ಅಕ್ಕಿ ಬೆಲೆ ಹೆಚ್ಚಳ ಮತ್ತು ಇತರ ಜಿಲ್ಲಾ ಸುದ್ದಿಗಳು
ಬೆಂಗಳೂರು, ಡಿ.17 : ಕರ್ನಾಟಕ ಸರ್ಕಾರದ ಲೆವಿ ನೀತಿ ವಿರೋಧಿಸಿ ಸೋಮವಾರದಿಂದ ರೈಸ್‌ಮಿಲ್ ಮಾಲೀಕರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಮುಷ್ಕರದ ಬಿಸಿ ಜನಸಾಮಾನ್ಯರಿಗೂ ತಟ್ಟಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಕ್ಕಿ ಬೆಲೆ ಏರಿಕೆಯಾಗಿದೆ. ಸರ್ಕಾರ ರೈಸ್‌ಮಿಲ್ ಮಾಲೀಕರ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ, ಆದ್ದರಿಂದ ಮುಷ್ಕರ ಮುಂದುವರೆದಿದೆ.
ಸರ್ಕಾರ ಲೆವಿ ನೀತಿ ವಿರೋಧಿಸಿ 1800 ರೈಸ್ ಮಿಲ್‌ಗಳಲ್ಲಿ ಭತ್ತದ ಮಿಲ್ಲಿಂಗ್ ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ಜನರ ಮೇಲೆ ಉಂಟಾಗಿದ್ದು, ಅಕ್ಕಿ ಬೆಲೆ ಏರಿಕೆಯಾಗಿದೆ. ಮಾರುಕಟ್ಟೆ ಮತ್ತು ಅಂಗಿಡಿಗಳಲ್ಲಿ ಸೋನಾ ಮಸೂರಿ, ಕಾವೇರಿ, ಸಿಲ್ವರ್, ಗೋಲ್ಡ್, ಜ್ಯೋತಿ ಸೇರಿದಂತೆ ಪ್ರಮುಖ ಅಕ್ಕಿಗಳ ಬೆಲೆ ಏರಿಕೆಯಾಗಿ, ಜನರನ್ನು ಆತಂಕಗೊಳಿಸಿದೆ. [ರೈಸ್‌ಮಿಲ್ ಮಾಲೀಕರ ಪ್ರತಿಭಟನೆ]
ರೈಸ್‌ಮಿಲ್ ಮಾಲೀಕರ ಪ್ರತಿಭಟನೆ ಆರಂಭವಾಗುವುದಕ್ಕೆ ಮೊದಲು ಸೋನಾ ಮಸೂರಿ ಅಕ್ಕಿ ಬೆಲೆ ಕೆಜಿಗೆ 48 ರೂ ಇತ್ತು. ಮಂಗಳವಾರ ಅದರ ಬೆಲೆ ಧಿಡೀರನೆ 60 ಗಳಿಗೆ ಏರಿಕೆ ಯಾಗಿದೆ. ಕಾವೇರಿ, ಸಿಲ್ವರ್, ಗೋಲ್ಡ್, ಜ್ಯೋತಿ ಅಕ್ಕಿಗಳ ಬೆಲೆಗಳು ಹೆಚ್ಚಾಗಿವೆ. ಬೆಂಗಳೂರು, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಬಹುತೇಕ ಎಲ್ಲ ಕಡೆ ಅಕ್ಕಿ ಧಾರಣೆ ಏರಿಕೆಯಾಗಿದೆ.
ಕಳೆದ ವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿಯನ್ನು ಬೇರೆ ರಾಜ್ಯಗಳಿಂದ ಖರೀದಿ ಮಾಡುವುದಿಲ್ಲ. ರಾಜ್ಯದ ರೈತರು ಮತ್ತು ಅಕ್ಕಿಗಿರಣಿಗಳಿಂದ ಖರೀದಿ ಮಾಡುತ್ತೇವೆ ಎಂದು ಸರ್ಕಾರ ತೀರ್ಮಾನ ಕೈಗೊಂಡಿತ್ತು. ಕ್ವಿಂಟಾಲ್ 2400 ರೂ. ದರದಲ್ಲಿ ಅಕ್ಕಿಯನ್ನು ಮಿಲ್ ಗಳಿಂದ ಖರೀದಿಸಲಾಗುವುದು, ಮಿಲ್ ಗಳು 5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸಬೇಕು ಎಂದು ಸರ್ಕಾರ ಹೇಳಿತ್ತು. ಇದನ್ನು ವಿರೋಧಿಸಿ ರೈಸ್ ಮಿಲ್ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ರೈಸ್‌ಮಿಲ್ ಮಾಲೀಕರ ಮುಷ್ಕರ, ಅಕ್ಕಿ ಬೆಲೆ ಹೆಚ್ಚಳ
ಕರ್ನಾಟಕ ಸರ್ಕಾರದ ಲೆವಿ ನೀತಿ ವಿರೋಧಿಸಿ ಸೋಮವಾರದಿಂದ ರೈಸ್‌ಮಿಲ್ ಮಾಲೀಕರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. 1800 ಮಿಲ್ ಗಳನ್ನು ಬಂದ್ ಮಾಡಿ ಮಾಲೀಕರು ಮುಷ್ಕರ ನಡೆಸುತ್ತಿರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಕ್ಕಿ ಬೆಲೆ ಏರಿಕೆಯಾಗಿದೆ. ಸರ್ಕಾರ ರೈಸ್‌ಮಿಲ್ ಮಾಲೀಕರ ಜೊತೆ ಯಾವುದೇ ಮಾತುಕತೆ ನಡೆಸಲ ಮುಂದಾಗಿಲ್ಲ. ಆದ್ದರಿಂದ, ಮುಷ್ಕರ ಮುಂದುವರೆರುವ ಸಾಧ್ಯತೆ ಇದ್ದು, ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಹುಲಿಗಣತಿ ಆರಂಭ, ತೀವ್ರ ಕಟ್ಟೆಚ್ಚರ
ಸೋಮವಾರದಿಂದ ಅಧಿಕೃತವಾಗಿ ಹುಲಿ ಗಣತಿ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮೊದಲೆರಡು ದಿನ ಹುಲಿ ಗಣತಿ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಮೈಸೂರಿನಲ್ಲಿ ಹುಲಿದಾಳಿಗೆ ನಾಲ್ವರು ಬಲಿಯಾದ ಹಿನ್ನಲೆಯಲ್ಲಿ ಸ್ವಯಂ ಸೇವಕರು ಅರಣ್ಯ ಇಲಾಖೆ ಸಿಬ್ಬಂದಿ ಅನುಮತಿ ಇಲ್ಲದೆ, ಕಾಡಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಗಣತಿಗೆ ಭಾಗವಹಿಸುವ ಸ್ವಯಂ ಸೇವಕರಿಗೆ ಅರಣ್ಯದಲ್ಲೇ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ವಾಸ್ತವ್ಯ ಹೂಡಲು ಅವಕಾಶ ಕಲ್ಪಿಸಲಾಗಿದ್ದು, ಅಲ್ಲೇ ಉಪಹಾರ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ರೇಣುಚಾರ್ಯ ನೇತೃತ್ವದಲ್ಲಿ ಅಹೋರಾತ್ರಿ ಧರಣಿ
ಭತ್ತಕ್ಕೆ 2,300, ಕಬ್ಬಿಗೆ 1,800 ಸೇರಿದಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ನೀರಾವರಿ ಪಂಪ್‌ಸೆಟ್‌ಗೆ ನಿರಂತರ 10 ತಾಸು ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಾವಣಗೆರೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಸೋಮವಾರದಿಂದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ಅಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಕೆಜೆಪಿ ಕಾರ್ಯಕರ್ತರು, ಅನೇಕ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.

ಸಾಹಿತ್ಯ ಸಮ್ಮೇಳನಕ್ಕೆ ಬರುವಂತೆ ಆಹ್ವಾನ
ಮಡಿಕೇರಿಯಲ್ಲಿ ನಡೆಯುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಹಿತ್ಯಾಸಕ್ತರು ಆಗಮಿಸುತ್ತಿದ್ದಾರೆ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೇ ನಡೆಯುವ ಸಮ್ಮೇಳನಕ್ಕೆ ಕೊಡಗಿನ ಜನರೇ ಬಾರದಿದ್ದರೆ ಹೇಗೆ?, ಆದ್ದರಿಂದ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಉಪ ಸಮಿತಿಯು ಕನ್ನಡ ಸಾಹಿತ್ಯ ರಥದ ಮೂಲಕ ಜಿಲ್ಲೆಯ ಜನರಿಗೆ ಸಮ್ಮೇಳದನ ಆಹ್ವಾನ ನೀಡಲು ಮುಂದಾಗಿದೆ. ಈ ರಥ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ಪ್ರಚಾರ ಜನರನ್ನು ಆಹ್ವಾನಿಸಲಿದೆ.

ಜಿಲ್ಲಾಡಳಿತಕ್ಕೆ ತಲೆನೋವು ತಂದ ಮಿನಿ ಬಜಾರ್
ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡ್‌ನ ಚತುಷ್ಪಥ ಮೇಲ್ಸೇತುವೆಯ ಅಡಿಭಾಗ 'ಮಿನಿ ಬಜಾರ್' ತಲೆ ಎತ್ತಿದ್ದು, ಇದನ್ನು ತೆರವುಗೊಳಿಸುವುದು ಸದ್ಯ ಜಿಲ್ಲಾಡಳಿತದ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಸೇತುವೆ ಕೆಳಗೆ ಅಕ್ರಮವಾಗಿ ಬಟ್ಟೆ, ತರಕಾರಿ, ಹಣ್ಣು, ಚಪ್ಪಲಿ ರಿಪೇರಿ, ಬೀಡಾ ಅಂಗಡಿ, ಫಾಸ್ಟ್ ಫುಡ್ ಸೆಂಟರ್‌ಗಳು ಆರಂಭವಾಗಿದೆ. ಅಂಗಡಿಗಳಿಗೆ ಹೋಗಲು ಜನರು ವಾಹನವನ್ನು ಸ್ಥಳದಲ್ಲಿ ನಿಲ್ಲಿಸುತ್ತಿದ್ದು, ಇದರಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಸದ್ಯ ಮಿನಿ ಬಜಾರ್ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.

ಪಿಎಸೈ ಅಮಾನತಿಗೆ ಆಗ್ರಹ
ಬಾಗಲಕೋಟೆಯ ತೇರದಾಳ ಪಿಎಸೈ ಅವರನ್ನು ಅಮಾನತು ಇಲ್ಲವೆ ವರ್ಗಾವಣೆ ಮಾಡೆಬೇಕೆಂದು ಆಗ್ರಹಿಸಿ ಮಾಜಿ ಶಾಸಕ ಸಿದ್ದು ಸವದಿ ಸೇರಿದಂತೆ ನೂರಾರು ಜನ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಮದನಮಟ್ಟಿ ಗ್ರಾಮದ ಮಹಿಳೆಯನ್ನು ತೇರದಾಳ ಪಿಎಸೈ ಕರಿಯಪ್ಪ ಬನ್ನಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಟಿಕೆಟ್ ರಹಿತ ಪ್ರಯಾಣ 93 ಸಾವಿರ ದಂಡ ವಸೂಲಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಸ್ಆರ್ ಟಿಸಿ) ಕೋಲಾರ ಜಿಲ್ಲಾ ಘಟಕ ನವೆಂಬರ್ ತಿಂಗಳಿನಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದವರನ್ನು ಪತ್ತೆ ಹಚ್ಚಿ 93,985 ರೂ.ಗಳ ದಂಡವನ್ನು ವಸೂಲಿ ಮಾಡಿದೆ. 3617 ಬಸ್ ಗಳಲ್ಲಿ ತಪಾಸಣೆ ನಡೆಸಿ ನಡೆಸಿ ದಂಡ ವಸೂಲಿ ಮಾಡಲಾಗಿದೆ ಎಂದು ವಿಭಾಗದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾಸನದಲ್ಲಿ 3ನೇ ಕೆಸ್ಆರ್ ಟಿಸಿ ಡಿಪೋ
ಹಾಸನದಲ್ಲಿ ಶೀಘ್ರದಲ್ಲೇ 3ನೇ ಕೆಎಸ್ಆರ್ ಟಿಸಿ ಡಿಪೋವನ್ನು ಆರಂಭಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಗರದ ರೈಲು ನಿಲ್ದಾಣದ ಬಳಿ ನೂತನವಾಗಿ ಆರಂಭಗೊಂಡ 2ನೇ ಘಟಕ ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು. 4 ಎಕರೆ ಜಮೀನಿನಲ್ಲಿ 3.10 ಕೋಟಿ ರೂ.ವೆಚ್ಚದಲ್ಲಿ 2ನೇ ಘಟಕವನ್ನು ಆರಂಭಿಸಲಾಗಿದೆ.

ಡಿ.21ರಂದು ದಾವಣಗೆರೆಗೆ ಸಿಎಂ
ಸಿಎಂ ಸಿದ್ದರಾಮಯ್ಯ ಡಿ.21ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. 21ರಂದು ಬೆಳಗ್ಗೆ 10 ಗಂಟೆಗೆ ಸಿಎಂ ಜಿಲ್ಲೆಗೆ ಆಗಮಿಸಲಿದ್ದು, ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕಮಗಳಿಗೆ ಚಾಲನೆ ನೀಡಲಿರುವ ಅವರು, ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಂಜನ್ ಕುಮಾರ್ ಹೇಳಿದ್ದಾರೆ.












Click it and Unblock the Notifications