ಕರ್ನಾಟಕದ ಜಿಲ್ಲಾ ಸುದ್ದಿಗಳ ಕ್ವಿಕ್ ಲುಕ್
ಬೆಳಗಾವಿ, ಡಿ.18: ಕರ್ನಾಟಕ ಸರ್ಕಾರ ಕಳಸಾ-ಬಂಡೂರಿ ನಾಲಾ ಜೋಡಣೆ ಕಾಮಗಾರಿಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಮಹದಾಯಿ ನ್ಯಾಯಾಧಿಕರಣ ಮಂಡಳಿ ಅಧ್ಯಕ್ಷ ನ್ಯಾ.ಪಾಂಚಾಲಿ ನೇತೃತ್ವದಲ್ಲಿ ಬೆಳಗಾವಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಬುಧವಾರ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕನಕುಂಬಿ ಬಳಿ ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿ ವೀಕ್ಷಣೆ ನಡೆಸಿದ ಅವರು, ನೀರಾವರಿಗಾಗಿಯೇ ರಾಜ್ಯ ಸರ್ಕಾರ ಕಾಮಗಾರಿ ಕೈಗೆತ್ತಿಕೊಂಡಿದೆ. ಕಾಮಗಾರಿಯಲ್ಲಿ ರಾಜ್ಯ ಸರ್ಕಾರ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಸ್ಟಷ್ಟಪಡಿಸಿದರು.
2013ರೊಳಗೆ ಎಲ್ಲ ನದಿ ಜೋಡಣೆ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದರು ಹಿನ್ನೆಲೆಯಲ್ಲಿ ಮಹದಾಯಿ ನ್ಯಾಯಾಧಿಕರಣ ಮಂಡಳಿ ಅಧ್ಯಕ್ಷ ನ್ಯಾ.ಪಾಂಚಾಲಿ ನೇತೃತ್ವದಲ್ಲಿ ಬುಧವಾರ ಕಾಮಗಾರಿಗಳ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಲಾಯಿತು. ಗುರುವಾರ ತಂಡ ಗೋವಾ ರಾಜ್ಯದ ಪ್ರವಾಸ ಕೈಗೊಂಡಿದೆ. ( ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ
ಕರ್ನಾಟಕ ಸರ್ಕಾರ ಕಳಸಾ-ಬಂಡೂರಿ ನಾಲಾ ಜೋಡಣೆ ಕಾಮಗಾರಿಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಗುರುವಾರ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕನಕುಂಬಿ ಬಳಿ ಮಹದಾಯಿ ನ್ಯಾಯಾಧಿಕರಣ ಮಂಡಳಿ ಅಧ್ಯಕ್ಷ ನ್ಯಾ.ಪಾಂಚಾಲಿ ನೇತೃತ್ವದಲ್ಲಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

ಎಟಿಎಂ ಬಂದ್ ಗ್ರಾಹಕರ ಪರದಾಟ
ಧಾರವಾಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 322 ಎಟಿಎಂ ಕೇಂದ್ರಗಳ ಪೈಕಿ 50ಕ್ಕೂ ಹೆಚ್ಚು ಕೇಂದ್ರಗಳು ವಹಿವಾಟು ಸ್ಥಗಿತಗೊಳಿಸಿವೆ ಆದ್ದರಿಂದ ಜನರು ಪರದಾಡಬೇಕಾಗಿದೆ. ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದ ನಂತರ ಪೊಲೀಸರು, ಜಿಲ್ಲಾ ವ್ಯಾಪ್ತಿಯ ಎಲ್ಲ ಎಟಿಎಂ ಕೇಂದ್ರಗಳಲ್ಲಿ ಅವಶ್ಯಕ ಸಿಬ್ಬಂದಿ ನಿಯೋಜಿಸಬೇಕು ಎಂದು ಸೂಚನೆ ನೀಡಿದ್ದರು. ಕೆಲವು ಬ್ಯಾಂಕ್‌ಗಳು ಈ ಆದೇಶ ಪಾಲಿಸದ ಹಿನ್ನಲೆಯಲ್ಲಿ ಮಹಾನಗರ ಪೊಲೀಸ್ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲ ಕೇಂದ್ರಗಳನ್ನು ಮುಚ್ಚಲು ಕ್ರಮಕೈಗೊಂಡಿದೆ. ಕೆಲವು ಎಟಿಎಂಗಳು ರಾತ್ರಿ 8ರ ನಂತರ ಸೇವೆ ಸ್ಥಗಿತಗೊಳಿವೆ. ಆದ್ದರಿಂದ ಜನರು ತುರ್ತು ಸಮಯದಲ್ಲಿ ಎಟಿಎಂಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಗುರುವಾರಿದಿಂದ ಶರಣ ಸಂಸ್ಕೃತಿ ಉತ್ಸವ
ಡಿ.19ರ ಗುರುವಾರರಿಂದ ಬೀದರ್ ಕರ್ನಾಟಕ ಫಾರ್ಮಸಿ ಕಾಲೇಜಿನ ಆವರಣದಲ್ಲಿ 21ರ ವರೆಗೆ ಜಿಲ್ಲಾ ಬಸವ ಕೇಂದ್ರ ಆಯೋಜಿಸಿರುವ "ಸಹಜ ಶಿವಯೋಗ ಹಾಗೂ ಶರಣ ಸಂಸ್ಕೃತಿ ಉತ್ಸವ" ನಡೆಯಲಿದೆ ಎಂದು ಶರಣ ಸಂಸ್ಕೃತಿ ಉತ್ಸವ 2013ರ ಸ್ವಾಗತ ಸಮಿತಿಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದ್ದಾರೆ. ಮೂರು ದಿನಗಳ ಕಾಲ ವಿವಿಧ ಗೋಷ್ಠಿ, ಸಹಜ ಶಿವಯೋಗ, ಯುವ ಸಮಾವೇಶ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಡಿ.19 ರಂದು ಬೆಳಗ್ಗೆ 7.15ಕ್ಕೆ ಸಹಜ ಶಿವಯೋಗ ನಡೆಯಲಿದ್ದು, ಚಿತ್ರದುರ್ಗದ ಬಸವಕೇಂದ್ರ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ.

ಮುಂದುವರೆದ ಸಂಧಾನ ಪ್ರಕಿಯೆ
ಬಾಗಲಕೋಟೆ ಜಿಲ್ಲೆಯ ಗದ್ಯಾಳ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ಮಧ್ಯೆ ಸೌಹಾರ್ದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ರಾಜಿ ಸಂಧಾನ ಪ್ರಕ್ರಿಯೆ ಮುಂದುವರಿದಿವೆ. ಮಂಗಳವಾರ ಜಿಲ್ಲಾಧಿಕಾರಿಗಳು ಗ್ರಾಮದ ಮುಖಂಡರೊಂದಿಗೆ ಸೌಹಾರ್ದ ವಾತಾವರಣ ಮೂಡಿಸಲಿ ಸಭೆ ನಡೆಸಿದರು. ಬುಧವಾರ ಜಿಲ್ಲಾಧಿಕಾರಿ ಮನೋಜ್ ಜೈನ್ ದಲಿತ ಮುಖಂಡರನ್ನು ಕರೆಸಿ ಚರ್ಚೆ ನಡೆಸಿದ್ದು, ಗ್ರಾಮದಲ್ಲಿ ಮೊದಲಿನ ಸೌಹಾರ್ದ ವಾತಾವರಣ ಸೃಷ್ಟಿಸಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಕುಣಿಗಲ್ಲ ನಲ್ಲಿ ಧಮ್ ಹೊಡೆದು ದಂಡ ಕಟ್ಟಿದ ಜನ
ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ 35 ಮಂದಿಗೆ ಬುಧವಾರ ಪೊಲೀಸರು ದಂಡ ವಿಧಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದನ್ವಯ ಪಟ್ಟಣದಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಸ್ಥಳದಲ್ಳೇ ದಂಡ ವಿಧಿಸಿಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಹುಣಸೂರಿನಲ್ಲಿ ಹುಲಿಗಣತಿ ಕಾರ್ಯ ಆರಂಭ
ಮೈಸೂರು ಜಿಲ್ಲೆಯ ಹುಣಸೂರು ಅರಣ್ಯ ವಿಭಾಗದ ಏಳು ವಲಯಗಳಲ್ಲಿ ಹುಲಿಗಣತಿ ಕಾರ್ಯವನ್ನು ಬುಧವಾರ ಆರಂಭಿಸಲಾಗಿದೆ ಎಂದು ಡಿಸಿಎಫ್ ಗೋಕುಲ್ ತಿಳಿಸಿದ್ದಾರೆ. ವೀರನಹೊಸಹಳ್ಳಿ, ಕಳ್ಳಲ್ಲಿ, ನಾಗರಹೊಳೆ, ಡಿ.ಬಿ.ಕುಪ್ಪೆ, ಅಂತರಸಂತೆ, ಮೇಟಿಕುಪ್ಪೆ, ಆನೆಚೌಕೂರು ಅರಣ್ಯ ಪ್ರದೇಶಗಳಲ್ಲಿ 3 ದಿನಗಳವರೆಗೆ ಗಣತಿ ನಡೆಯಲಿದೆ. ಗಣತಿ ಕಾರ್ಯದಲ್ಲಿ ಭಾಗವಹಿಸಲು ಶಿಬಿರಾರ್ಥಿಗಳು 100 ರೂ. ಮುಖಬೆಲೆಯ ಬಾಂಡ್ ಪೇಪರ್ ಇಂಡಿನಿಮಿಟಿ ಬಾಂಡ್‌ನಲ್ಲಿ 12 ಷರತ್ತುಗಳಿಗೊಪ್ಪಿ ಸ್ವಯಂ ಪ್ರೇರಿತರಾಗಿ ಕಾಡಿನಲ್ಲಿ ನಡೆಯುವ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು, ಚೆನೈಗಳಿಂದ ಶಿಬಿರಾರ್ಥಿಗಳು ಆಗಮಿಸಿದ್ದಾರೆ. 14 ಮಂದಿ ಸ್ಥಳೀಯರು ಅವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಶಾಸಕರನ್ನು ಹುಡುಕಿಕೊಡಿ ಎಂದು ಮನವಿ
ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ಮೇಲ್ಮನೆಗೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರು ಈವರೆಗೆ ಯಾವುದೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿಲ್ಲ, ನಮ್ಮ ಶಾಸಕರನ್ನು ಯಾರಾದರೂ ಹುಡುಕಿಕೊಡಿ ಎಂದು ಎಂದು ನಲವಡಿ ಗ್ರಾ.ಪಂ. ಸದಸ್ಯ ಪ್ರದೀಪ್ ಲೇಂಕಿನಗೌಡರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ, ಈ ಕುರಿತು ಪತ್ರಿಕಾ ಹೇಳಿಕೆಯನ್ನು ಹೊರಡಿಸಿದ್ದಾರೆ. ಇಂದಿರಾ ಆವಾಸ ಹಾಗೂ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಶುಲ್ಕ ಪಾವತಿಯಾಗಿಲ್ಲ. ಫಲಾನುಭವಿಗಳು ನಿತ್ಯ ಗ್ರಾ.ಪಂ.ಗಳಿಗೆ ಅಲೆದಾಡುತ್ತಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳಿದ್ದರೂ ಶಾಸಕರು ಇದನ್ನು ಬಗೆಹರಿಸಲು ಪ್ರಯತ್ನಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.











Click it and Unblock the Notifications