ಜುಲೈ 2 ಕೊರೊನಾ ವೈರಸ್ ಅಪ್ ಡೇಟ್; ಆರು ಜಿಲ್ಲೆಗಳ ವರದಿ...
ಬೆಂಗಳೂರು, ಜುಲೈ 2: ಕರ್ನಾಟಕದಲ್ಲಿ ಇಂದು ಒಂದೇ ದಿನ 1502 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 18,016ಕ್ಕೆ ಏರಿಕೆಯಾಗಿದೆ.
Recommended Video
ಇದುವರೆಗೂ ಮಹಾಮಾರಿ ಕೊರೊನಾ ವೈರಸ್ ಗೆ 272 ಮಂದಿ ಬಲಿಯಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಹೊಸದಾಗಿ 1502 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇಂದು 19 ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 889, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 90 ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕದ ಆರು ಜಿಲ್ಲೆಗಳ ಕೊರೊನಾ ವೈರಸ್ ಪ್ರಕರಣಗಳ ಅಪ್ ಡೇಟ್ ಇಲ್ಲಿದೆ...

ಬಳ್ಳಾರಿಯಲ್ಲಿ ಇಂದು 89 ಕೇಸ್; ನಾಲ್ವರ ಸಾವು
ಬಳ್ಳಾರಿಯಲ್ಲಿ ಇಂದು 89 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1019ಕ್ಕೆ ಏರಿದೆ. ಜೊತೆಗೆ ಇಂದು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಇದುವರೆಗೆ 475 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 511 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸದ ಹಿನ್ನೆಲೆಯಲ್ಲಿ ನಾಳೆಯಿಂದ ಒಂದು ವಾರದವರೆಗೆ ಬಳ್ಳಾರಿ ನಗರದಲ್ಲಿ ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟುಗಳ ಬಂದ್ ಗೆ ಬಳ್ಳಾರಿ ವರ್ತಕರ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾಳೆಯಿಂದ ಮುಂಜಾನೆ ಏಳು ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆವರೆಗೆ ಅಗತ್ಯ ಸೇವೆಯ ವಾಣಿಜ್ಯ ವಹಿವಾಟು ನಡೆಸಲು ನಿರ್ಧರಿಸಲಾಗಿದೆ.
ಉತ್ತರ ಕನ್ನಡದಲ್ಲಿ 17 ಹೊಸ ಪ್ರಕರಣ
ಜಿಲ್ಲೆಯಲ್ಲಿ ಇಂದು 17 ಹೊಸ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 293ಕ್ಕೆ ತಲುಪಿದೆ. ಭಟ್ಕಳದಲ್ಲಿ 11, ಕುಮಟಾ, ಹಳಿಯಾಳದಲ್ಲಿ ತಲಾ ಎರಡು, ಅಂಕೋಲಾ, ಮುಂಡಗೋಡದಲ್ಲಿ ತಲಾ ಒಂದು ಪ್ರಕರಣ ಇಂದು ದೃಢಪಟ್ಟಿದೆ. ಭಟ್ಕಳ ಮೂಲದ ಓರ್ವ ವೃದ್ಧ ಮಂಗಳೂರಿನಲ್ಲಿ ಮೃತಪಟ್ಟರೆ, ಯಲ್ಲಾಪುರದಲ್ಲಿ ಒಂದು ಸಾವಾಗಿದೆ. 143 ಮಂದಿ ಈಗಾಗಲೇ ಗುಣಮುಖರಾಗಿದ್ದು, ಸಕ್ರಿಯವಾಗಿ 148 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

ಉಡುಪಿಯಲ್ಲಿ ಇಂದು 14 ಕೊರೊನಾ ವೈರಸ್ ಪ್ರಕರಣ
ಉಡುಪಿ ಜಿಲ್ಲೆಯಲ್ಲಿ ಇಂದು 14 ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಂದ ನಾಲ್ವರಲ್ಲಿ, ಕೇರಳ ರಾಜ್ಯದಿಂದ ಬಂದ ಒಬ್ಬರಲ್ಲಿ, ಬೆಂಗಳೂರಿಂದ ಬಂದ ನಾಲ್ವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಉಡುಪಿ ಜಿಲ್ಲೆಯ ಐವರಲ್ಲಿ ಕೊರೊನಾ ದೃಢವಾಗಿದೆ. ಉಡುಪಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 1242ಕ್ಕೆ ಏರಿಕೆಯಾಗಿದೆ. ಇಂದು 21 ಜನ ಬಿಡುಗಡೆಯಾಗಿದ್ದಾರೆ.

ಕೋಲಾರದಲ್ಲಿ ವೈದ್ಯ ದಂಪತಿಗೆ ಕೊರೊನಾ
ಕೋಲಾರದಲ್ಲಿ ವೈದ್ಯ ದಂಪತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ನಿನ್ನೆ ಪತಿಗೆ ಕೊರೊನಾ ದೃಢಪಟ್ಟಿದ್ದು, ಇಂದು ಪತ್ನಿಗೆ ಪಾಸಿಟಿವ್ ದೃಢಪಟ್ಟಿದೆ. ದಂಪತಿ ಸರ್ಕಾರಿ ಆಸ್ಪತ್ರೆಯ ವೈದ್ಯರು. 42 ವರ್ಷದ ಪತಿ ಜಿಲ್ಲಾ ಕೋವಿಡ್-19 ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. 36 ವರ್ಷದ ಪತ್ನಿ ಮಾಲೂರು ತಾಲೂಕಿನ D.N ದೊಡ್ಡಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆ. ಕೋಲಾರ ಜಿಲ್ಲೆ ಮಾಲೂರಿನಲ್ಲಿ ಕುಟುಂಬ ವಾಸವಿತ್ತು. ಈ ವೈದ್ಯ ದಂಪತಿಯನ್ನು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗದಲ್ಲಿ ಕೊರೊನಾ ಸೋಂಕಿಗೆ ಮೂರನೇ ಬಲಿ
ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ವರ್ಷದ ಶಿಕ್ಷಕರೊಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಮೃತಪಟ್ಟ ಶಿಕ್ಷಕರು ಕಡೂರು ಮೂಲದವರು ಎನ್ನಲಾಗಿದೆ. ಶಿಕ್ಷಕರಿಗೆ ಅನಾರೋಗ್ಯ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು ಕೂಡಲೇ ಅವರನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

ರಾಮನಗರದಲ್ಲಿ ಸರ್ಕಾರಿ ವೈದ್ಯರಿಗೆ ಸೋಂಕು, ಆತಂಕದಲ್ಲಿ ಜನ
ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ನಗರದ ವೈದ್ಯರೊಬ್ಬರು ತುತ್ತಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಗೆ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. 300ಕ್ಕೂ ಅಧಿಕ ಮಂದಿ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಕಳೆದ 10 ದಿನಗಳಿಂದ ಸೋಂಕಿತ ವೈದ್ಯರ ಪತ್ನಿ ಮಾಲೀಕತ್ವದ ನರ್ಸಿಂಗ್ ಹೋಂಗೆ ಭೇಟಿ ನೀಡಿ ಚಿಕಿತ್ಸೆ ಪಡೆದ ಸಾರ್ವಜನಿಕರು ಕೂಡಲೇ ಕೊರೊನಾ ತಪಾಸಣೆಗೆ ಒಳಗಾಗಬೇಕು ಹಾಗೂ ಸ್ವಯಂ ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ಸಾರ್ವಜನಿಕರಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ನಗರಸಭೆ ಮನವಿ ಮಾಡಿದೆ. ಅಲ್ಲದೇ ಸೋಂಕಿತ ವೈದ್ಯ ತಾಲ್ಲೂಕಿನ ಸುಗ್ಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಚಿಕಿತ್ಸೆ ಪಡೆದಿದ್ದ ಸುಗ್ಗನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಕೊರೊನಾ ಭೀತಿ ಮೂಡಿದೆ.












Click it and Unblock the Notifications