ಜಾಮೀನಿನ ಮೇಲೆ ಹೊರ ಬಂದ ಯತ್ನಾಳ್ ಹೇಳಿದ್ದೇನು?
ಬೆಳಗಾವಿ, ಜೂ. 16 : "ಕಾಂಗ್ರೆಸ್ ಸರ್ಕಾರ ಮತ್ತು ಬಿಜಾಪುರ ಪೊಲೀಸರು ಪಿತೂರಿ ನಡೆಸಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ಬಂಧಿಸಿದ್ದರು. ಪೊಲೀಸರಿಗೆ ತಾಕತ್ತಿದ್ದರೆ, ಪಾಕಿಸ್ತಾನಕ್ಕೆ ಹೋಗಿ ದಾವುದ್ ಇಬ್ರಾಹಿಂ ಅವರನ್ನು ಹಿಡಿದುಕೊಂಡು ಬರಲಿ" ಎಂದು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.
ಮೇ 26ರಂದು ಬಿಜಾಪುರದಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಯತ್ನಾಳ್ ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದ್ದರಿಂದ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಸಂಪೂರ್ಣ ಗುಣಮುಖರಾದ್ದರಿಂದ ಮತ್ತು ನ್ಯಾಯಾಲಯದಿಂದ ಜಾಮೀನು ಸಿಕ್ಕಿದ್ದರಿಂದ ಭಾನುವಾರ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದರು. [ಬಿಜಾಪುರ ಗಲಭೆ :ಯತ್ನಾಳ್ ಬಂಧನ]
ಈ ಸಂದರ್ಭಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಂಪು ಘರ್ಷಣೆ ಪ್ರಕರಣ ನನ್ನನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಪಕ್ಷದವರು ಪೊಲೀಸರೊಂದಿಗೆ ಸೇರಿ ಹೆಣೆದ ಷಡ್ಯಂತ್ರವಾಗಿತ್ತು. ಬಿಜಾಪುರದ ಪೊಲೀಸರು ರಾಜ್ಯ ಕಾಂಗ್ರೆಸ್ ಸರ್ಕಾರದ ಏಜಂಟರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಪೊಲೀಸರು ದಾವೂದ್ ಇಬ್ರಾಹಿಂನನ್ನು ಹಿಡಿಯಲು ಪಾಕಿಸ್ತಾನಕ್ಕೆ ಹೋಗಲು ಸಿದ್ಧರಿದ್ದರೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತನಾಡಿ ಅನುಮತಿ ಕೊಡಿಸುತ್ತೇನೆ. ದಾವುದ್ ಹಿಡಿದು ತನ್ನಿ ಎಂದು ಸವಾಲು ಹಾಕಿದರು. ಬಿಜಾಪುರ ಪೊಲೀಸರು ನನ್ನನ್ನು ಬಂಧಿಸದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದರು. ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು

ಬಂಧನದಿಂದ ಯತ್ನಾಳ್ ಬಿಡುಗಡೆ
"ಕಾಂಗ್ರೆಸ್ ಸರ್ಕಾರ ಮತ್ತು ಬಿಜಾಪುರ ಪೊಲೀಸರು ಪಿತೂರಿ ನಡೆಸಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ಬಂಧಿಸಿದ್ದರು. ಪೊಲೀಸರಿಗೆ ತಾಕತ್ತಿದ್ದರೆ, ಪಾಕಿಸ್ತಾನಕ್ಕೆ ಹೋಗಿ ದಾವುದ್ ಇಬ್ರಾಹಿಂ ಅವರನ್ನು ಹಿಡಿದುಕೊಂಡು ಬರಲಿ" ಎಂದು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ. ಬಿಜಾಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಅವರು, ಜಾಮೀನು ಸಿಕ್ಕ ಹಿನ್ನಲೆಯಲ್ಲಿ ಬಿಡುಗಡೆಗೊಂಡರು.

ಮೋದಿ ರಕ್ಷಣೆಗಾಗಿ ಮೃತ್ಯುಂಜಯ ಯಾಗ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಕ್ಷೆಗಾಗಿ ಮತ್ತು ಅವರ ಮೂಲಕ ನಡೆಯಬೇಕಾದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಿಗೆ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿ ಹೊಸನಾಡು ಕೊಡ್ಯಡ್ಕ ಶ್ರೀ ದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಭಾನುವಾರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗಣಯಾಗ, ಚಂಡಿಕಾ ಹೋಮ, ಮಹಾ ಮೃತ್ಯುಂಜಯ ಯಾಗ ನಡೆಸಲಾಯಿತು. ಸಾಮೂಹಿಕ ಪ್ರಾರ್ಥನೆ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, "ಈ ಯಾಗ ಒಬ್ಬ ವ್ಯಕ್ತಿ ಅಥವಾ ಪಕ್ಷದ ಹಿತಕ್ಕಾಗಿ ಅಲ್ಲ. ಇದು ದೇಶದ ಬಗ್ಗೆ ಇರುವ ಕಾಳಜಿಗಾಗಿ" ಎಂದು ಹೇಳಿದರು.

ಜೂ.23ರಂದು ವಿಧಾನಸೌಧದಕ್ಕೆ ಮುತ್ತಿಗೆ
ಮಳೆ, ಬಿರುಗಾಳಿಗೆ ರೈತರ ಬೆಳೆ ಹಾನಿಯಾದಾಗ ಸರ್ಕಾರ, ತಜ್ಞರು ಮತ್ತು ರೈತರ ನೇತೃತ್ವದ ತಂಡದಿಂದ ಸಮೀಕ್ಷೆ ನಡೆಸಿ ವೈಜ್ಞಾನಿಕ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ, ಜೂನ್ 23ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಜೂನ್ 23ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ.

ಸ್ವಾಭಿಮಾನ್ ಅವಾರ್ಡ್ 2014 ಘೋಷಣೆ
ಮಂಗಳೂರಿನಿಂದ ಪ್ರಕಟವಾಗುವ ಕರ್ನಾಟಕದ ಏಕೈಕ ಸಾಪ್ತಾಹಿಕ `Daijiworld ವೀಕ್ಲಿ` ವಾರಪತ್ರಿಕೆ, ತನ್ನ ಐದನೇ ವರ್ಷದ ಸಂಭ್ರಮದ ಪ್ರಯುಕ್ತ, ಏಳು ವಿಶಿಶ್ಟ ಪ್ರತಿಭೆಯ ವ್ಯಕ್ತಿಗಳನ್ನು ಆಯ್ಕೆ ಮಾಡಿ ‘ಸ್ವಾಭಿಮಾನ್ ಅವಾರ್ಡ್ 2014` ನ್ನು ಘೋಷಿಸಿದೆ. ಈ ಪ್ರಶಸ್ತಿಯನ್ನು ಬುಧವಾರ ಜೂನ್ 18ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಪುರಸಭೆಯಲ್ಲಿ ಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತದೆ ಎಂದು ಪತ್ರಿಕಾಪ್ರಟಣೆಯಲ್ಲಿ ತಿಳಿಸಲಾಗಿದೆ. ಸಮಾರಂಭದಲ್ಲಿ ಮಾಜಿ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

`ಕಲಂಕ್ ದಿ ನೀರ್` ನಾಟಕ ಪ್ರದರ್ಶನ
ಸುವರ್ಣ ಪ್ರತಿಷ್ಠಾನ ಮಂಗಳೂರು ಮತ್ತು `ಕೋರ್ಟ್ ಮಾರ್ಷಲ್ ತಂಡ` ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ, ತುಳು ರಂಗಭೂಮಿಯಲ್ಲಿ `ಕಲಂಕ್ ದಿ ನೀರ್` ಎಂಬ ನಾಟಕ ಪ್ರದರ್ಶನವನ್ನು ಜೂ.17ರಂದು ಸಂಜೆ 6 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡಿದೆ.

ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ಕಳವು
ಜೂ.15ರ ಭಾನುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ನಿಂದ ಬಿಎಂಟಿಸಿ ಬಸ್ ಒಂದನ್ನು ಕಳ್ಳರು ಕದ್ದೊಯ್ದಿದ್ದಾರೆ. ಸೋಮವಾರ ಬಸ್ಸು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ಬಳಿ ಪತ್ತೆಯಾಗಿದೆ. 35ನೇ ಡಿಪೋಗೆ ಸೇರಿದ ಬಸ್ಸು ಕೆಎ-01ಎಫ್.ಎ 2338ಅನ್ನು ಭಾನುವಾರ ರಾತ್ರಿ ಬಸ್ ದುಷ್ಕರ್ಮಿಗಳು ಹೊತ್ತೊಯ್ದಿದ್ದರು. ಗುತ್ತಿ ಬಳಿ ಬಸ್ ನಿಲ್ಲಿಸಿ ಕಳ್ಳರು ಪರಾರಿಯಾಗಿದ್ದಾರೆ.












Click it and Unblock the Notifications