ಕರ್ನಾಟಕದ ತುಣುಕು ಸುದ್ದಿಗಳ ಇಣುಕು ನೋಟ
ಮೈಸೂರು, ಅ.1 : ಮೈಸೂರು ಮಹಾರಾಜ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಾ.ಸರ್.ಎಂ.ವಿಶ್ವೇಶ್ವರಯ್ಯ ಅವರಿಂದ ಆರಂಭವಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬುಧವಾರಕ್ಕೆ 100 ವರ್ಷಗಳನ್ನು ಪೂರೈಸಲಿದೆ.
ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಶತಮಾನೋತ್ಸವ ಕಾರ್ಯಕ್ರಮಗಳನ್ನು ಬ್ಯಾಂಕ್ ಹಮ್ಮಿಕೊಂಡಿದೆ. ಬುಧವಾರ ಮೈಸೂರಿನಲ್ಲಿ ಬ್ಯಾಂಕ್ ವತಿಯಿಂದ ವಿವಿಧ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 7 ಗಂಟೆಗೆ ಮೈಸೂರು ಬ್ಯಾಂಕ್ ಶತಮಾನೋತ್ಸವ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಉದ್ಯೋಗಿಗಳು ಮತ್ತು ಗ್ರಾಹಕರು ಈ ಜಾಥಾದಲ್ಲಿ ಭಾಗವಹಿಸಲಿದ್ದು, ಅರಮನೆ ಬಲರಾಮ ದ್ವಾರದಲ್ಲಿ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.
ಅರಮನೆಯ ಬಲರಾಮ ದ್ವಾರದಿಂದ ಪ್ರಾರಂಭವಾಗುವ ಜಾಥಾ, ಅಶೋಕ ರಸ್ತೆ, ನೆಹರು ವೃತ್ತ, ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸ್ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಂತ್ಯಗೊಳ್ಳಲಿದೆ.
ಸಂಜೆ 4 ಗಂಟೆಗೆ ಲಲಿತಕಲಾ ಕಾಲೇಜಿನ ಸಭಾಂಗಣದಲ್ಲಿ ಬ್ಯಾಂಕಿನ ಗ್ರಾಹಕರನ್ನು ಸನ್ಮಾನಿಸಲಾಗುವುದು ಎಂದು ಸ್ಟೇಟ್ ಬ್ಯಾಂಕ್‌ನ ಉಪಪ್ರಧಾನ ವ್ಯವಸ್ಥಾಪಕರು ಹೇಳಿದ್ದಾರೆ. ಬ್ಯಾಂಕಿನ ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಶತಮಾನೋತ್ಸವ ಸಂಭ್ರಮದಲ್ಲಿ ಎಸ್ ಬಿಎಂ
ಮೈಸೂರು ಮಹಾರಾಜ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಾ.ಸರ್.ಎಂ.ವಿಶ್ವೇಶ್ವರಯ್ಯ ಅವರಿಂದ ಆರಂಭವಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬುಧವಾರಕ್ಕೆ 100 ವರ್ಷಗಳನ್ನು ಪೂರೈಸಲಿದೆ. ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಗಾಯಾಳುಗಳನ್ನು ರಕ್ಷಿಸಿದ ಶಾಸಕರು
ಬಸ್ಸೊಂದು ಪಲ್ಟಿಯಾಗಿ ಅದರಡಿ ಸಿಲುಕಿದ್ದ ಪ್ರಯಾಣಿಕರಿಬ್ಬರನ್ನು ಶಾಸಕ ವಿನಯ್‌ಕುಲಕರ್ಣಿ ಅವರು ಪೊಲೀಸರು ಸಹಾಯದಿಂದ ರಕ್ಷಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಸೋಮವಾರ ರಾತ್ರಿ ೧೦ ಗಂಟೆ ಸುಮಾರಿನಲ್ಲಿ ಧಾರವಾಡದ ನುಗ್ಗಿಕೇರಿ ಬಳಿ ಪಲ್ಟಿಯಾಗಿದೆ.
ಇಬ್ಬರು ಪ್ರಯಾಣಿಕರು ಈ ಸಂದರ್ಭದಲ್ಲಿ ಬಸ್ ಕೆಳಗೆ ಸಿಲುಕಿದ್ದರು. ಒಬ್ಬ ಪ್ರಯಾಣಿಕನ ದೇಹಪೂರ್ತಿ ಬಸ್ ಕೆಳಗೆ ಸಿಲುಕಿದ್ದರೆ ತಲೆ ಮಾತ್ರ ಹೊರಗೆ ಕಾಣುತ್ತಿತ್ತು. ಶಾಸಕ ವಿನಯ್ ಕುಲಕರ್ಣಿ ಅವರು ಸ್ಥಳಕ್ಕೆ ಧಾವಿಸಿ ಪೊಲೀಸರೊಂದಿಗೆ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿ, ಪ್ರಯಾಣಿಕರಿಬ್ಬರನ್ನು ರಕ್ಷಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಲಡ್ಡು ಕೊಟ್ಟಿದ್ದೆ ಕಾಂಗ್ರೆಸ್ ಸಾಧನೆ
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರಾಜ್ಯದಲ್ಲಿ 5 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ರಾಜ್ಯದ ಜನರಿಗೆ ವಿಶೇಷ ಪ್ಯಾಕೇಜ್ ನೀಡುವುದು ಬಿಟ್ಟು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಲಡ್ಡು ಕೊಟ್ಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ತಂಡ ರಾಜ್ಯಕ್ಕೆ ಬಂದು ಹೋದರೂ ಪರಿಹಾರ ನೀಡಿಲ್ಲ. ಬದಲಾಗಿ ರಾಜ್ಯದ ಜನರಿಗೆ ಸೋನಿಯಾ ಲಡ್ಡು ನೀಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ನಿವೃತ್ತ ಯೋಧನಿಂದ ಅತ್ಯಾಚಾರ
ಅಪ್ರಾಪ್ತ ಬಾಲಕಿಯ ಮೇಲೆ ನಿವೃತ್ತ ಯೋಧನೊಬ್ಬ ಅತ್ಯಾಚಾರ ವೆಸಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮೈದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಿಲಿಟರಿ ಸೇವೆಯಿಂದ ನಿವೃತ್ತನಾಗಿರುವ ನಾರಾಯಣ ಎಂಬುವವನು 3 ನೇ ತರಗತಿ ವ್ಯಾಸಂಗ ಮಾಡುತ್ತಿರುವ ತನ್ನ ತಮ್ಮನ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಾಲಕಿಯನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಾರಿಯಾಗಿರುವ ನಾರಾಯಣನಿಗಾಗಿ ಕೊಡಿಗೇನಹಳ್ಳಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.

ಕೊರಟಗೆರೆಯಲ್ಲಿ ಬಲ ಪಡೆದುಕೊಂಡು ಕಾಂಗ್ರೆಸ್
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಕೊರಟಗೆರೆಯಲ್ಲಿ ಶಕ್ತಿ ಕಳೆದುಕೊಂಡಿದ್ದ ಕಾಂಗ್ರೆಸ್ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶಿಸಿದೆ. ತಾಲ್ಲೂಕಿನ ಹುಲಿಕುಂಟೆ ಜಿಲ್ಲಾ ಪಂಚಾಯ್ತಿ ಮೀಸಲು ಕ್ಷೇತ್ರಕ್ಕೆ ಮಂಗಳವಾರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಾರಾಯಣಮೂರ್ತಿ ಜಯ ಗಳಿಸಿದ್ದಾರೆ. ಇದರಿಂದ ಸ್ಥಳೀಯ ಜೆಡಿಎಸ್ ಶಾಸಕ ಸುಧಾಕರ್ ಲಾಲ್ ಅವರಿಗೆ ಮುಖಭಂಗ ಉಂಟಾಗಿದೆ.

ಗುಂಡಿನ ಸದ್ದು ಕೇಳಿ ಕಳ್ಳರು ಪರಾರಿ
ಬಳ್ಳಾರಿಯ ಬಸವೇಶ್ವರ ನಗರದಲ್ಲಿ ಕಳವು ಮಾಡಲು ಆಗಮಿಸಿದ್ದ ಮುಸುಕು ಧಾರಿಗಳು ಗುಂಡಿನ ಶಬ್ಧಕ್ಕೆ ಹೆದರಿ ಪರಾರಿ ಯಾಗಿರುವ ಮಂಗಳವಾರ ಮುಂಜಾನೆ ನಡೆದಿದೆ. ಟಪಾಲ್ ಅಶ್ವಿನಿಪ್ರಸಾದ್ ಎಂಬುವರ ಮನೆಯಲ್ಲಿ ಮುಂಜಾನೆ ಕಳವಿಗೆ ಯತ್ನಿಸಲಾಗಿದೆ. ಮುಂಜಾನೆ ಸೆಕ್ಯೂರಿಟಿಗಾರ್ಡ್ ಮೇಲೆ ಹಲ್ಲೆ ನಡೆಸಿ 7 ಜನ ಮುಸುಕುಧಾರಿಗಳು ಮನೆಗೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಆದ ಗಲಾಟೆಯಿಂದ ಎಚ್ಚರಗೊಂಡ ಮನೆಯವರು ಕಳ್ಳರನ್ನು ಕಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದ ಹೆದರಿದ ಅವರು ಪರಾರಿಯಾಗಿದ್ದಾರೆ. ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮುಕನಿಗೆ ಬಿತ್ತು ಗೂಸ
6 ಜನ ಹೆಂಡತಿಯರು 24 ಜನ ಮಕ್ಕಳನ್ನು ಹೊಂದಿದ್ದ ವ್ಯಕ್ತಿಯೊಬ್ಬ 10 ವರ್ಷದ ಮಗಳ ಮೇಲೇ ಅತ್ಯಾಚಾರವೆಸಗಿರುವ ಘಟನೆ ಮೈಸೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೇಟಗಳ್ಳಿ ಅಂಬೇಡ್ಕರ್ ಜ್ಞಾನಲೋಕದ ನಿವಾಸಿ ಕೃಷ್ಣಪ್ಪ ಎಂಬಾತ ಈ ಕೃತ್ಯ ಎಸಗಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಮಕ್ಕಳು- ಹೆಂಡತಿಯರು ಹಾಗೂ ಸ್ಥಳೀಯರು ಕಾಮುಕನಿಗೆ ಹಿಗ್ಗಾ ಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಮತ್ತೆ ಬಂದ ನಕಲಿ ಪೊಲೀಸರು
ಬೆಂಗಳೂರಿಗೆ ನಕಲಿ ಪೊಲೀಸರು ಮತ್ತೆ ಬಂದಿದ್ದಾರೆ. ಎಚ್ಎಎಲ್ ಸಮೀಪದ ರಾಮಾಗೇಟ್ ಬಳಿ ಮಂಗಳವಾರ ಬೆಳಗ್ಗೆ ಪ್ರೇಮಾಬಾಯಿ ಎಂಬ ವೃದ್ಧೆಗೆ ವಂಚಿಸಿ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ. ಎಚ್ಎಸ್ಆರ್ ಲೇಔಟ್ ನಲ್ಲಿ ಥೇರೆಸಾ ಜೋಸೆಫ್ ಅವರಿಗೆ ಪಕ್ಕದ ಬೀದಿಯಲ್ಲಿ ಕೊಲೆಯಾಗಿದೆ. ಆಭರಣ ಧರಿಸಿ ಹೋಗಬೇಡಿ ಎಂದು ಚಿನ್ನದ ಸರ ಮತ್ತು ಉಂಗುರ ಬಿಚ್ಚಿಸಿ ಅದನ್ನು ಪಡೆದು ಪರಾರಿಯಾಗಿದ್ದಾರೆ. ಇದು ಒಂದೇ ಗುಂಪಿನ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ
ವಿಷಪೂರಿತ ಆಹಾರ ಸೇವನೆಯಿಂದ 15 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ಕೋಲಾರ ಜಿಲ್ಲೆಯ ಇಟಿಸಿಎಂ ಆಸ್ಪತ್ರೆ ಮುಂಭಾಗವಿರುವ ಬಾಲಕೀಯರ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ. ಹಾಸ್ಟೆಲ್ ನಲ್ಲಿ ಕಳೆದ ರಾತ್ರಿ ಊಟ ಸೇವಿಸಿದ ವಿದ್ಯಾರ್ಥಿನಿಯರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ವಿದ್ಯಾರ್ಥಿನಿಯರನ್ನು ಕೋಲಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications