ಬಂಡೆಗೆ ಪ್ರತಿಷ್ಠೆಯಾದ ಕನಕಪುರ: ಕ್ಷೇತ್ರದ ಜನತೆಗೆ ಡಬಲ್ ಗುಡ್ ನ್ಯೂಸ್ ಕೊಟ್ಟ ಡಿ ಕೆ ಶಿವಕುಮಾರ್
ಕನಕಪುರ, ಜುಲೈ21: 2024 ರ ಲೋಕಸಭಾ ಚುನಾವಣೆಯಲ್ಲಿ ಡಿ ಕೆ ಸುರೇಶ್ ಹೀನಾಯವಾಗಿ ಸೋತ ಬಳಿಕ ಡಿ ಕೆ ಶಿವಕುಮಾರ್ ರಾಮನಗರ ಜಿಲ್ಲೆ ಸೇರಿದಂತೆ ಕನಕಪುರ ಕ್ಷೇತ್ರವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಬೆಂಗಳೂರು ಮಾದರಿಯಲ್ಲಿ ಸಂಗಮದ ಬಳಿ ಕಾವೇರಿ ನೀರನ್ನು ಪಂಪ್ ಮಾಡಿ ಕ್ಷೇತ್ರದ 250 ಕ್ಕೂ ಹೆಚ್ಚು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಯೋಜನೆ ರೂಪಿಸಲಾಗುತ್ತಿದೆ. ಜೊತೆಗೆ ಕ್ಷೇತ್ರದ ಕೆರೆಗಳಿಗೂ ನೀರನ್ನು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕನಕಪುರದ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿ, ನೀರಾವರಿ ಸಚಿವನಾದ ನಾನು ನನ್ನ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇನೆ. ಶಿಂಷಾದಿಂದ ಸಾತನೂರು ಹೋಬಳಿಗೆ ನೀರು ತರಲಾಗುತ್ತಿದೆ. ಅರ್ಕಾವತಿಯಿಂದ ಕಸಬಾ ಹೋಬಳಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಹೊಸದುರ್ಗ ಭಾಗದ ಕೆರೆಗಳನ್ನು ಕಾವೇರಿ ನದಿ ನೀರಿನಿಂದ ತುಂಬಿಸಲಾಗುವುದು ಎಂದು ಹೇಳಿದರು.

ಈ ಅವಧಿಯಲ್ಲೇ ಮೆಡಿಕಲ್ ಕಾಲೇಜಿಗೆ ಮುಕ್ತಿ ನೀಡಲಾಗುವುದು. ಕ್ಷೇತ್ರದಲ್ಲಿ ಎರಡು ಮೆಡಿಕಲ್ ಕಾಲೇಜು ಇರಲಿದೆ. ಕನಕಪುರದಲ್ಲಿ ಇನ್ಫೋಸಿಸ್ ಸಹಾಯದಲ್ಲಿ ತಾಯಿ ಮಗು ಆಸ್ಪತ್ರೆ ತೆರೆಯಲಾಗಿದೆ. ಇಂತಹ ಸರ್ಕಾರಿ ಆಸ್ಪತ್ರೆ ಬೇರೆ ಎಲ್ಲಾದರೂ ಇದೆಯೇ? ನಾವು ಮಾಡುತ್ತಿರುವ ಕೆಲಸ ದೇಶಕ್ಕೆ ಮಾದರಿ. ನಾವು ಶುದ್ಧ ಕುಡಿಯುವ ನೀರಿನ ಘಟಕ, ಸೋಲಾರ್ ಪಾರ್ಕ್ ಮಾಡಿದೆವು. ನಂತರ ಈ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಮ್ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಅವರು ಚಿಕ್ಕಬಳ್ಳಾಪುರಕ್ಕೆ ಹಾಕಿಬಿಟ್ಟರು. ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾದರೆ ನೀವುಗಳು ಯಾರೂ ಬೆಂಗಳೂರಿಗೆ ಹೋಗಬೇಕಿಲ್ಲ ಎಂದು ತಿಳಿಸಿದರು.
ಆನೆಗಳ ಹಾವಳಿ ತಡೆಯಲು ಸುಮಾರು 50 ಕಿಮೀ ಉದ್ದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಮಿಕ್ಕ 50 ಕಿಮೀ ಅನ್ನುಶೀಘ್ರವೇ ಪೂರ್ಣಗೊಳಿಸಿ ರೈತರ ಪರವಾಗಿ ಕೆಲಸ ಮಾಡುತ್ತೇವೆ. ನಮ್ಮ ಕ್ಷೇತ್ರದಲ್ಲಿ ಇಬ್ಬರು ರೈತರಂತೆ ಟ್ರಾನ್ಸ್ ಫಾರ್ಮರ್ ನೀಡಿ ವಿದ್ಯುತ್ ಕ್ರಾಂತಿ ಮಾಡಿದ್ದೇವೆ. 25 ಸಾವಿರ ರೈತರಿಗೆ ಇದರಿಂದ ಉಪಯೋಗವಾಗಿದೆ. ಪಕ್ಕದ ಯಾವುದೇ ಕ್ಷೇತ್ರದಲ್ಲಿಯೂ ಈ ಸೌಲಭ್ಯವಿಲ್ಲ. ಹುಣಸನಹಳ್ಳಿ ಸೇರಿದಂತೆ ದೊಡ್ಡಾಲಹಳ್ಳಿಯಲ್ಲಿ ಸೋಲರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಹಗಲು ಹೊತ್ತಿನಲ್ಲಿಯೇ ರೈತರಿಗೆ ವಿದ್ಯುತ್ ನೀಡಲಾಗುವುದು ಎಂದು ಹೇಳಿದರು.
ಕ್ಷೇತ್ರದ 60- 70 ಸಾವಿರ ಜನ ಬೆಂಗಳೂರನ್ನು ವಿದ್ಯಾಭ್ಯಾಸ, ಕೆಲಸದ ನಿಮಿತ್ತ ನಗರ ಪ್ರದೇಶ ಸೇರಿದ್ದಾರೆ. ನನ್ನನ್ನು ನಮ್ಮ ತಂದೆ ಬೆಂಗಳೂರು ಸೇರಿಸಿದ್ದರು. ಆದರೆ ನಮ್ಮ ಜನರು ಪಾನಿಪುರಿ, ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಊರಿಗೆ ಒಂದೆರಡು ಜನ ಉದ್ಧಾರವಾಗಿದ್ದಾರೆ. ಆದರೆ ಹೆಚ್ಚಿನ ಜನರಿಗೆ ಉತ್ತಮ ಜೀವನ ನೀಡಬೇಕು ಎಂದು ನಾನು ಪಣತೊಟ್ಟಿದ್ದೇನೆ. ಅದಕ್ಕೆ ಕೆಪಿಎಸ್ ಶಾಲೆಗಳನ್ನು ಪ್ರಾರಂಭ ಮಾಡಲಾಗುತ್ತಿದೆ. ಕೋಡಿಹಳ್ಳಿಯಲ್ಲಿ 10 ಎಕರೆ, ದೊಡ್ಡ ಆಲಹಳ್ಳಿಯಲ್ಲಿ ಶಾಲೆಗಾಗಿ ನಮ್ಮ ಸ್ವಂತ ಭೂಮಿಯನ್ನು ನೀಡಿದ್ದೇನೆ ಎಂದರು.
ಸುರೇಶ್ ವಿರುದ್ಧ ದೇವೇಗೌಡರು ಅವರ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದರು. ಆನಂತರ ಕುಮಾರಸ್ವಾಮಿ ಮಗನ ವಿರುದ್ಧ ಸುರೇಶ್ ಅವರನ್ನು ನಿಲ್ಲಿಸಬೇಕು ಎಂದು ಒತ್ತಡ ತರಲಾಯಿತು. ಆನಂತರ ಬೆಳವಣಿಗೆಯಲ್ಲಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿದರು. ಅವರು ಜನರ ಆಶೀರ್ವಾದಿಂದ 22 ಸಾವಿರ ಮತಗಳ ಅಂತರದಿಂದ ಗೆದ್ದರು. ಬೆಂಗಳೂರು ದಕ್ಷಿಣ ಜಿಲ್ಲೆಯಿಂದ 4 ಜನ ಶಾಸಕರು ವಿಧಾನಸಭೆಯಲ್ಲಿದ್ದಾರೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ನಮ್ಮ ಜನ ಮೋಸ ಮಾಡಿಲ್ಲ. ನಮಗೆ ಬೆಂಗಳೂರಿನಲ್ಲಿ ಮೋಸ ಆಗಿದೆ. ನಮ್ಮ ಗ್ರಾಮೀಣ ಭಾಗದಲ್ಲಿ ನಮಗೆ ಮೋಸ ಆಗಿಲ್ಲ. ಬೇರೆ ಕಡೆ ವಾಲಿರುವವರಿಗೆ ಬುದ್ಧಿ ಹೇಳಿ. ಚುನಾವಣೆ ಸಮಯದಲ್ಲಿ ಅನೇಕರು ಬಂದು ತಲೆ ಕೆಡಿಸುವ ಪ್ರಯತ್ನ ಮಾಡುತ್ತಾರೆ. ನೀವು ಯಾವುದಕ್ಕೂ ಮಣಿಯಬಾರದು. ನಿಮ್ಮ ಹೆಣ ಹಾಗೂ ಪಲ್ಲಕ್ಕಿ ಹೊರುವವನು ನಾನು. ನನ್ನ ಹೆಣ, ಪಲ್ಲಕ್ಕಿ ಹೊರುವವರು ನೀವು. ನಿಮ್ಮ ಹಾಗೂ ನಮ್ಮ ಸಂಬಂಧ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ ಎಂದು ಹೇಳಿದರು.












Click it and Unblock the Notifications