ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಕಾಲದಲ್ಲಿ ಎಲ್ಲವನ್ನು ಹಾಳು ಮಾಡಲಾಗಿದೆ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ನವೆಂಬರ್ 26: ಶಾಸಕರು ಹೇಳಿದರು ಎಂಬ ಕಾರಣಕ್ಕೆ ಯೋಜನೆಗಳನ್ನು ನೀವುಗಳು ಕೂಡ ಬರೆದು ಕೊಡುತ್ತಿದ್ದೀರಿ. 5 ಕೋಟಿ ವರೆಗೂ ಯೋಜನೆಗಳಿಗೆ ನೀವೇ ಅನುಮತಿ ನೀಡಬಹುದು ಎಂಬ ಕಾರಣಕ್ಕೆ 4.99 ಕೋಟಿ ಎಂದು ಯೋಜನೆ ಅಂದಾಜು ಬರೆದು ಕೊಡುತ್ತಿದ್ದೀರಿ. ಈ ರೀತಿ ಅಂದಾಜು ಮಾಡಲು ನಿಮಗೆ ಹೇಳಿದವರು ಯಾರು? ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಕಾಲದಲ್ಲಿ ಎಲ್ಲವನ್ನು ಹಾಳು ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ವಿಕಾಸಸೌಧದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ ಕುರಿತ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳ ಕಾರ್ಯಾಗಾರವನ್ನು ಶಿವಕುಮಾರ್ ಅವರು ಮಾತನಾಡಿ, 21 ಸಾವಿರ ಕೋಟಿ ಘೋಷಣೆ ಮಾಡಿದ್ದು, ಅದರಲ್ಲಿ 16 ಸಾವಿರ ಕೋಟಿ ನೀಡಲಾಗಿದೆ. 5 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ಹಿಡಿದಿಟ್ಟುಕೊಂಡಿದೆ. ಆದರೆ 1 ಲಕ್ಷ ಕೋಟಿ ರೂ. ಮೊತ್ತದ ಕೆಲಸ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಹೇಗೆ ಸಾಧ್ಯ? ಹೊಸ ಯೋಜನೆ ಹೇಗೆ ಕೈಗೊಳ್ಳಬೇಕು? ನೀವುಗಳು ಅಂದಾಜು ಮಾಡುವಾಗ ಲೆಕ್ಕಾಚಾರ ಇರಬೇಕು. ನಾಳೆ ಹೆಚ್ಚುಕಮ್ಮಿಯಾದರೆ, ಈ ಯೋಜನೆ ಅಂದಾಜು ಮಾಡಿಕೊಟ್ಟ ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ.

ನೀವು ಬೇರೆಯವರನ್ನು ಮೆಚ್ಚಿಸಲು ಕೆಲಸ ಮಾಡಬೇಕಿ. ನಿಮ್ಮ ಆತ್ಮಸಾಕ್ಷಿ ಮೆಚ್ಚಿಸಲು ಕೆಲಸ ಮಾಡಿ. ನೀವು ಶಾಸಕರ ಒತ್ತಡಕ್ಕೆ ಮಣಿಯಬೇಡಿ. ಈಗ ಇರುವ ಯೋಜನೆಗಳನ್ನೇ ನಾವು ಪೂರ್ಣಗೊಳಿಸಬೇಕಿದೆ. ಕೆಲವೇ ದಿನಗಳಲ್ಲಿ ಮಂಡಳಿ ಸಭೆ ಇದ್ದು, 1 ಲಕ್ಷ ಕೋಟಿಯಷ್ಟು ಮನವಿ ಇದೆ. ಇಲಾಖೆಯಲ್ಲಿರುವುದೇ 16 ಸಾವಿರ ಕೋಟಿ, ಅದರಲ್ಲೂ ಹಳೇ ಯೋಜನೆ ಕಾಮಗಾರಿಗಳಿವೆ. ಈ ಪರಿಸ್ಥಿತಿಯಲ್ಲಿ ನಾನು ಯಾರಿಗೆ ಸಹಾಯ ಮಾಡಬೇಕು? ಈ ವಿಚಾರದಲ್ಲಿ ನೀವು ಜವಾಬ್ದಾರಿ ತೆಗೆದುಕೊಳ್ಳಬೇಕು.
ಎತ್ತಿನಹೊಳೆ ಯೋಜನೆ ನೀರು ಕೋಲಾರಕ್ಕೆ ಇನ್ನು ಹೋಗಿಲ್ಲ, ಈಗಾಗಲೇ ಶಾಸಕರುಗಳು 100, 150 ಕೋಟಿ ಮೊತ್ತದ ಯೋಜನೆಗಳನ್ನು ತರುತ್ತಿದ್ದಾರೆ. ಎಲ್ಲಾ ಅಣೆಕಟ್ಟುಗಳ ಗೇಟ್ ಗಳ ದುರಸ್ಥಿಗೆ ನಾವು ಮುಂದಾಗಿದ್ದೇವೆ. ಇದಕ್ಕಾಗಿ ಸಮಿತಿ ರಚಿಸಿ, ವರದಿ ಪಡೆಯಲಾಗಿದೆ. ಟಿಬಿ ಡ್ಯಾಂ ಗೇಟ್ ವಿಚಾರದಲ್ಲಿ ಇಂಜಿನಿಯರ್ ಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ. ವಿರೋಧ ಪಕ್ಷಗಳು ಅನೇಕ ಟೀಕೆ ಮಾಡಿದವು. ಕೆಟ್ಟ ಆಡಳಿತದಿಂದ ಈ ದುರಂತವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಅವರು ಏನಾದರೂ ಹೇಳಲಿ. ಆದರೆ ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನೀವೆಲ್ಲರೂ ಸೇರಿ ರೈತರು ಹಾಗೂ ಅವರ ಬೆಳೆಯನ್ನು ಉಳಿಸಿದ್ದೀರಿ.
ನನ್ನ ಅವಧಿಯಲ್ಲಿ ಈ ವಿಚಾರದಲ್ಲಿ ಸುಧಾರಣೆ ತರದಿದ್ದರೆ ಮುಂದೆ ಇದು ಸುಧಾರಣೆಯಾಗುವುದಿಲ್ಲ ಎಂದು ಗೊತ್ತಿದೆ. ಹೀಗಾಗಿ ವಿರೋಧ ಪಕ್ಷಗಳನ್ನು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಅನುಮತಿ ನೀಡಲಾಗುತ್ತಿದೆ. ಈ ಕಾರ್ಯಾಗಾರದಲ್ಲಿ ನೀವು ನೀಡುವ ವರದಿ ಅರ್ಥಪೂರ್ಣವಾಗಿ, ಸರಳವಾಗಿ ಜನರು, ಶಾಸಕರಿಗೆ ಅರ್ಥವಾಗುವಂತೆ ಇರಬೇಕು. ನೀರು ಬಳಕೆದಾರರ ಸಹಕಾರ ಸಂಘಕ್ಕೆ ಶಕ್ತಿ ತುಂಬಬೇಕು. ಇದಕ್ಕೆ ಶಕ್ತಿ ತುಂಬಿ ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತದಂತೆ ರೈತರಲ್ಲಿ ಅರಿವು ಮೂಡಿಸಬೇಕು. ಹಂತಹಂತವಾಗಿ ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ 2024 ಅನ್ನು ಜಾರಿಗೊಳಿಸಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಿರಾವರಿ ಇಲಾಖೆ ಇಂಜಿನಿಯರ್ ಗಳಿಗೆ ಮಾರ್ಗದರ್ಶನ ನೀಡಿದರು.
ಸಚಿವರಾದ ಹೆಚ್.ಕೆ ಪಾಟೀಲ್ ಅವರು ನೀರು ಬಳಕೆದಾರರ ಸಹಕಾರ ಸಂಘ ಆರಂಭಿಸಿದ್ದು, ಅದು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ಬಲಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಚರ್ಚಿಸಿ ಬಜೆಟ್ ನಲ್ಲಿ ಹಣ ಮೀಸಲಿಟ್ಟು, ವಾಲ್ಮಿ (ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ) ನೇತೃತ್ವದಲ್ಲಿ ಈ ಸಹಕಾರ ಸಂಘಗಳಿಗೆ ಜವಾಬ್ದಾರಿ ನೀಡಲಾಗುವುದು. ಈ ಸಂಘಗಳ ಸ್ವರೂಪದ ಜವಾಬ್ದಾರಿ ನಿಮಗೆ ನೀಡುತ್ತಿದ್ದೇವೆ. ಕೆರೆ ತುಂಬಿಸುವ ಯೋಜನೆಗಳಿಗೆ ಬಹಳಷ್ಟು ವೆಚ್ಚ ಮಾಡಲಾಗಿದೆ. ಕುಡಿಯುವ ಉದ್ದೇಶಕ್ಕೆ ತುಂಬಿಸುವ ನೀರನ್ನು ನೀರಾವರಿಗೆ ಬಳಸಿದರೆ ಈ ಯೋಜನೆ ಉದ್ದೇಶವೇನು? ಈ ಬಗ್ಗೆಯೂ ವ್ಯಾಪಕ ಚರ್ಚೆಯಾಗಬೇಕು.
ನೀರು ಬಳಕೆದಾರರ ಫೆಡರೇಷನ್ ಸ್ಥಾಪಿಸಬೇಕು. ಮುಂದಿನ ಎರಡು ಮೂರು ತಿಂಗಳಲ್ಲಿ ಇದರ ಬಗ್ಗೆ ನೀವು ಅವಲೋಕನ ಮಾಡಬೇಕು. ರೈತರಿಗೆ ನೀಡುವ ಉಚಿತ ವಿದ್ಯುತ್ ಗೆ 13 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ನೀರಾವರಿಗೆ ಸಂಪರ್ಕ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ನೀರಾವರಿ ಇಂಜಿನಿಯರ್ ಗಳು ಈ ತಿದ್ದುಪಡಿಯ ಸಂಪೂರ್ಣ ಮಾಹಿತಿ ನೀಡಿದ್ದೇವೆ.












Click it and Unblock the Notifications