ಭ್ರಷ್ಟಾಚಾರ ನಿರ್ಮೂಲನೆ ಪಕ್ಷಗಳಿಂದಲೇ ಆರಂಭವಾಗಲಿ
ಬೆಂಗಳೂರು, ಸೆ.28 : ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಲ್ಲಿ ರಾಜಕೀಯ ಪಕ್ಷಗಳು ಮೊದಲ ಸ್ಥಾನದಲ್ಲಿವೆ. ಆದರೆ, ಯಾವ ರಾಜಕೀಯ ಪಕ್ಷಗಳು ಇದನ್ನು ತಡೆಯಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಲೋಕಾಯುಕ್ತರು, ಭ್ರಷ್ಟಾಚಾರ ನಿರ್ಮೂಲನಗೆ ರಾಜಕೀಯ ಪಕ್ಷಗಳು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು ಎಂದು ಕರೆ ನೀಡಿದರು.
ಶಿಕ್ಷಣ, ಪೊಲೀಸ್, ಆರೋಗ್ಯ, ಆಹಾರ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅದರಂತೆ ರಾಜಕೀಯ ಪಕ್ಷಗಳಿಗೂ ಭ್ರಷ್ಟಾಚಾರ ಅಂಟಿಕೊಂಡಿದೆ. ಇಲಾಖೆಗಳಲ್ಲಿನ ಭ್ರಷ್ಟಾಚಾರದಿಂದಾಗಿ ಜನರಿಗೆ ಅಗತ್ಯ ಸೌಲಭ್ಯ ದೊರೆಯುತ್ತಿಲ್ಲ ಎಂದ ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಆಗದಿದ್ದರೆ ಸರ್ಕಾರ ಯಾವ ಯೋಜನೆಗಳು ಜನರಿಗೆ ತಲುಪುವುದಿಲ್ಲ. ರಾಜಕೀಯ ಪಕ್ಷಗಳು ತಮ್ಮೊಳಗಿನ ಭ್ರಷ್ಟಾಚಾರವನ್ನು ಮೊದಲು ಕಡಿಮೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚರಾದ ಕುರಿತು ಮಾತನಾಡಿದ ಅವರು, ಮೇ ಮತ್ತು ಜೂನ್ ತಿಂಗಳಲ್ಲಿ ಮಾತ್ರ ರಾಜ್ಯ ಸರ್ಕಾರ ವರ್ಗಾವಣೆ ಮಾಡಬೇಕು. ಈ ಕುರಿತು ಕಾನೂನು ರೂಪಿಸಬೇಕು ಎಂದು ಹೇಳಿದರು. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಪಕ್ಷಗಳೇ ಭ್ರಷ್ಟಾಚರದಲ್ಲಿ ಪ್ರಥಮ
ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನಗಳಿಸಿವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಹೇಳಿದ್ದಾರೆ. ರಾಜಕೀಯ ಪಕ್ಷಗಳು ತಮ್ಮೊಳಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿಕೊಂಡು ನಂತರ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಹೋಗಲಾಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಪತ್ನಿ ರಕ್ಷಿಸಲು ಹೋದ ಪತಿ ಸಾವು
ಉಡುಪಿ ತಾಲೂಕಿನ ತೆಂಕನಿಡಿಯೂರಿನಲ್ಲಿ ಆತ್ಮಹತ್ಯೆ ಮಾಡಲೆಂದು ಮಗುವಿನೊಂದಿಗೆ ಬಾವಿಗೆ ಹಾರಿದ ಪತ್ನಿಯ ರಕ್ಷಣೆಗೆ ತೆರಳಿದ ಪತಿ ಮತ್ತು ಮಗು ಸಾವಿಗೀಡಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ತೆಂಕನಿಡಿಯೂರು ನಿವಾಸಿಗಳಾದ ಚಂದ್ರಕಾಂತ (35)ಮತ್ತು ಅವರ ಪುತ್ರಿ ದೀಕ್ಷಾ (1) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರಕ್ಕೆ ತೃತೀಯ ರಂಗ ಅಗತ್ಯವಿದೆ
ದೇಶ ಇಂದು ಹಲವಾರು ಸಮಸ್ಯಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳು ಸೇರಿ ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಜೆಡಿಎಸ್ ರಾಷ್ಟ್ರಧ್ಯಕ್ಷ ಎಚ್.ಡಿ.ದೇವೇಗೌಡ ರಾಯಚೂರಿನಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ತೃತೀಯ ರಂಗ ಅನಿವಾರ್ಯ ಎಂದು ಗೌಡರು ವಿಶ್ಲೇಷಿಸಿದರು.

ರಾಹುಲ್ ಗಾಂಧಿ ಹೇಳಿಗೆ ಸಿದ್ದು ಬೆಂಬಲ
ಕಳಂಕಿತರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತರುವ ಸುಗ್ರೀವಾಜ್ಞೆಯನ್ನು ನಾನು ವಿರೋಧಿಸುತ್ತೇವೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಗೆ ತಾವು ಬೆಂಬಲ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜನಾದೇಶ ಮತ್ತು ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಹೋಗುವುದು ಸರಿಯಲ್ಲ. ಕಳಂಕಿತರಿಗೆ ತಾವು ಬೆಂಬಲ ನೀಡುವುದಿಲ್ಲ ಎಂದು ಸಿಎಂ ಬೆಂಗಳೂರಿನಲ್ಲಿ ಹೇಳಿದರು.

ಟ್ಯೂಷನ್ ಮಾಡಿದರೆ ಕೆಲಸ ಹೋಗುತ್ತೆ
ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಮನೆಪಾಠ ಮಾಡಿದರೆ, ಅವರನ್ನು ಸೇವೆಯಿಂದ ಖಾಯಂಆಗಿ ವಜಾಗೊಳಿಸುವ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತ ರಾಮೇಗೌಡ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಕುರಿತು ಆದೇಶ ನೀಡಲಾಗಿದೆ. ಸೆ.30ರೊಳಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಉಪನ್ಯಾಸಕರು ಟ್ಯೂಷನ್ ಮಾಡುತ್ತಿದ್ದರೆ, ಪತ್ತೆ ಹಚ್ಚಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಸಿಲಿಂಡರ್ ಸ್ಫೋಟ ಮೂವರ ಸಾವು
ಸಿಲಿಂಡರ್ ಸ್ಫೋಟಗೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕೊಪ್ಪಳ ಜಿಲ್ಲೆ ಅಗಳಕೇರಾ ಗ್ರಾಮದಲ್ಲಿ ನಡೆದಿದೆ. ಶನಿವಾರ ಬೆಳಗ್ಗೆ ಗೃಹಿಣಿ ವರಲಕ್ಷ್ಮೀ (28) ಅಡಿಗೆ ಮಾಡಲು ಸಿಲಿಂಡರ್ ಹಚ್ಚಿದಾಗ, ಆಕಸ್ಮಿಕವಾಗಿ ಅದು ಸ್ಪೋಟಗೊಂಡಿದೆ. ಇದರಿಂದಾಗಿ ಮನೆಯಲ್ಲಿದ್ದ ನಾಗೇಂದ್ರ (8), ದಿಲೀಪ (4) ಎಂಬ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಸೈನಿಕ ಶಾಲೆಗೆ ಅರ್ಜಿ ಆಹ್ವಾನ
ವಿಜಾಪುರದಲ್ಲಿರುವ ಸೈನಿಕ ಶಾಲೆಗೆ 2014-15 ನೇ ಸಾಲಿನಲ್ಲಿ ಪ್ರವೇಶ ಪರೀಕ್ಷೆ ಮೂಲಕ 6 ಮತ್ತು 7ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಪರೀಕ್ಷೆಯು 2014 ರ ಜನವರಿ 13 ರಂದು ನಡೆಯಲಿದ್ದು, ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 10 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ವಿವರ ಹಾಗೂ ಮಾಹಿತಿ ಪಡೆಯಲು ಪ್ರಾಂಶುಪಾಲರು, ಸೈನಿಕ ಶಾಲೆ, ವಿಜಾಪೂರ 586102 ಅಥವಾ ದೂರವಾಣಿ ಸಂಖ್ಯೆ 08352-270638 ಸಂಪರ್ಕಿಸಬಹುದಾಗಿದೆ. (ಭಾರತದ ಹೆಮ್ಮೆಯ ವಿಜಾಪುರ ಸೈನಿಕ ಶಾಲೆ)












Click it and Unblock the Notifications