ಸಿದ್ದರಾಮಯ್ಯ ಚುನಾವಣೆಗಾಗಿ ಹಣ ಪಡೆದದ್ದು ಎಲ್ಲಿಂದ?
ಬೆಂಗಳೂರು, ಮೇ.7 : ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಬಿಡಿಎ, ಬಿಬಿಎಂಪಿ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ವಿಲೇವಾರಿ ಮಾಡಿರುವ ಕಡತಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಡಿವಿ ಸದಾನಂದ ಗೌಡ, ಲೋಕಸಭೆ ಚುನಾವಣೆಗೆ ಮುಖ್ಯಮಂತ್ರಿಗಳು ಬಿಡಿಎ, ಬಿಬಿಎಂಪಿ ಅಧಿಕಾರಿಗಳಿಂದ ಹಣ ಸಂಗ್ರಹಿಸಿದ್ದಾರೆ ಎಂದು ನಾನು ನೀಡಿರುವ ಹೇಳಿಕೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ. ಇದು ತಪ್ಪಾದರೆ ನನ್ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಿ ಎಂದು ಸವಾಲು ಹಾಕಿದರು.
ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 5ರ ನಂತರ ಬಿಬಿಎಂಪಿ, ಬಿಡಿಎಗೆ ಸೇರಿದ ಎಷ್ಟು ಕಡತಗಳನ್ನು ವಿಲೇವಾರಿ ಮಾಡಿದ್ದಾರೆ,ಎಷ್ಟು ಜಮೀನನ್ನು ಡಿನೋಟಿಫೈ ಮಾಡಲಾಗಿದೆ ಹಾಗೂ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ಎಷ್ಟು ಕಡತಗಳನ್ನು ವಿಲೇವಾರಿ ಮಾಡಲಾಗಿದೆ ಮುಂತಾದವ ವಿಚಾರಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ವರದಿ ನೀಡಲಿ ಎಂದು ಒತ್ತಾಯಿಸಿದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಸಿಎಂ ಅಧಿಕಾರಿಗಳಿಂದ ಹಣ ಪಡೆದಿದ್ದಾರೆ
ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಬಿಡಿಎ, ಬಿಬಿಎಂಪಿ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಕಡತಗಳನ್ನು ವಿಲೇವಾರಿ ಮಾಡಿ ಅವರಿಂದ ಹಣ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಆರೋಪಿಸಿದ್ದಾರೆ. ನನ್ನ ಹೇಳಿಕೆ ಸುಳ್ಳಾಗಿದ್ದರೆ, ಸಿಎಂ ನನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿ ಎಂದು ಸವಾಲು ಹಾಕಿದ್ದಾರೆ.

ಭೂಮಿ ಮಂಜೂರಾತಿಗೆ ಅರ್ಜಿ ಅವಧಿ ವಿಸ್ತರಣೆ
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅರ್ಹ ಅಲ್ಪಸಂಖ್ಯಾತರಿಗಾಗಿ ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರಾತಿಗೆ ಅಲ್ಪಸಂಖ್ಯಾತ ಭೂ ರಹಿತ ಕೃಷಿ ಕಾರ್ಮಿಕರಿಂದ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ.31 ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಮಾ. 31 ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿತ್ತು. ಸದ್ಯ ಅವಧಿ ವಿಸ್ತರಣೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08539-225008 ನಂಗೆ ಸಂಪರ್ಕಿಸಬಹುದಾಗಿದೆ.

ಮಹಾರಾಷ್ಟ್ರದಿಂದ ನೀರು ಪಡೆಯಲು ಪತ್ರ
ಉತ್ತರ ಕರ್ನಾಟಕದ ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದ್ದು, ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ 3 ಟಿಎಂಸಿ ಹಾಗೂ ಕಾಳಮ್ಮವಾಡಿ ಜಲಾಶಯದಿಂದ ರಾಜ್ಯದ ಪಾಲಿನ 1 ಟಿಎಂಸಿ ನೀರು ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ವಿ.ಬಿ. ಪಾಟೀಲ್ ಹೇಳಿದ್ದಾರೆ.

ಮೇ 10, 11ರಂದು ಸಾಹಿತ್ಯಮೇಳ
ಗದಗನ ಲಡಾಯಿ ಪ್ರಕಾಶನದಿಂದ ಮೇ ಸಾಹಿತ್ಯ ಮೇಳವನ್ನು ಮೇ 10, 11ರಂದು ಹಾವೇರಿ ನಗರದ ಗೆಳೆಯರ ಬಳಗದ ಮಣಿಭಾಯಿ ಲೋಡಾಯ ಸಭಾಭವನದಲ್ಲಿ ಆಯೋಜಿಸಲಾಗಿದೆ. ಕೌರವ ಪತ್ರಿಕೆ, ಚಿತ್ತಾರ ಕಲಾ ಬಳಗ ಧಾರವಾಡ, ಕನ್ನಡ ಸಂಸ್ಕೃತಿ ಇಲಾಖೆ, ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆ, ಕರ್ನಾಟಕ ಜನಸಾಹಿತ್ಯ ಸಂಘಟನೆ ಸಹಭಾಗಿತ್ವದಲ್ಲಿ ಮೇಳ ಆಯೋಜಿಸಲಾಗಿದ್ದು, ಮೇ 10ರ ಬೆಳಗ್ಗೆ 10.30ಕ್ಕೆ ಮೇಳದ ಉದ್ಘಾಟನಾ ಸಮಾರಂಭ ನಡೆಯಲಿದೆ. ಹೈದ್ರಾಬಾದ್‌ನ ಡಾ.ಕೆ. ಶಿವಾರೆಡ್ಡಿ ಮೇಳ ಉದ್ಘಾಟಿಸಲಿದ್ದು, ಡಾ.ಎಸ್.ಜಿ. ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮೇ 8ರಂದು ವಿದ್ಯುತ್ ಕಡಿತ
ಮೇ 8ರಂದು ಫೀಡರ್ ಕಾಮಗಾರಿ ನಡೆಯುವುದರಿಂದ ಮಂಗಳೂರಿನ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರದೇಶಗಳು : ಸುರತ್ಕಲ್, ಕಾನ, ತಡಂಬೈಲ್, ಕಾಟಿ ಪಳ್ಳ, ಕುತ್ತೆ ತ್ತೂರು, ಚೇಳ್ಯಾರು, ಮುಕ್ಕ, ಸಸಿಹಿತ್ಲು, ಮುಲ್ಕಿ, ಕಿನ್ನಿಗೋಳಿ, ಹಳೆ ಯಂಗಡಿ, ಕಟೀಲು, ಬಿಎಎಸ್‌ಎಫ್, ಹೆಚ್‌ಪಿಸಿಎಲ್, ಭಾರತ್ ಬ್ಯಾರೆಲ್, ಎನ್‌ಐಟಿಕೆ ಸ್ಥಾವರ.












Click it and Unblock the Notifications