ಆರ್‌ಎನ್ ನಾಯಕ್ ಹತ್ಯೆ ಪ್ರಕರಣ, ಇಬ್ಬರ ಬಂಧನ
ಉತ್ತರ ಕನ್ನಡ, ಡಿ.23 : ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಉದ್ಯಮಿ ಹಾಗೂ ಬಿಜೆಪಿ ನಾಯಕ ಆರ್‌ಎನ್ ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಬಾಳೆಗುಳಿಯ ಇಬ್ಬರು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ದುಷ್ಕರ್ಮಿಗಳಿಗೆ ವಾಹನ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ನಾಯಕ್ ಹತ್ಯೆಗೆ ಬಳಸಲಾದ ಮಾರುತಿ ಓಮ್ನಿಯನ್ನು ಬಾಳೆಗುಳಿಯ ಮಾರುತಿ ನಗರದ ವ್ಯಕ್ತಿಗಳಿಂದ 34 ಸಾವಿರ ರೂ.ಗೆ ಖರೀದಿ ಮಾಡಲಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ದೊರಕಿದ್ದು, ಮುಂಗಡವಾಗಿ ಇಬ್ಬರು ವ್ಯಕ್ತಿಗಳಿಗೆ 22 ಸಾವಿರ ರೂ. ಹಣವನ್ನು ನೀಡಿದ್ದರು ಎಂದು ತಿಳಿದು ಬಂದಿದೆ. ಆದ್ದರಿಂದ ವಿಚಾರಣೆಗಾಗಿ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ. [ಶೂಟೌಟ್: ಉದ್ಯಮಿ ಆರ್ ಎನ್ ನಾಯಕ್ ಹತ್ಯೆ]
ನಾಯಕ್ ಅವರನ್ನು ಹತ್ಯೆ ಮಾಡಿದ ನಂತರ ಈ ವಾಹನ ಬಳಸಿ, ಪರಾರಾಯಾಗಲು ದುಷ್ಕರ್ಮಿಗಳು ಯೋಜನೆ ತಯಾರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಒಬ್ಬ ದುಷ್ಕರ್ಮಿ ಗುಂಡಿಗೆ ಬಲಿಯಾದರೆ, ಇನ್ನೊಬ್ಬ ನಾಗರಿಕರಿಗೆ ಸೆರೆ ಸಿಕ್ಕಿದ್ದರಿಂದ ಯೋಜನೆ ವಿಫಲವಾಗಿತ್ತು.
ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 4 ವಿಶೇಷ ತಂಡಗಳನ್ನು ಪಶ್ಚಿಮ ವಲಯ ಐಜಿಪಿ ಅವರ ನಿರ್ದೆಶನದ ಮೇರೆಗೆ ಎಸ್ಪಿ ಆರ್. ದಿಲೀಪ ರಚಿಸಿದ್ದು, ತನಿಖೆ ಕೈಗೊಂಡಿವೆ. ಆರೋಪಿಗಳು ಹೊರ ರಾಜ್ಯದವರಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ನಾಯಕ್ ಹತ್ಯೆ, ಇಬ್ಬರ ಬಂಧನ
ಉದ್ಯಮಿ ಹಾಗೂ ಬಿಜೆಪಿ ನಾಯಕ ಆರ್‌ಎನ್ ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಂಕೋಲಾ ತಾಲೂಕಿನ ಬಾಳೆಗುಳಿಯ ನಿವಾಸಿಗಳಾದ ಇಬ್ಬರನ್ನು ಬಂಧಿಸಲಾಗಿದ್ದು, ಇವರು ದುಷ್ಕರ್ಮಿಗಳಿಗೆ ವಾಹನ ಮಾರಾಟ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಬಹಿಷ್ಕಾರಕ್ಕೆ ಬಿತ್ತು ತೆರೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ ಮೂರೂವರೆ ತಿಂಗಳಿಂದ ದಲಿತ ಸಮಾದಾಯಕ್ಕೆ ಸವರ್ಣೀಯರು ಹಾಕಿದ್ದ ಸಾಮೂಹಿಕ ಬಹಿಷ್ಕಾರಕ್ಕೆ ಜಿಲ್ಲಾಧಿಕಾರಿ ಮನೋಜಕುಮಾರ ಜೈನ್ ಮತ್ತು ಶಾಸಕ ಸಿದ್ದು ನ್ಯಾಮಗೌಡ ಅವರು ಅಂತ್ಯ ಹಾಡಿದ್ದಾರೆ. ಸವರ್ಣೀಯರು ಮತ್ತು ದಲಿತರು ತಾವು ಇನ್ನು ಮುಂದೆ ಸೌಹಾರ್ದದಿಂದ ಬಾಳುವುದಾಗಿ ಸಂಧಾನ ಸಭೆ ಬಳಿಕ ಭರವಸೆ ನೀಡಿದ್ದಾರೆ. ಸೆ.14 ರಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ನಾಮಫಲಕಕ್ಕೆ ಕೆಲ ಕಿಡಿಗೇಡಿಗಳು ರಾಡಿ ಎರಚಿದ್ದನ್ನು ಖಂಡಿಸಿ ದಲಿತ ಸಮುದಾಯದವರು ಸವರ್ಣೀಯರ ವಿರುದ್ಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ಗ್ರಾಮದಲ್ಲಿನ ದಲಿತರಿಗೆ ಸವರ್ಣೀಯರು ಬಹಿಷ್ಕಾರ ಹೇರಿದ್ದರು.

ಜಕಣಾಚಾರ್ಯ ಸ್ಮರಣೋತ್ಸವದಲ್ಲಿ ಪಾಲ್ಗೊಳ್ಳಿ
ಜ.1ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಜಕಣಾಚಾರ್ಯ ಸ್ಮರಣೋತ್ಸವದಲ್ಲಿ ವಿಶ್ವಕರ್ಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಜಕಣಾಚಾರ್ಯರ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಉತ್ತರ ನೀಡಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಕರೆ ನೀಡಿದ್ದಾರೆ. ಹುಬ್ಬಳ್ಳಿಯ ಮಹಾವೀರ ಗಲ್ಲಿಯ ವಿಶ್ವಕರ್ಮ ದೇವಸ್ಥಾನದಲ್ಲಿ ನಡೆದ ಜಕಣಾಚಾರ್ಯ ಸ್ಮರಣೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಬಿಜೆಪಿ ಘಟಕದಿಂದ ಪಾದಯಾತ್ರೆ
ಉಡುಪಿ ಬಿಜೆಪಿ ಘಟಕ ಅಡಕೆ ಬೆಳೆ ನಿಷೇಧದ ಪ್ರಸ್ತಾಪ, ಜಿಲ್ಲೆಯನ್ನು ಹಾದು ಹೋಗುವ ರಾ.ಹೆ. 66ರ ಕಾಮಗಾರಿಯ ವಿಳಂಬ, ಕರಾವಳಿಯಲ್ಲಿ ಉಗ್ರರ ಚಟುವಟಿಕೆಗಳು ಮತ್ತು ರೈತರಿಗೆ ಕುಮ್ಕಿ ಹಕ್ಕು ನೀಡುವಲ್ಲಿ ರಾಜ್ಯ ಸರ್ಕಾರದ ನಿರಾಸಕ್ತಿಯನ್ನು ಪ್ರತಿಭಟಿಸಿ ಜ. 2ರಿಂದ 5ರವರೆಗೆ ಹೆಜಮಾಡಿಯಿಂದ ಬೈಂದೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕುರಿತು ಮಾಹಿತಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಪಾದಯಾತ್ರೆಯ ಮೊದಲ ದಿನ ಹೆಜಮಾಡಿಯಿಂದ ಉಡುಪಿಗೆ (28.50 ಕಿ.ಮೀ.), 2ನೇ ದಿನ ತೆಕ್ಕಟ್ಟೆಗೆ (27 ಕಿ.ಮೀ.), 3ನೇ ದಿನ ಮರವಂತೆವರೆಗೆ (23 ಕಿ.ಮೀ.) ಮತ್ತು ಕೊನೆಯ ದಿನ ಬೈಂದೂರಿಗೆ (15 ಕಿ.ಮೀ.) ಪಾದಯಾತ್ರೆ ನಡೆಯಲಿದೆ ಎಂದರು.

ಗುಲ್ಬರ್ಗದಲ್ಲಿ ವಸ್ತು ಪ್ರದರ್ಶನ
ಹೈ-ಕ ಭಾಗದ ಜಿಲ್ಲೆಗಳಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಡಿ.28 ಮತ್ತು 29ರಂದು ಗುಲ್ಬರ್ಗ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.












Click it and Unblock the Notifications