ಮೇಧಾ ಪಾಟ್ಕರ್ ಬಸವ ಕೃಷಿ' ಪ್ರಶಸ್ತಿ, ಇತರ ಸುದ್ದಿ
ಬಾಗಲಕೋಟೆ, ಜ.10 : ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ 2014ನೇ ಸಾಲಿನ 'ಬಸವ ಕೃಷಿ' ಪ್ರಶಸ್ತಿಗೆ ಮಧ್ಯಪ್ರದೇಶದ ಪರಿಸರವಾದಿ, ಸಾಮಾಜಿಕ ಸೇವಾ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಜ.14ರಂದು ಕೂಡಲಸಂಗಮದ ಸಭಾಭವನದಲ್ಲಿ ನಡೆಯಲಿರುವ 5ನೇ ಕೃಷಿ ಸಂಕ್ರಾತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೇಧಾ ಪಾಟ್ಕರ್ ಅವರನ್ನು 2014ರ ಬಸವ ಕೃಷಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಕೃಷಿ ಹಾಗೂ ಕೃಷಿಕರನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ 2012ರ ಮಕರ ಸಂಕ್ರಾಂತಿಯಂದು ರಾಷ್ಟ್ರ ಮಟ್ಟದ 'ಬಸವ ಕೃಷಿ ಪ್ರಶಸ್ತಿ' ಸ್ಥಾಪಿಸಲಾಯಿತು ಎಂದರು.
2012ರಲ್ಲಿ ರಾಜಸ್ಥಾನದ ರಾಜೇಂದ್ರಸಿಂಗ್, 2013ರಲ್ಲಿ ಅಣ್ಣಾ ಅಜಾರೆ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2014ರ ಜ.14ರಂದು ಪ್ರಶಸ್ತಿಯನ್ನು ಮೇಧಾ ಪಾಟ್ಕರ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು. ಪ್ರಶಸ್ತಿಯು 50 ಸಾವಿರ ನಗದು, ತಾಮ್ರ ಪತ್ರ ಹಾಗೂ ಸ್ಮರಣಿಕೆ ಹೊಂದಿದೆ. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ಮೇಧಾ ಪಾಟ್ಕರ್ ಅವರಿಗೆ ಬಸವಶ್ರೀ ಕೃಷಿ ಪ್ರಶಸ್ತಿ
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ 2014ನೇ ಸಾಲಿನ 'ಬಸವ ಕೃಷಿ' ಪ್ರಶಸ್ತಿಗೆ ಮಧ್ಯಪ್ರದೇಶದ ಪರಿಸರವಾದಿ, ಸಾಮಾಜಿಕ ಸೇವಾ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಆಯ್ಕೆ ಮಾಡಿದೆ. ಜ.14ರಂದು ಕೂಡಲಸಂಗಮದ ಸಭಾಭವನದಲ್ಲಿ ನಡೆಯಲಿರುವ 5ನೇ ಕೃಷಿ ಸಂಕ್ರಾತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಬೆಳಗಾವಿಯಲ್ಲಿ ಇಂದಿನಿಂದ ವೈನ್ ವೈಭೋಗ
ಕರ್ನಾಟಕ ದ್ರಾಕ್ಷಾರಸ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೂರು ದಿನಗಳ ಕಾಲ ವೈನ್ ಉತ್ಸವ ಹಮ್ಮಿಕೊಳ್ಳಲಾಗಿದೆ. ಟಿಳಕವಾಡಿಯ ಮಿಲೇನಿಯಂ ಗಾರ್ಡನ್‌ದಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು, ಶುಕ್ರವಾರ ಸಂಜೆ ತೋಟಗಾರಿಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ. ವೈನ್ ಸೇವನೆಯ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ದ್ರಾಕ್ಷಿ ಬೆಳೆಗಾರರು ಅನುಸರಿಸಬೇಕಾದ ಬೇಸಾಯ ಕ್ರಮಗಳನ್ನು ತಿಳಿಸಲು ಈ ಮೇಳವನ್ನು ಆಯೋಜಿಸಲಾಗಿದೆ.

ವಿಧಾನಸೌಧಕ್ಕೆ ಮುತ್ತಿಗೆ
ಸರ್ಕಾರ ಪ್ರತಿ ಮೆಟಿಕ್ ಟನ್ ಕಬ್ಬಿಗೆ 2,500ದರ ನೀಡಬೇಕು ಎಂದು ಅಧಿಸೂಚನೆ ಹೊರಡಿಸಿ ಎರಡು ತಿಂಗಳು ಕಳೆದಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಇದನ್ನು ಅನುಸರಿಸುತ್ತಿಲ್ಲ. ಆದ್ದರಿಂದ ಕಾರ್ಖನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರ ಶಾಂತಕುಮಾರ ಬೀದರ್ ನಲ್ಲಿ ಹೇಳಿದ್ದಾರೆ.
ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳು ಒಳಒಪ್ಪಂದ ಮಾಡಿಕೊಂಡು, ಎಲ್ಲರೂ ಪ್ರತಿಟನ್ ಕಬ್ಬಿಗೆ ರು. 2ಸಾವಿರ ಮಾತ್ರ ನೀಡುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಾಜಿ ಶಾಸಕರ ಪಾದಯಾತ್ರೆ
ನವಲಗುಂದ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿವೆ, ಅವುಗಳಿಗೆ ಮರಳಿ ಚಾಲನೆ ನೀಡುವಂತೆ ಆಗ್ರಹಿಸಿ ಜ. 18ರಂದು ಬಿಜೆಪಿ ಕಾರ್ಯಕರ್ತರು ಹಾಗೂ ರೈತರೊಂದಿಗೆ ಅಳಗವಾಡಿಯಂದ ನವಲಗುಂದವರೆಗೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. ಅಳಗವಾಡಿಯಲ್ಲಿ ಹುತಾತ್ಮ ರೈತನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಪಾದಯಾತ್ರೆ ಆರಂಭಿಸಲಾಗುತ್ತದೆ. ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಕಾಮಗಾರಿ ಆರಂಭಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.

ರಷ್ಯಾ ಯೋಧರಿಂದ ತರಬೇತಿ
ಕಾರವಾರಕ್ಕೆ ಆಗಮಿಸಿರುವ ದೇಶದ ಹೆಮ್ಮೆಯ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಆಗಮಿಸಿರುವ ರಷ್ಯಾದ ನೌಕಾಪಡೆಯ ನೂರಕ್ಕೂ ಹೆಚ್ಚು ತರಬೇತುದಾರರು ವರ್ಷ ಕಾಲ ಕಾರವಾರದಲ್ಲೇ ವಾಸ್ತವ್ಯ ಮಾಡಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಕಾರವಾರದಲ್ಲಿ ರಷ್ಯಾ ನೌಕಾಪಡೆ ಅಧಿಕಾರಿಗಳ ವಾಸ್ತವ್ಯಕ್ಕಾಗಿ ಎರಡು ಹೋಟೆಲ್‌ಗಳನ್ನು ಸಜ್ಜುಗೊಳಿಸಲಾಗಿದೆ. ನಗರದ ಪ್ರೀಮಿಯರ್ ರೆಸಿಡೆನ್ಸಿ ಹಾಗೂ ಸದಾಶಿವಗಡದಲ್ಲಿನ ಸ್ಟರ್ಲಿಂಗ್ ಹೋಟೆಲ್‌ಗಳಲ್ಲಿ ರಷ್ಯಾದ ಸೈನಿಕರು ವಾಸ್ತವ್ಯ ಹೂಡಲಿದ್ದಾರೆ.

ಕೋಣ ಕದ್ದವರಿಗೆ 60ಸಾವಿರ ದಂಡ
ಬಳ್ಳಾರಿಯಲ್ಲಿ ದೇವರಿಗೆ ಬಿಟ್ಟ ಹರಕೆಯ ಕೋಣವನ್ನು ಕದ್ದು ತಿಂದಿದ್ದ 10 ಕಳ್ಳರಿಗೆ 60 ಸಾವಿರ ರೂ.ದಂಡ ವಿಧಿಸಲಾಗಿದೆ. ಬಳ್ಳಾರಿ ಸಮೀಪದ ಹಾವಿನಾಳ ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನದ ಹರಕೆಯ ಕೋಣವನ್ನೇ ತಿಂದು ತೇಗಿದ ಮುದ್ದಟನೂರು ಗ್ರಾ.ಪಂ. ವ್ಯಾಪ್ತಿಯ ಹೊಸೂರಿನ ಕಳ್ಳರು ಗ್ರಾಮ ಪಂಚಾಯಿತಿ ನಡೆಸಿದ ಪಂಚಾಯಿತಿಯಲ್ಲಿ ದಂಡ ಕಟ್ಟಲು ಒಪ್ಪಿಕೊಂಡಿದ್ದಾರೆ. ಜ.4ರಂದು ಮಾರೆಮ್ಮನ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಜಾತ್ರೆಯಲ್ಲಿ ಬಲಿ ಕೊಡಲು ಕಟ್ಟಿಹಾಕಿದ್ದ ಕೋಣವನ್ನು ಹತ್ತು ಜನ ಕಳ್ಳರು ಕದ್ದು ತಿಂದಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.












Click it and Unblock the Notifications