನಿಮ್ಮ ಸಹಕಾರದಿಂದ ಸರ್ಕಾರ ರಾಜ್ಯ ಮುನ್ನಡೆಯಲು ಸಾಧ್ಯ. ದೇಶಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವುದು ಕರ್ನಾಟಕ. ಕೇಂದ್ರ ಸರ್ಕಾರ ಕೇವಲ 13% ಮಾತ್ರ ನಮಗೆ ತೆರಿಗೆ ಪಾಲು ನೀಡುತ್ತಿದೆ. ಇದರ ಬದಲು 25-30% ಪಾಲು ನೀಡಬೇಕು ಎಂದು ಪ್ರಧಾನಮಂತ್ರಿಗಳಿಗೆ ಪ್ರಸ್ತಾವನೆ ನೀಡಿದ್ದೇವೆ" ಎಂದು ತಿಳಿಸಿದರು.












Click it and Unblock the Notifications