'ಡಿಕೆಶಿ ಐವರು ಶಾಸಕರಿಗೆ ಕಾಂಗ್ರೆಸ್ ಸೇರಲು ಆಹ್ವಾನಿಸಿದ್ದಾರೆ'
ರಾಮನಗರ, ಫೆ.3 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಶಾಸಕರ ಭೇಟಿಯ ರಹಸ್ಯ ಬಯಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿದ್ದಾರೆ ಎಂದು ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
ಮಾಗಡಿ ತಾಲೂಕಿನ ಸಾವನದುರ್ಗದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು. ಐವರು ಜೆಡಿಎಸ್ ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಅವರು ಆಹ್ವಾನಿಸಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ. [ಶಿವಕುಮಾರ್ ಜತೆ ಜೆಡಿಎಸ್ ನಾಯಕರ ರಹಸ್ಯ ಚರ್ಚೆ]

ಅವರು ಪಕ್ಷ ಸೇರಲು ಆಹ್ವಾನ ನೀಡಿದ್ದಾರೆ. ಆದರೆ, ಸದ್ಯಕ್ಕೆ ಜೆಡಿಎಸ್ ತೊರೆಯುವುದಿಲ್ಲ. ಚುನಾವಣೆ ವೇಳೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಬಾಲಕೃಷ್ಣ ಹೇಳಿದರು. ಕೂಸು ಹುಟ್ಟುವುದಕ್ಕೂ ಮುಂಚೆ ಕುಲಾವಿ ಏಕೆ? ಪಕ್ಷ ಸೇರುವುದು, ಬಿಡುವ ಬಗ್ಗೆ ಚುನಾವಣೆ ವೇಳೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. [ಆಪರೇಷನ್ ಹಸ್ತ ಮಾಡುವ ಅಗತ್ಯವಿಲ್ಲ ಅಂದ್ರು ಸಿದ್ದರಾಮಯ್ಯ]
ಭಾನುವಾರ ಮಧ್ಯಾಹ್ನ ಮಾಗಡಿ ಬಳಿಯ ಸಾವನದುರ್ಗ ಬೆಟ್ಟದಲ್ಲಿ ನಾಗಮಂಗಲದ ಜೆಡಿಎಸ್ ಶಾಸಕ ಎನ್. ಚಲುವರಾಯಸ್ವಾಮಿ, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್, ಮಾಗಡಿ ಶಾಸಕ ಬಾಲಕೃಷ್ಣ ಮುಂತಾದವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು.

ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಶಾಸಕ ಚಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್, ಮಾಗಡಿ ಬಾಲಕೃಷ್ಣ ಮುಂತಾದವರು ಡಿ.ಕೆ.ಶಿವಕುಮಾರ್ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿತ್ತು.
ಆದರೆ, ಸಿಎಂ ಸಿದ್ದರಾಮಯ್ಯ ಅವರು 'ಆಪರೇಷನ್ ಹಸ್ತ ಮಾಡುವ ಅನಿವಾರ್ಯತೆ ನಮಗಿಲ್ಲ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಚಿವರನ್ನು ಶಾಸಕರು ಭೇಟಿಯಾಗಿದ್ದಾರೆ. ಜೆಡಿಎಸ್ ಶಾಸಕರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ಎಂದು ಹೇಳಿದ್ದರು.












Click it and Unblock the Notifications