ಎತ್ತಿನಹೊಳೆಯಿಂದ ದಕ್ಷಿಣ ಕನ್ನಡಕ್ಕೆ ಹಾನಿಯಿಲ್ಲ
ಮಂಗಳೂರು, ಜ.20 : ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ, ಜಿಲ್ಲೆಯ ಜನರು ಯೋಜನೆ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ನೈಸರ್ಗಿಕ ಅನಿಲ ಮತ್ತು ಅರಣ್ಯ, ಪರಿಸರ ಖಾತೆ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ವೀರಪ್ಪ ಮೊಯ್ಲಿ, ಎತ್ತಿನಹೊಳೆ ಯೋಜನೆ ಮತ್ತು ನೇತ್ರಾವತಿ ನದಿತಿರುವು ಯೋಜನೆ ಎರಡು ಬೇರೆ-ಬೇರೆ ಯೋಜನೆಗಳು. ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವುದು ಎತ್ತಿನಹೊಳೆ ಯೋಜನೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಮಶಿವಯ್ಯ ಅವರು ಪ್ರಸ್ತಾವನೆ ಮಾಡಿರುವ ನೇತ್ರಾವತಿ ನದಿ ತಿರುವು ಯೋಜನೆ ಅನುಷ್ಠಾನ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪ್ರಸ್ತುತ ಅನುಷ್ಠಾನಗೊಳ್ಳುವ ಎತ್ತಿನಹೊಳೆ ಯೋಜನೆಯಲ್ಲಿ ನೇತ್ರಾವತಿ ನದಿಯಿಂದ ನೀರು ತೆಗೆದುಕೊಂಡು ಹೋಗುವುದಿಲ್ಲ. ಕೊಂಡ್ಯುಯ್ದುವುದಿಲ್ಲ. ಉಪ ತೊರೆಗಳ ನೀರನ್ನು ವರ್ಷದ 5 ತಿಂಗಳು ಮಾತ್ರ ತೆಗೆಯಲಾಗುತ್ತಿದೆ. ಇದರಿಂದ ಜಿಲ್ಲೆಗೆ ಧಕ್ಕೆಯಾಗುವುದಿಲ್ಲ ಎಂದರು.
ಎತ್ತಿನ ಹೊಳೆ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದರು. ಆದ್ದರಿಂದ ಯೋಜನೆ ಕುರಿತು ಹೊಸದಾಗಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವ ಅಗತ್ಯವಿಲ್ಲ ಎಂದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಹಾನಿಯಿಲ್ಲ
ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ, ಜಿಲ್ಲೆಯ ಜನರು ಯೋಜನೆ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ ಮತ್ತು ಯೋಜನೆಯನ್ನು ವಿರೋಧಿಸಬಾರದು ಎಂದು ಕೇಂದ್ರ ನೈಸರ್ಗಿಕ ಅನಿಲ ಮತ್ತು ಅರಣ್ಯ, ಪರಿಸರ ಖಾತೆ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಎತ್ತಿನಹೊಳೆ ಯೋಜನೆ ಮತ್ತು ನೇತ್ರಾವತಿ ನದಿ ತಿರುವು ಯೋಜನೆ ಎರಡು ಬೇರೆ-ಬೇರೆ ಯೋಜನೆಗಳಾಗಿದ್ದು, ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವುದು ಎತ್ತಿನಹೊಳೆ ಯೋಜನೆ. ಇದರಿಂದ ಜಿಲ್ಲೆಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಕಲಿ ವೈದ್ಯರಿಗೆ ಕಡಿವಾಣ ಹಾಕಿ
ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಾರ್ವಜನಿಕರು, ವೈದ್ಯರ ಸೋಗಿನಲ್ಲಿ ಮುಗ್ಧ ಜನತೆಯ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ನಕಲಿ ವೈದ್ಯರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನಕಲಿ ವೈದ್ಯರ ಹಾವಳಿ ತಡೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬೆಳಗಾವಿಯನ್ನು ನಕಲಿ ವೈದ್ಯರ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸಮ್ಮೇಳನಕ್ಕೆ ಡಾ.ಸೋಮಶೇಖರ ಇಮ್ರಾಪುರ ಅಧ್ಯಕ್ಷ
ಗದಗದಲ್ಲಿ ಫೆಬ್ರವರಿ 2ನೇ ವಾರದಲ್ಲಿ ನಡೆಯುವ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜಾನಪದ ತಜ್ಞ, ವಿದ್ವಾಂಸ, ಕವಿ ಡಾ. ಸೋಮಶೇಖರ ಇಮ್ರಾಪುರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ ಹೇಳಿದ್ದಾರೆ. ರೋಣ ತಾಲೂಕಿನಲ್ಲಿ ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 2ನೇ ವಾರದಲ್ಲಿ ನಡೆಯಲಿದೆ. ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಬೇಕೆಂಬುದು ಸ್ವಾಗತ ಸಮಿತಿಯ ಆಶಯವಾಗಿದೆ ಎಂದರು.

ಕಾರ್ಣಿಕ ನುಡಿಯಲು ದೀಕ್ಷೆ
ಬಳ್ಳಾರಿ ಜಿಲ್ಲೆಯ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ದೇಗುಲದ ಕಾರ್ಣಿಕ ನುಡಿವ ಗೊರವಯ್ಯ ಅವರಿಗೆ ದೇಗುಲದ ಧಾರ್ಮಿಕ ವಿಧಿ ವಿಧಾನ ಹಾಗೂ ಸಂಪ್ರದಾಯಗಳಂತೆ ಭಾನುವಾರ ಅಧಿಕೃತವಾಗಿ ದೀಕ್ಷೆ ನೀಡಲಾಯಿತು. ಹಿಂದೆ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ಅವರು, ಆರೇಳು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರ ಪುತ್ರ ಮಂಜಪ್ಪ ಅವರನ್ನು ಕಾರ್ಣಿಕ ನುಡಿವ ಹೊಸ ಗೊರವಯ್ಯರಾಗಿ ನೇಮಕ ಮಾಡಲಾಗಿತ್ತು. ಭಾನುವಾರ ಅವರಿಗೆ ಅಧಿಕೃತವಾಗಿ ದೀಕ್ಷೆ ನೀಡಲಾಗಿದೆ. ದೀಕ್ಷಾ ಕಾರ್ಯಕ್ರಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಗುಲದಲ್ಲಿ ವಿಶೇಷ ಪೂಜೆ, ಹೋಮಹವನ ನಡೆಸಲಾಯಿತು.

ವ್ಯಾಪಾರಿಗಳೊಂದಿಗೆ ಸಭೆ
ಕೆ.ಆರ್.ಮಾರುಕಟ್ಟೆಯ ವಾಣಿಜ್ಯ ಸಂಕೀರ್ಣ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ವ್ಯಾಪಾರಿಗಳ ಜೊತೆ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತು ಆಯುಕ್ತ ಲಕ್ಷ್ಮೀನಾರಾಯಣ್ ಸಭೆ ನಡೆಸುತ್ತಿದ್ದಾರೆ. ಶನಿವಾರ ಸಂಕೀರ್ಣ ತೆರವು ಕಾರ್ಯಾಚರಣೆಗೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ ಕಾರಣ ಕಾರ್ಯಾವಣೆಗೆ ಸ್ಥಗಿತಗೊಳಿಸಲಾಗಿತ್ತು. ಕೆ.ಆರ್.ಮಾರುಕಟ್ಟೆ ಬಳಿಯ ಸೇತುರಾವ್ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ಮುಂದಾಗಿದೆ. ಮೊದಲು ವಾಣಿಜ್ಯ ಸಂಕೀರ್ಣವನ್ನು ನೆಲಸಮಗೊಳಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಯೋಜನೆ ರೂಪಿಸಿದ್ದರು. ಆದರೆ, ಅದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದರು. [ವ್ಯಾಪಾರಿಗಳ ವಿರೋಧ]

ವಿಧಾನಸೌಧದ ಸುತ್ತ ನಿಷೇಧಾಜ್ಞೆ
ಜ.22ರಿಂದ 30ರವರೆಗೆ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ನಡೆಯುವ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತಮುತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಉಂಟಾಗುವಂತೆ ಪ್ರತಿಭಟನೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಬೆಂಗಳೂರು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ನಿಬಂಧನೆಗಳು
* ಕಾನೂನುಭಂಗ ಉಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
* ಮೆರವಣಿಗೆ ಮತ್ತು ಸಭೆಗಳನ್ನು ನಡೆಸಬಾರು.
* ಶಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಇನ್ನೂ ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯಬಾರದು.
* ಯಾವುದೇ ಸಂರಕ್ಷಾರ ಪದಾರ್ಥ ಅಥವಾ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ.
* ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರ ಅಥವಾ ಇತರೆ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

ಬೇಲೇಕೇರಿ ಪ್ರಕರಣ ಮತ್ತೊಂದು ಚಾರ್ಚ್ ಶೀಟ್
ಬೇಲೇಕೇರಿ ಅದಿರು ನಾಪತ್ತೆ ಪ್ರಕಣದ ತನಿಖೆ ಮುಂದುವರೆದಿದೆ. ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ವಿದೇಶಗಳಿಗೆ ಅದಿರು ರಪ್ತು ಮಾಡಿದ ಆರೋಪದಡಿ ಎಸ್ ಬಿ ಲಾಜಿಸ್ಟಿಕ್ ವಿರುದ್ದ ಸಿಬಿಐ ಮತ್ತೆರಡು ಪೂರಕ ಚಾರ್ಜ್ ಶೀಟ್ ಗಳನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಎಸ್ ಬಿ ಲಾಜಿಸ್ಟಿಕ್ ಕಂಪನಿ ಬೇಲೇಕೇರಿ ಬಂದರಿನಿಂದ 1.53 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ 18 ಬೇನಾಮಿ ಕಂಪನಿಗಳ ಹೆಸರಲ್ಲಿ ಸಾಗಾಟ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 43.54ಕೋಟಿ ರೂಪಾಯಿ ನಷ್ಟವುಂಟಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಗಾಲಿ ಜನಾರ್ದನ ರೆಡ್ಡಿ, ಅವರ ಆಪ್ತ ಆಲಿಖಾನ್, ಶಾಸಕ ಆನಂದ್ ಸಿಂಗ್, ನಾಗೇಂದ್ರ, ಖಾರದಪುಡಿ ಮಹೇಶ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.












Click it and Unblock the Notifications