ಚಾಮರಾಜನಗರ ಇನ್ನು ಶಾಪಗ್ರಸ್ತ ಜಿಲ್ಲೆಯಲ್ಲ!
ಚಾಮರಾಜನಗರ, ಜ.21 : ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ 12,000 ಕೋಟಿ ಬಂಡವಾಳ ಹೂಡಲು ತಮಿಳುನಾಡು ಹೂಡಿಕೆದಾರರು ಸಿದ್ಧರಾಗಿದ್ದಾರೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಯೋಗದಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಕೈಗಾಕೋದ್ಯಮಿಗಳು ಸಿಎಂ ಸಿದ್ದರಾಮಯ್ಯ ಸಮ್ಮಖದಲ್ಲಿ ಬಂಡವಾಳ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಚಾಮರಾಜನಗರದ ಜಿಲ್ಲೆಯ ಕೊಡಿಸಿಯಾ ಟ್ರೇಡ್‌ಫೇರ್ ಕಾಂಪ್ಲೆಕ್ಸ್‌ನಲ್ಲಿ ಎಫ್‌ಕೆಸಿಸಿಐ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಯೋಗದೊಂದಿಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಅವರ ಸಮ್ಮುಖದಲ್ಲಿ 200ಕ್ಕೂ ಹೆಚ್ಚು ಹೂಡಿಕೆದಾರರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದರಿಂದ ಶಾಪಗ್ರಸ್ತ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಜಿಲ್ಲೆ ಮುಕ್ತವಾಗಿದ್ದು, ಉದ್ಯಮಿಗಳನ್ನು ಆಕರ್ಷಿಸುತ್ತಿದೆ.
ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭಾರತದ ಇತ್ತೀಚಿನ ಆರ್ಥಿಕ ಸಮೀಕ್ಷೆಯ ಪ್ರಕಾರ ಕರ್ನಾಟಕವು ಹೂಡಿಕೆಯ ಪ್ರಮಾಣದಲ್ಲಿ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಇದಕ್ಕೆ ಹೂಡಿಕೆದಾರರ ಸ್ನೇಹ ನೀತಿಗಳು, ಸೂಕ್ತ ವಾತಾವರಣ ಹಾಗೂ ಸರ್ಕಾರದ ಮಾನ್ಯತೆಗಳು ಕಾರಣವಾಗಿವೆ ಎಂದರು.
ಜವಳಿ, ಆಹಾರ ಸಂಸ್ಕರಣೆ, ಸೌರಶಕ್ತಿ , ಆಟೋ ಮೊಬೈಲ್, ಗಣಿಗಾರಿಕೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ತಮಿಳುನಾಡು ರಾಜ್ಯದ ಹೂಡಿಕೆದಾರರಿಗೆ ಚಾಮರಾಜನಗರದಲ್ಲಿ ಸೂಕ್ತ ಅವಕಾಶಗಳಿವೆ ಎಂದು ಸಿಎಂ ತಿಳಿಸಿದರು. ರಾಜ್ಯ ಸರ್ಕಾರ ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಿದ್ದು , ಇದರಲ್ಲಿ ಚಾಮರಾಜನಗರಕ್ಕೆ ಉತ್ತಮ ಅವಕಾಶಗಳನ್ನು ಒದಗಿಸುವುದಾಗಿ ಸಿಎಂ ಭರವಸೆ ನೀಡಿದರು. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ಚಾಮರಾಜನಗರ ಅಭಿವೃದ್ಧಿಗೆ ಸಿಎಂ ಯೋಜನೆ
ಚಾಮರಾಜನಗರ ಜಿಲ್ಲೆಯಲ್ಲಿ 12,000 ಕೋಟಿ ಬಂಡವಾಳ ಹೂಡಲು ತಮಿಳುನಾಡು ಹೂಡಿಕೆದಾರರು ಸಿದ್ಧರಾಗಿದ್ದಾರೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಯೋಗದಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ 200 ಕೈಗಾಕೋದ್ಯಮಿಗಳು ಸಿಎಂ ಸಿದ್ದರಾಮಯ್ಯ ಸಮ್ಮಖದಲ್ಲಿ ಬಂಡವಾಳ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಜವಳಿ, ಆಹಾರ ಸಂಸ್ಕರಣೆ, ಸೌರಶಕ್ತಿ , ಆಟೋ ಮೊಬೈಲ್, ಗಣಿಗಾರಿಕೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ತಮಿಳುನಾಡು ರಾಜ್ಯದ ಹೂಡಿಕೆದಾರರಿಗೆ ಚಾಮರಾಜನಗರದಲ್ಲಿ ಸೂಕ್ತ ಅವಕಾಶಗಳಿವೆ ಎಂದು ಸಿಎಂ ಹೂಡಿಕೆದಾರರಿಗೆ ತಿಳಿಸಿದ್ದಾರೆ.

ತುಮಕೂರಿನಲ್ಲಿ ಡಿವಿಜಿ ನೆನಪು ಕಾರ್ಯಕ್ರಮ
ಜ.24ರ ಶುಕ್ರವಾರ ಸಂಜೆ 6-30 ಕ್ಕೆ ತುಮಕೂರು ನಗರದ ಸೋಮೇಶ್ವರಪುರಂ ಮುಖ್ಯರಸ್ತೆಯಲ್ಲಿರುವ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ವತಿಯಿಂದ "ಡಿವಿಜಿ ನೆನಪು" ಸರಣಿ ಉಪನ್ಯಾಸ ಮಾಲಿಕೆಯ 23 ನೇ ತಿಂಗಳಿನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪ.ಪೂ.ಶ್ರೀ ಸ್ವಾಮಿ ಜಪಾನಂದಜಿಯವರು "ದೇಶಸೇವೆ ಅಲ್ಲ, ದೇಶದ ಋಣ" ಎಂಬ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರಿನ ಬಸವನಗುಡಿ ಕ್ಷೇತ್ರದ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ತುಮಕೂರಿನ ಅರುಣ ಆಸ್ಪತ್ರೆ ಹಾಗೂ ಅಶ್ವಿನಿ ಆಯುರ್ವೇದ ಮಹಾವಿದ್ಯಾಲಯದ ನಿರ್ದೇಶಕ ಡಾ. ಕೆ.ಜಿ.ರಾಘವೇಂದ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೆಳಗಾವಿಯಲ್ಲಿ ಕನ್ನಡಿಗರಿಗೆ ಜಯ
ಬೆಳಗಾವಿಯಲ್ಲಿ ಎಂಇಎಸ್ ಅಭ್ಯರ್ಥಿಗಳಿಗೆ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಸದಸ್ಯರು ಒಂದಾಗಿ ತಿರುಗೇಟು ನೀಡಿದ್ದಾರೆ. ಬೆಳಗಾವಿ ತಾಪಂ ಅಧ್ಯಕ್ಷ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಕನ್ನಡಿಗರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ತಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿಯ ಗಜಾನನ ನಾಯಕ ಎಂಇಎಸ್ ಬೆಂಬಲಿತ ಅಭ್ಯರ್ಥಿ ಹನುಮಂತ ಪೂಜಾರಿ ಅವರನ್ನು 8 ಮತಗಳ ಅಂತರದಿಂದ ಸೋಲಿಸಿದ್ದಾರೆ. 40 ಸದಸ್ಯ ಬಲದ ತಾಪಂನಲ್ಲಿ ಕಳೆದ ಬಾರಿ ಎಂಇಎಸ್ ಪಾರಮ್ಯ ಮೆರೆದಿತ್ತು. ಸೋಮವಾರ ನಡೆದ ಅಧ್ಯಕ್ಷರ ಆಯ್ಕೆಯ ಸಭೆಗೆ 9 ಸದಸ್ಯರು ಗೈರಾಗಿದ್ದರು. ಒಬ್ಬ ಸದಸ್ಯ ತಟಸ್ಥನಾಗಿದ್ದು ಚಲಾವಣೆಗೊಂಡ 30 ಮತಗಳಲ್ಲಿ ಗಜಾನನ ನಾಯಕಗೆ 19 ಹಾಗೂ ಎಂಇಎಸ್ ಹನುಮಂತ ಪೂಜಾರಗೆ ಕೇವಲ 11 ಮತ ಬಂದವು.

ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ಆಹ್ವಾನ
ಕಳೆದ 33 ವರ್ಷಗಳಿಂದ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡಬಿದ್ರೆಯ ಸಾಹಿತ್ಯ ಪ್ರಶಸ್ತಿ ಪೀಠವು ಈ ಬಾರಿಯ ಪ್ರಶಸ್ತಿಗಾಗಿ 2008ರಲ್ಲಿ ಪ್ರಥಮಾವೃತ್ತಿಯಾಗಿ ಪ್ರಕಟವಾದ ಕನ್ನಡ ಸಾಹಿತ್ಯದ ಯಾವುದೇ ಪ್ರಕಾರದ (ಕಾವ್ಯ, ಕಾದಂಬರಿ, ನಾಟಕ, ಸಣ್ಣಕತೆ, ವಿಮರ್ಶೆ ಇತ್ಯಾದಿ) ಸಾಹಿತ್ಯ ಕೃತಿಗಳನ್ನು ಪರಿಶೀಲನೆಗಾಗಿ ಆಹ್ವಾನಿಸಿದೆ. ಪ್ರಶಸ್ತಿಯು ಗೌರವ ಸಂಭಾವನೆ, ಪ್ರಶಸ್ತಿ ಪತ್ರ, ಸನ್ಮಾನವನ್ನು ಒಳಗೊಂಡಿದೆ. ಆಸಕ್ತರು ಮತ್ತು ಸಾಹಿತಿಗಳು ಕೃತಿಯ 3 ಪ್ರತಿಗಳನ್ನು ಫೆಬ್ರವರಿ 28, 2014ರೊಳಗೆ ಕಳುಹಿಸಬಹುದಾಗಿದೆ. ವಿಳಾಸ : ಮುನಿರಾಜ ರೆಂಜಾಳ, ಸಹ ನಿರ್ದೇಶಕರು, ವರ್ಧಮಾನ ಸಾಹಿತ್ಯ ಪ್ರಶಸ್ತಿ ಪೀಠ, ಜೆ.ಜೆ. ಕಾಲೇಜು ಮೂಡಬಿದ್ರೆ. ದ.ಕ. 574227. ದೂ. 944 9936232.

ಉಡುಪಿಯಲ್ಲಿ ಕೃಷಿ ಉತ್ಸವ
ಜನವರಿ 25 ಹಾಗೂ 26 ರಂದು ಕುಂದಾಪುರ ತಾಲೂಕಿನ ಸರ್ಕಾರಿ ಪದವಿ ಕಾಲೇಜು, ಕೋಟೇಶ್ವರ ಮೈದಾನದಲ್ಲಿ ಉಡುಪಿ ಜಿಲ್ಲಾ ಕೃಷಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕೃಷಿ ವಸ್ತು ಪ್ರದರ್ಶನ, ಜಾನುವಾರು ಪ್ರದರ್ಶನ, ಶ್ವಾನ ಪ್ರದರ್ಶನ, ಫಲಪುಷ್ಪ ಪ್ರದರ್ಶನ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ರೈತರಿಗಾಗಿ ಗ್ರಾಮೀಣ ಕ್ರೀಡೆ ಇತ್ಯಾದಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಉಡುಪಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕೆ.ಎಂ. ಕಾರ್ಯಪ್ಪ ಜನ್ಮ ದಿನಾಚರಣೆ
ಮಡಿಕೇರಿಯಲ್ಲಿ ಜ.28ರಂದು ಭಾರತೀಯ ಸೇನಾ ಪಡೆಯ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 115ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಪದಾಧಿಕಾರಿಗಳು ಹೇಳಿದ್ದಾರೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ 115ನೇ ಜನ್ಮದಿನದ ಅಂಗವಾಗಿ ಜ.28ರಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ಬಳಿಯಲ್ಲಿಯೇ ಅರ್ಥಪೂರ್ಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜನ್ಮದಿನದ ಅಂಗವಾಗಿ ಜ.27ರಂದು ಜಿಲ್ಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದ್ದು, ಎಲ್‌ಕೆಜಿಯಿಂದ 7ನೇ ತರಗತಿ, 8ರಿಂದ 10ನೇ ತರಗತಿ ಮತ್ತು ಪಿಯುಸಿ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗುವುದು ಎಂದು ತಿಳಿಸಿದರು.












Click it and Unblock the Notifications