ರಾಜ್ಯ ಸುದ್ದಿ ಸಂಕ್ಷಿಪ್ತ: ಕನಕಪುರದಲ್ಲಿ ಭೂಮಿ ನಡುಕ
ಬೆಂಗಳೂರು, ಏ.20: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಭಾನುವಾರ ಬೆಳಗ್ಗೆ ಲಘು ಭೂಕಂಪನ ಅನುಭವವಾಗಿದೆ. ತಾಲೂಕಿನ ಕೆಲವು ಗ್ರಾಮದ ಜನತೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟಾಗಿತ್ತು.
ಭಾನುವಾರ ಬೆಳಿಗ್ಗೆ 6 ರಿಂದ 8 ಸೆಕೆಂಡುಗಳ ಕಾಲ ಲಘು ಭೂಕಂಪವಾಗಿದೆ ಎಂದು ತಿಳಿದು ಬಂದಿದೆ. ಆದರೆ, ಜಿಲ್ಲಾಡಳಿತ ಇದು ಬಂಡೆ ಒಡೆಯಲು ಇಟ್ಟ ಡೈನಾಮೆಟ್ ಸದ್ದಿನಿಂದ ಆಗಿರುವ ಪ್ರಮಾದ, ಈ ರೀತಿ ಸ್ಫೋಟದ ಸದ್ದು ಆಗಾಗ ಕೇಳಿ ಬರುತ್ತದೆ ಎಂದಿದೆ.
ಕನಕಪುರ ತಾಲೂಕಿನ ಗ್ರಾಮಗಳಾದ ಕೆರಳಾಳುಸಂದ್ರ ಮತ್ತು ಹೆಗ್ಗನೂರಿನಲ್ಲಿ ಭೂಕಂಪನವಾಗಿದ್ದು, ಕೆಲ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಆದರೆ, ರಿಕ್ಟರ್ ಮಾಪಕದಲ್ಲಿ 3 ಅಂಕಗಳ ತೀವ್ರತೆಗಿಂತ ಕಡಿಮೆ ಇರುವುದರಿಂದ ಇದನ್ನು ಭೂಕಂಪನ ಎನ್ನಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಭೂಕಂಪನದ ಬಗ್ಗೆ ಇನ್ನೂ ಸ್ಪಷ್ಟ ವಿವರ ಹೊರಬಿದ್ದಿಲ್ಲ.
ಕನಕಪುರ ತಾಲೂಕಿನ ಕೆರಳಾಲುಸಂದ್ರ, ಹೆಗ್ಗನೂರು ಮುಂತಾದೆಡೆಗಳಲ್ಲಿ ಬೆಳಗ್ಗಿನ ಜಾವ 3.08ರ ಸುಮಾರಿಗೆ ಲಘು ಭೂ ಕಂಪನ ಸಂಭವಿಸಿದ್ದು, ತೀವ್ರತೆ 1.4ರಷ್ಟು ಇತ್ತು. ಕಂಪನ ಪರಿಣಾಮವಾಗಿ ಬಸವೇಶ್ವರ ದೇಗುಲದ ಬಳಿ ನಿವಾಸಿ ರಾಮಚಂದ್ರ ಎಂಬುವರ ಮನೆ ಗೊಡೆ ಬಿರುಕು ಬಿಟ್ಟಿದೆ. ಕಂಪನದ ನಂತರ ಭಾರಿ ಬಿರುಗಾಳಿ ಮಳೆ ಕಾಣಿಸಿಕೊಂಡಿದೆ. ಕೆಲವು ಮನೆಗಳ ಮೇಲ್ಛಾವಣಿ ಹಾರಿ ಹೋದ ಘಟನೆ ವರದಿಯಾಗಿದೆ. ಹುಬ್ಬಳ್ಳಿ, ಗದಗ, ಸಕಲೇಶಪುರ, ಯಲ್ಲಾಪುರ ಮುಂತಾದ ಕಡೆಗಳಿಂದ ಬಂದಿರುವ ಚುಟುಕು ಸುದ್ದಿಗಳತ್ತ ಒಮ್ಮೆ ಕಣ್ಣಾಡಿಸಿ

ಗದಗದಲ್ಲಿ ಕೃಷಿ ಚಟುವಟಿಕೆ ಜೋರು
ಗದಗ, ಗಜೇಂದ್ರಗಢ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಚೆಗೆ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗೆ ಚಾಲನೆ ದೊರಕಿದೆ. ದೂರದ ಊರುಗಳಿಗೆ ಗುಳೆ ಹೋಗಿದ್ದ ರೈತರು ಊರಿಗೆ ಮರಳುತ್ತಿದ್ದಾರೆ.
ಅಸಲಿ ಮುಂಗಾರಿಗೂ ಮುನ್ನ ಹಂಗಾಮಿ ಬೆಳೆಗಳ ಬೀಜ ಬಿತ್ತನೆಗಾಗಿ ಹೊಲಗಳನ್ನು ಹದಗೊಳಿಸಲು ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಸಜ್ಜೆ, ಹೈಬ್ರೀಡ್ಜೋಳ, ಗುರೆಳ್ಳು, ಎಳ್ಳು, ತೊಗರಿ ಇತ್ಯಾದಿ ಬೀಜಗಳ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.
ಮಳೆ ಇಲ್ಲದೆ ಉದ್ಯೋಗ ಅರಸಿ ರೈತರು ಗೋವಾ, ಕಾರವಾರ, ಚಿಕ್ಕಮಗಳೂರು, ಶಿವಮೊಗ್ಗ ಮತ್ತಿತರ ಕಡೆ ಹೋಗಿದ್ದರು. ಈಗ ಕಳೆದ ಎರಡು ಮೂರು ದಿನಗಳಿಂದ ಉತ್ತಮ ಮುಂಗಾರು ಮಳೆಯಿಂದ ಕೃಷಿ ಚಟುವಟಿಕೆಗೆ ಚಾಲನೆ ದೊರೆತಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ..
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮುಂಬೈನಿಂದ ಬಂದಿಳಿದು ರನ್ ವೇ ನಲ್ಲಿ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ವಿಮಾನದ ಮುಂಭಾಗ ಜಖಂಗೊಂಡ ಘಟನೆ ಶನಿವಾರ ಸಂಭವಿಸಿದೆ.
ದೆಹಲಿ-ಜಬಲ್ ಪುರ-ಮುಂಬೈ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2 ಗಂಟೆಗೆ ಇಳಿದಿತ್ತು. ಈ ಘಟನೆ ನಂತರ ಮೂರು ತಾಸು ತಡವಾಗಿ ಗೋವಾದಿಂದ ಬಂದ ಮತ್ತೊಂದು ವಿಮಾನ ಏರಿ ಪ್ರಯಾಣಿಕರು ಸಂಚರಿಸಿದರು. ವಿಮಾನದಲ್ಲಿದ್ದ 71ಕ್ಕೂ ಅಧಿಕ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಪ್ರಕಟಿಸಿದೆ.

ಯಲ್ಲಾಪುರ ತಾಲೂಕಿನಲ್ಲಿ ಮಹಾರುದ್ರಯಾಗ
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದ ಬಿಲ್ಲಿಗದ್ದೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಏ. 24ರಿಂದ 26ರ ವರೆಗೆ ಮಹಾರುದ್ರ ಯಾಗ, ವನಸ್ಪತಿ ಹವನ, ದುರ್ಗಾಹವನ, ಶ್ರೀಗಳ ಪಾದಪೂಜೆ ಮುಂತಾದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಏ. 24ರಂದು ಬೆಳಗ್ಗೆ ಆರಂಭಗೊಳ್ಳಲಿರುವ ಧಾರ್ಮಿಕ ಕಾರ್ಯಕ್ರಮಗಳು ಏ. 26ರಂದು ಆಗಮಿಸಲಿರುವ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಆಶೀರ್ವಚನದೊಂದಿಗೆ ಸಂಪನ್ನಗೊಳ್ಳಲಿದೆ.
ಮೇ.25 ರಂದು ಸಾಮೂಹಿಕ ವಿವಾಹ
ಡಾ. ಜೈಭೀಮ್ ದಲಿತ ಜಾಗೃತಿ ಸಮಿತಿ ವತಿಯಿಂದ 10 ನೇ ವರ್ಷದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಶಾಸಕ ಡಿ.ಸಿ. ತಮ್ಮಣ್ಣನವರ ಸಾರಥ್ಯದಲ್ಲಿ ಮೇ 25 ರಂದು ಉಚಿತ ಸಾಮೂಹಿಕ ಸರಳ ವಿವಾಹವನ್ನು ಆಯೋಜಿಸಲಾಗಿದೆ.
ಆಸಕ್ತ ವಧುವರರು ವಾಸಸ್ಥಳ ದೃಢೀಕರಣ ಪತ್ರ, ವಧುವಿನ ಜನ್ಮದಿನಾಂಕ ಪ್ರಮಾಣ ಪತ್ರ, ವಧು-ವರರ 3 ಭಾವಚಿತ್ರ ಹಾಗೂ ಜಾತಿ ದೃಢೀಕರಣ ಪತ್ರಗಳನ್ನು ಮೇ 20 ರೊಳಗೆ ಡಾ. ಜೈಭೀಮ್ ದಲಿತ ಜಾಗೃತಿ ಸಮಿತಿ ಕಚೇರಿಯಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ.
ಅಂತರ್ಜಾತಿ ವಿವಾಹಕ್ಕೆ ಸರ್ಕಾರದ ವತಿಯಿಂದ 1 ಲಕ್ಷ ಸಹಾಯ ಧನದ ಜೊತೆಗೆ ಸಾಮಾನ್ಯ ವಧು-ವರರಿಗೆ ಸರ್ಕಾರದ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ 10 ಸಾವಿರ ನೀಡಲಾಗುವುದು. ಮಾಹಿತಿಗಾಗಿ ಸಮಿತಿ ಅಧ್ಯಕ್ಷ ಸಿ. ಶಿವಲಿಂಗಯ್ಯ ಮೊ-99456 20345

ಸಕಲೇಶಪುರ: ಕರಿಮೆಣಸಿಗೆ ಚಿನ್ನದ ಬೆಲೆ
1 ಕೆಜಿ ಕರಿಮೆಣಸಿನ ಬೆಲೆ ದಾಖಲೆಯ 700 ರು ಕಡೆ ದಾಟುತ್ತಿದ್ದು ಕರಿಮೆಣಸು ಈಗ ಬೆಳೆಗಾರರ ಪಾಲಿಗೆ ಚಿನ್ನವಾಗಿ ಪರಿಣಮಿಸಿದೆ. ಶನಿವಾರ ಧಾರಣೆ ಏರುಗತಿಯಲ್ಲಿ ಸಾಗಿದ್ದು ಮಾರುಕಟ್ಟೆಯಲ್ಲಿ 650 ರಿಂದ 700 ರು ಗಡಿಯಲ್ಲಿತ್ತು. ಬಿಳಿ ಮೆಣಸು 1100-1150 ರು ದಾಟಿದೆ. ಮುಂದಿನ ದಿನಗಳಲ್ಲಿ ಧಾರಣೆ 800 ರು ಗಡಿ ದಾಟುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications