ನನ್ನ, ನಿನ್ನ ಯುದ್ದ ಇನ್ನೇನಿದ್ದರೂ ರಣರಂಗದಲ್ಲಿ: ಡಿಕೆಶಿ ಓಪನ್ ಚಾಲೆಂಜ್
Recommended Video
ಬೆಂಗಳೂರು, ಜುಲೈ 23: ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಮೈತ್ರಿ ಪಕ್ಷಗಳ ಶಾಸಕರ ಸಮಸ್ಯೆಗಳು, ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಸೈ ಎನಿಸಿಕೊಂಡಿದ್ದ ಡಿ ಕೆ ಶಿವಕುಮಾರ್, ಮತ್ತೊಮ್ಮೆ ತಮ್ಮ ಟ್ರಬಲ್ ಶೂಟರ್ ಬಿರುದನ್ನು ರುಜುವಾತು ಪಡಿಸಲು ಸದ್ಯದ ಮಟ್ಟಿಗೆ ವಿಫಲರಾಗಿದ್ದಾರೆ.
ಅತೃಪ್ತ ಶಾಸಕರನ್ನು ಮನವೊಲಿಸಲು ಮುಂಬೈಗೆ ಹಾರಿದ್ದು, ಬೆಳ್ಳಂಬೆಳಗ್ಗೆ ಎಂಟಿಬಿ ನಾಗರಾಜ್ ಮನೆಯಲ್ಲಿ ಠಿಕಾಣಿ ಹೂಡಿದ್ದು, ಈ ಎರಡೂ ರಾಜಕೀಯ ಚದುರಂಗದಾಟದಲ್ಲಿ ಮೇಲುಗೈ ಸಾಧಿಸಲು ವಿಫಲರಾಗಿದ್ದು, ಬಹುಷಃ ಇನ್ನೂ ಡಿಕೆಶಿ ಮನಸ್ಸನ್ನು ಕೊರೆಯುತ್ತಿದ್ದಂತೆ ಕಾಣುತ್ತಿದೆ.
ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ಸದನದಲ್ಲಿ ಮಾತನಾಡುತ್ತಿದ್ದ ಡಿ ಕೆ ಶಿವಕುಮಾರ್, ಆಕ್ರೋಶಭರಿತರಾಗಿ, ಭಾವೋದ್ವೇಗಕ್ಕೊಳಗಾಗಿ ಮಾತನಾಡುತ್ತಾ, ನನ್ನ ನಿನ್ನ ಯುದ್ದ ಇನ್ನೇನಿದ್ದರೂ ರಣರಂಗದಲ್ಲಿ ಎಂದು ಹೇಳಿದರು.

ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಡಿಕೆಶಿ, ಅಧ್ಯಕ್ಷರೇ... ನನ್ನದೇನು ಮುಚ್ಚುಮರೆಯಿಲ್ಲದ ರಾಜಕೀಯ. ನಾನು, ಡಾಕ್ಟರ್ (ಪರಮೇಶ್ವರ್) ಮತ್ತು ಕೃಷ್ಣ ಭೈರೇಗೌಡ್ರು ಎಂಟಿಬಿ ಮನೆಗೆ ಹೋಗಿದ್ದೆವು.
ಅವರ ಮನವೊಲಿಸಿ ಸಿದ್ದರಾಮಯ್ಯನವರ ಬಳಿಗೆ ಕರೆದುಕೊಂಡು ಬಂದೆವು. ಮಾಧ್ಯಮವರ ಮುಂದೆ ಒಂದು ಮಾತನಾಡಿದ ಎಂಟಿಬಿ, ಮರುದಿನ ಮುಂಬೈಗೆ ವಿಮಾನ ಹತ್ತಿದರು ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದರು.
ನನ್ನ ಮತ್ತು ಎಂಟಿಬಿ ಯುದ್ದ ಇನ್ನೇನಿದ್ದರೂ ರಣರಂಗದಲ್ಲಿ, ಅಂದರೆ ರಾಜಕೀಯ ರಣರಂಗದಲ್ಲಿ ಎಂದು, ಡಿ ಕೆ ಶಿವಕುಮಾರ್ ಹೇಳುವ ಮೂಲಕ, ಮುಂದಿನ ದಿನಗಳಲ್ಲಿ ಹೊಸಕೋಟೆಯಲ್ಲಿ ರಾಜಕೀಯ ಮೇಲಾಟ ನಡೆಯುವ ಸಾಧ್ಯತೆಯ ಬಗ್ಗೆ ಸೂಕ್ಷ್ಮ ಸುಳಿವನ್ನು ನೀಡಿದರು.












Click it and Unblock the Notifications