ಆಪರೇಷನ್ ಹಸ್ತದ ಅಗತ್ಯವಿಲ್ಲ : ಸಿಎಂ
ಮೈಸೂರು, ಸೆ.19 : ಯಾವುದೇ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ದಸರಾ ಸಿದ್ಧತೆ ಕುರಿತು ಪರಿಶೀಲನೆ ನಡೆಸಲು ಮೈಸೂರಿನಗೆ ಆಗಮಿಸಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ಜೆಡಿಎಸ್ ಪಕ್ಷದ ಯಾವ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಿಲ್ಲ. ಅವರನ್ನು ಕರೆತರಲು ನಾವು ಪ್ರಯತ್ನ ನಡೆಸಿಲ್ಲ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆಯಲ್ಲಿ ಸಚಿವ ಸಂತೋಷ್ ಲಾಡ್ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಆ ಕುರಿತು ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ. ದಾಖಲೆಗಳು ದೊರೆತರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ಸಂತೋಷ್ ಲಾಡ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿಲ್ಲ. ಆರೋಪಗಳ ಕುರಿತು ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದು, ದಾಖಲೆಗಳು ಲಭ್ಯವಾದರೆ, ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು

ಜಾಮೀನು ಪಡೆಯಲು ಆನಂದ್ ಸಿಂಗ್ ಯತ್ನ
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನದ ಭೀತಿ ಎದುರಿಸುತ್ತಿರುವ ಹೊಸಪೇಟೆ ವಿಜಯನಗರ ಶಾಸಕ ಆನಂದ್ ಸಿಂಗ್, ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ. ಸೋಮವಾರ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಅವರು ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದ್ದು, ಇಂದು ಅವರಿಗೆ ಜಾಮೀನು ದೊರಕಿಲ್ಲ.

ಕೊಳ್ಳೆಗಾಲದಿಂದ ಬೆಂಗಳೂರಿಗೆ ಬಸ್ ಸೇವೆ
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಿಂದ ಕನಕಪುರ ಮಾರ್ಗವಾಗಿ ಬೆಂಗಳೂರಿಗೆ ಕೆಎಸ್ಆರ್ ಟಿಸಿ ಎರಡು ಐರಾವತ ಬಸ್ ಸೇವೆ ಆರಂಭಿಸಲಾಗಿದೆ. ಸೋಮವಾರ ಶಾಸಕ ಎಸ್.ಜಯಣ್ಣ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಕೊಳ್ಳೆಗಾಲದಿಂದ ಬೆಳಗ್ಗೆ 6, ಮಧ್ಯಾಹ್ನ 2 ಹಾಗೂ 3 ಗಂಟೆಗೆ ಈ ಬಸ್ ಗಳು ಹೊರಡಲಿವೆ. ಬೆಂಗಳೂರಿನ ಕಲಾಸಿಪಾಳ್ಯದಿಂದ ಬೆಳಗ್ಗೆ 9.30ಕ್ಕೆ, ಮಧ್ಯಾಹ್ನ 12 ಮತ್ತು ಸಂಜೆ 5 ಗಂಟೆಗೆ ಬಸ್ ಕೊಳ್ಳೆಗಾಲಕ್ಕೆ ಹೊರಡಲಿದೆ. ದಿನನಿತ್ಯ ಕೊಳ್ಳೆಗಾಲದಿಂದ ಬೆಂಗಳೂರಿಗೆ ನೂರಾರು ಪ್ರಯಾಣಿಕರು ಸಂಚರಿಸುತ್ತಾರೆ.

ಉಲ್ಟಾ ಹೊಡೆದ ಮಹಿಳೆ
ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತನ್ನನ್ನು ಬೆತ್ತಲುಗೊಳಿಸಿ ಥಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದ ಗೋಕಾಕ್ ತಾಲೂಕಿನ ತಪಸಿ ಗ್ರಾಮದ ರೇಣುಕಾ ಎಂಬ ಮಹಿಳೆ ತನ್ನ ಹೇಳಿಕೆಯನ್ನು ಹಿಂಪಡೆದಿದ್ದಾಳೆ. ಸಿಎಂ ಜನತಾದರ್ಶನ ಕಾರ್ಯಕ್ರಮಕ್ಕೆ ಎರಡು ಬಾರಿ ಆಗಮಿಸಿದ್ದ ಮಹಿಳೆ ತನಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಳು. ಸಿಎಂ ಸಿದ್ದರಾಮಯ್ಯ ಈ ಕುರಿತು ತನಿಖೆಗೂ ಆದೇಶಿಸಿದ್ದರು. ಆದರೆ, ಸೋಮವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮಹಿಳೆ. ತನ್ನ ಮೇಲೆ ಸಚಿವರ ಬೆಂಬಲಿಗರು ಹಲ್ಲೆ ನಡೆಸಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾಳೆ.

160 ಗ್ರಾಮ ಪಂಚಾಯಿತಿ ಮೇಲ್ದರ್ಜೆಗೆ
ರಾಜ್ಯದ 160 ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ರಾಜ್ಯದಲ್ಲಿ ಮೇಲ್ದರ್ಜೆಗೆ ಏರಿಸಬೇಕಾಗಿರುವ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಶೀಘ್ರದಲ್ಲೇ ಚರ್ಚಿಸಲಾಗುವುದು ಎಂದು ಹೇಳಿದರು.

ಸಿಎಂಗೆ ಬಿಎಸ್ವೈ ಸವಾಲು
ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದ ಸಿದ್ದರಾಮಯ್ಯ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ವಜಾಗೊಳಿಸಲಿ ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ. ದಾವಣಗೆರೆಯಲ್ಲಿ ಸೋಮವಾರ ಮಾತನಾಡಿದ ಅವರು, ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಸಿಎಂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ಅಕ್ಕಿ ಮಾರಿದರೆ ರೇಷನ್ ಕಾರ್ಡ್ ರದ್ದು
ಅನ್ನಭಾಗ್ಯ ಯೋಜನೆಯಡಿ ಪಡೆದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಜನರ ಪಡಿತರ ಚೀಟಿಯನ್ನು ರದ್ದುಗೊಳಿಸಲು ಸಿಎಂ ಸಿದ್ದರಾಮಯ್ಯ ಮತ್ತು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗಂಡೂರಾವ್ ಆದೇಶ ನೀಡಿದ್ದಾರೆ. ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವುದನ್ನು ತಡೆಯಲು ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಬಿಬಿಎಂಪಿಯಲ್ಲಿ ಇನ್ನು ಕನ್ನಡ ಡಿಂಡಿಮ
ಬಿಬಿಎಂಪಿಯಲ್ಲಿ ಎಲ್ಲಾ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿಸ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ್ ಹೇಳಿದ್ದಾರೆ. ಆಡಳಿತದಲ್ಲಿ ಕನ್ನಡ ಬಳಸಬೇಕೆಂದು ಸರ್ಕಾರ ಸುತ್ತೋಲೆ ಕಳುಹಿಸಿದೆ. ಆದರೆ, ಬಿಬಿಎಂಪಿಯಲ್ಲಿ ಅಧಿಕಾರಿಗಳು ಕನ್ನಡದಲ್ಲಿ ವ್ಯವಹರಿಸುತ್ತಿಲ್ಲ. ಎಲ್ಲಾ ಅಧಿಕಾರಿಗಳು ಕನ್ನಡ ಬಳಸಬೇಕು. ಇಲ್ಲದಿದ್ದರೆ, ಆಯುಕ್ತರಿಗೆ ತಿಳಿಸಿ ಕಠಿಣ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications