ಒಡೆದಾಳುವುದೇ ಕಾಂಗ್ರೆಸ್‌ನ ಪ್ರಮುಖ ಅಸ್ತ್ರ: ಇಂಡಿಯಾ ಒಕ್ಕೂಟದ ವಿರುದ್ಧ ಬಿಜೆಪಿ ವಾಗ್ದಾಳಿ
ಬೆಂಗಳೂರು, ಸೆಪ್ಟೆಂಬರ್ 16: ವಿರೋಧ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಮಣಿಸಲು ರಚಿಸಿಕೊಂಡಿರುವ ಇಂಡಿಯಾ ಒಕ್ಕೂಟದ ಕುರಿತು ವಾಗ್ದಾಳಿ ನಡೆಸಿರುವ ಬಿಜೆಪಿ ಒಡೆದು ಆಳುವುದೇ ಕಾಂಗ್ರೆಸ್‌ನ ಪ್ರಮುಖ ಅಸ್ತ್ರ ಎಂದು ಹೇಳಿದೆ.
ಈ ಕುರಿತು ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಬ್ರಿಟಿಷರು ಆರಂಭಿಸಿದ "ಒಡೆದಾಳುವ ನೀತಿಯನ್ನು" ಭಾರತದಲ್ಲಿ ಮುಂದುವರೆಸುತ್ತಿರುವುದು ಕಾಂಗ್ರೆಸ್. ಮುತ್ತಾತ ಜವಾಹರಲಾಲ್ ನೆಹರುರವರಿಂದ ಹಿಡಿದು ಮೊಮ್ಮಗ ರಾಹುಲ್ ಗಾಂಧಿಯವರೆಗೂ ಒಡೆದಾಳುವುದೇ ಕಾಂಗ್ರೆಸ್‌ನ ಪ್ರಮುಖ ಅಸ್ತ್ರ ಎಂದು ಹೇಳಿದೆ.

ಬೇಧ-ಭಾವ ನಮ್ಮಲ್ಲಿಲ್ಲ ಎಂದು ಹೇಳುತ್ತಾ, ಒಳಗೊಳಗೆ ರಾಜ್ಯ, ಭಾಷೆ, ಪ್ರಾದೇಶಿಕತೆ, ಜಾತಿ, ಧರ್ಮಗಳ ಹೆಸರಿನಲ್ಲಿ ದೇಶ ಹಾಗೂ ಮನಸ್ಸುಗಳನ್ನು ಒಡೆಯುವ ಪ್ರಯತ್ನವನ್ನು ರಾಹುಲ್ ಗಾಂಧಿಯವರ ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದೆ. ಸೂಟು-ಬೂಟಿನಿಂದ ಆರಂಭವಾಗಿ, ಜುಬ್ಬಾ ಪೈಜಾಮಕ್ಕೆ ಬಂದು, ನಂತರ ಟೀ ಶರ್ಟ್ ಧರಿಸಿದರೂ ರಾಹುಲ್ ಗಾಂಧಿಯವರಿಗೆ ಭಾರತದ ಒಕ್ಕೂಟ ವ್ಯವಸ್ಥೆಯ ಘನತೆ ತಿಳಿದಿಲ್ಲ.
ವೇಷಭೂಷಣದ ಜೊತೆ ತಮ್ಮ ಯೋಚನಾ ಲಹರಿಯನ್ನು ಕೊಂಚ ಬದಲಿಸಿಕೊಂಡಿದ್ದರೆ, ಬಹುಷಃ ಭಾರತದ ಭವ್ಯ ಪರಂಪರೆಯ ಪರಿಚಯವಾಗುತ್ತಿತ್ತು. ಆದರೆ ತುಕ್ಡೆ ಗ್ಯಾಂಗಿನ ಜೊತೆಗಿರುವ ಆಪ್ತ ಸ್ನೇಹವು ರಾಹುಲ್ ಗಾಂಧಿಯವರಿಗೆ ಹೋದಲ್ಲಿ, ಬಂದಲ್ಲಿ ಸದಾ ಭಾರತವನ್ನು ವಿಭಜಿಸುವ, ಅವಹೇಳನಗೈಯುವ ದುರ್ಬುದ್ಧಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅದು ಆರೋಪಿಸಿದೆ.
ಕುಟುಂಬ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ರಾಹುಲ್ ಗಾಂಧಿಯವರು, ಭಾರತವನ್ನು ರಾಜಮನೆತನ ಎಂದು ಭಾವಿಸಬೇಡಿ ಎಂದು ಹೇಳುವುದೇ ಅತ್ಯಂತ ಹಾಸ್ಯಾಸ್ಪದ. ಅಭಿಪ್ರಾಯ ಸ್ವಾತಂತ್ರವಿಲ್ಲದ ಏಕೈಕ ಪಕ್ಷ ಕಾಂಗ್ರೆಸ್. ಇಂತಹವರಿಗೆ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಪ್ರಶ್ನಿಸಲು ಯಾವ ನೈತಿಕತೆ ಸಹ ಇಲ್ಲ.
ಬ್ರಿಟಿಷರು ಆರಂಭಿಸಿದ “ಒಡೆದಾಳುವ ನೀತಿಯನ್ನು” ಭಾರತದಲ್ಲಿ ಮುಂದುವರೆಸುತ್ತಿರುವುದು ಕಾಂಗ್ರೆಸ್. ಮುತ್ತಾತ ಜವಾಹರಲಾಲ್ ನೆಹರುರವರಿಂದ ಹಿಡಿದು ಮೊಮ್ಮಗ ರಾಹುಲ್ ಗಾಂಧಿಯವರೆಗೂ ಒಡೆದಾಳುವುದೇ ಕಾಂಗ್ರೆಸ್‌ನ ಪ್ರಮುಖ ಅಸ್ತ್ರ.
— BJP Karnataka (@BJP4Karnataka) September 16, 2023
ಬೇಧ-ಭಾವ ನಮ್ಮಲ್ಲಿಲ್ಲ ಎಂದು ಹೇಳುತ್ತಾ, ಒಳಗೊಳಗೆ ರಾಜ್ಯ, ಭಾಷೆ, ಪ್ರಾದೇಶಿಕತೆ, ಜಾತಿ, ಧರ್ಮಗಳ…
ಭಾರತದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿ, ಭಾರತೀಯರೆಲ್ಲರೂ ಒಂದೇ ಎಂದು ಹೇಳಿದರೆ, ಅದನ್ನು ಸಹ ರಾಹುಲ್ ಗಾಂಧಿಯವರು ಸಹಿಸುವುದಿಲ್ಲ. ಬರೆದುಕೊಟ್ಟ ಭಾಷಣವನ್ನು ಸಹ ಸರಿಯಾಗಿ ಹೇಳಲು ಬಾರದ ಎಡವಟ್ಟಣ್ಣಯ್ಯ ಈ ರಾಹುಲ್ ಗಾಂಧಿಯವರು.
ತಮಿಳುನಾಡಿಗೆ ಹೋಗಿ ಬೇರೆ ರಾಜ್ಯಗಳನ್ನು ಹೋಲಿಸುವುದು, ಈಶಾನ್ಯ ಭಾರತಕ್ಕೆ ಹೋದಾಗ ಭಾರತವೇ ಬೇರೆ, ಈಶಾನ್ಯ ಭಾರತವೇ ಬೇರೆ ಎಂದು ಅಲ್ಲಿನ ಜನರನ್ನು ಎತ್ತಿ ಕಟ್ಟುವುದು, ಉತ್ತರ ಭಾರತ, ದಕ್ಷಿಣ ಭಾರತ ಎಂಬ ಬೇಧ-ಭಾವ ಮಾಡುವುದು, ಇವೆಲ್ಲವೂ ರಾಹುಲ್ ಗಾಂಧಿಯವರು ದಶಕಗಳಿಂದ ಮಾಡಿಕೊಂಡು ಬರುತ್ತಿರುವ ಒಡೆದಾಳುವ ರಾಜಕೀಯದ ಸ್ಯಾಂಪಲ್‌ಗಳು.
ಇನ್ನು ಜಾತಿ, ಧರ್ಮದ ವಿಚಾರದಲ್ಲಿ ಪಕ್ಕಾ ಅವಕಾಶವಾದಿಯಾಗಿರುವ ರಾಹುಲ್ ಗಾಂಧಿಯವರು, ಚುನಾವಣೆ ಸಮಯದಲ್ಲಿ ಮಾತ್ರ ಹಿಂದೂವಾಗಿ ನೂರೆಂಟು ವೇಷ ತೊಡುತ್ತಾರೆ. ಚುನಾವಣೆ ಮುಗಿದ ಬಳಿಕ ಆ ವೇಷಗಳಿಗೆ ಗುಡ್ ಬೈ ಹೇಳಿ, ಮತ್ತೊಮ್ಮೆ ಹಿಂದೂ ವೇಷವನ್ನು ತೊಡುವುದು ಯಾವುದಾದರೂ ಚುನಾವಣೆ ಬಂದರೆ ಮಾತ್ರ.
ರಾಹುಲ್ ಗಾಂಧಿಯವರ ಅತ್ಯಂತ ಆಪ್ತ ಪಕ್ಷವಾಗಿರುವ ಡಿ.ಎಂ.ಕೆ ಯ ನಾಯಕರು ಕಳೆದ ಹದಿನೈದು ದಿನಗಳಿಂದ ಸನಾತನ ಹಿಂದೂ ಧರ್ಮದ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆಗಳನ್ನು ಸ್ಪರ್ಧೆಗೆ ಬಿದ್ದವರಂತೆ ನೀಡುತ್ತಿದ್ದಾರೆ. ಆದರೆ ಚುನಾವಣಾ ಹಿಂದೂ ರಾಹುಲ್ ಗಾಂಧಿಯವರು ಈ ಬಗ್ಗೆ ತುಟಿಕ್ ಪಿಟಿಕ್ ಅಂದಿಲ್ಲ. ಕೊನೆ ಪಕ್ಷ ಡಿ.ಎಂ.ಕೆಯವರ ಹೇಳಿಕೆಯನ್ನು ಖಂಡಿಸುವ ಟ್ವೀಟ್ ಸಹ ಮಾಡಿಲ್ಲ. ಇದು ರಾಹುಲ್ ಗಾಂಧಿಯವರಿಗೆ ಹಿಂದೂ ಧರ್ಮದ ಮೇಲಿರುವ ಅಸಲಿ ಗೌರವ.
ಪದೇ ಪದೇ ವಿದೇಶಗಳಿಗೆ ತೆರಳುವ ರಾಹುಲ್ ಗಾಂಧಿಯವರು, ಅಲ್ಲಿ ಭಾರತವನ್ನು ದ್ವೇಷಿಸುವ ಮನಸ್ಥಿತಿಯವರೊಂದಿಗೆ ಸೇರಿಕೊಂಡು, ಭಾರತವನ್ನು ವಿರೋಧಿಸುವ ಟೂಲ್ ಕಿಟ್‌ನ ಪ್ರಮುಖ ಅಂಗವಾಗಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿ ಎಂದು ತಿಳಿಸಿದೆ.












Click it and Unblock the Notifications