ಜಿಲ್ಲಾಧಿಕಾರಿಗಳೇ 'ಬಾಸ್ ಇಸಂ' ಬಿಟ್ಟು ಕೆಲಸ ಮಾಡಿ: ಸಿಎಂ ಬೊಮ್ಮಾಯಿ
ಬೆಂಗಳೂರು, ಡಿ.31: ಜಿಲ್ಲೆಗಳಲ್ಲಿ 'ಬಾಸ್ ಇಸಂ' ಬಿಡಿ, ಜನರೊಂದಿಗೆ ಬೆರೆತು ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಸಿದರು. ಡಿಸಿಗಳ ಜೊತೆಗಿನ ಸಭೆಯ ಆರಂಭದಲ್ಲೇ ಸಿಎಂ ಮಾತಿನ ಚಾಟಿ ಬೀಸಿದರು. ಜಿಲ್ಲಾಧಿಕಾರಿಗಳಿಗೆ ಆಡಳಿತದ ಪಾಠ ಮಾಡಿದರು.
'ನೀವುಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನ್ಕೊಂಡು ಫೀಲ್ಡಿನಲ್ಲೂ ಅದೇ ಥರ ಕೆಲಸ ಮಾಡಬೇಡಿ. ಜನರ ಸೇವೆ ಮಾಡುವ ಸೇವಕರು ನೀವು. ಜಿಲ್ಲೆಗಳಲ್ಲಿ ನೀವು ಬಾಸ್‌ಗಳು ಎಂಬ ಅಭಿಪ್ರಾಯದಿಂದ ಹೊರಬಂದು ಕೆಲಸ ಮಾಡಿ' ಎಂದು ಸಲಹೆ ನೀಡಿದರು.

ಪರಿಹಾರ ವಿಳಂಬ: ತರಾಟೆಗೆ
ಸರ್ಕಾರದ ವಿವಿಧ ಪರಿಹಾರಗಳನ್ನು ವಿತರಣೆ ಮಾಡಲು ವಿಳಂಬ ಮಾಡಿದ ಜಿಲ್ಲಾಧಿಕಾರಿಗಳನ್ನು ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡರು.
ಪರಿಹಾರದ ಆ್ಯಪ್‌ನಲ್ಲಿ ಅಪ್‌ಲೋಡ್ ಆದ 48 ತಾಸಿನೊಳಗೆ ಪರಿಹಾರ ನೀಡಬೇಕು. ಆದರೆ, ಕೆಲವು ಜಿಲ್ಲೆಗಳಲ್ಲಿ ವಿಳಂಬ ಆಗುತ್ತಿದೆ. ಈ ಬಗ್ಗೆ ದೂರುಗಳೂ ಸಹ ಬಂದಿವೆ. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಒದಗಿಸಲು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಹೇಳಿದರು.
ಕೆಳಹಂತದವರ ಮೇಲೂ ನಿಗಾ ಇಡಿ:
ನಿಮ್ಮ ಕೆಳಹಂತದ ಅಧಿಕಾರಿಗಳ ಮೇಲೂ ನಿಗಾ ಇಡಿ. ಅವರು ಡಿಸಿಗಳಂತೆ ವರ್ತಿಸಲು ಅವಕಾಶ ನೀಡಬೇಡಿ. ಜನರ ನಡುವೆ ಹೋಗಿ ಜನರ ಜತೆ ಕೆಲಸ ಮಾಡಬೇಕು. ಅಧಿಕಾರ ನಿಮ್ಮಲ್ಲಿ ಇನ್ನಷ್ಟು ಮೃದುತ್ವ, ವಿನಯತೆ ತರಬೇಕು. ನಿಮ್ಮಸ್ವಂತಿಕೆ, ವಿವೇಚನೆ ಬಳಸಿ ಕೆಲಸ ಮಾಡಿ ಎಂದು ಹೇಳಿದರು.

ಓಮಿಕ್ರಾನ್ ಬಗ್ಗೆ ಎಚ್ಚರಿಕೆ ಇರಲಿ:
ಕೋವಿಡ್ ನಿರ್ವಹಣೆ ಸಂಬಂಧ ಮುಖ್ಯಮಂತ್ರಿ ಪ್ರಗತಿ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಆರೋಗ್ಯದ ತುರ್ತು ಎದುರಾದರೂ ಸಹ ಎಲ್ಲ ಜಿಲ್ಲಾಧಿಕಾರಿಗಳೂ ಸನ್ನದ್ಧರಾಗಿರಬೇಕು. ಮೂರನೇ ಅಲೆಯಲ್ಲಿ ಹೆಚ್ಚು ಅನಾಹುತಗಳಿಗೆ ಅವಕಾಶ ನೀಡದೆ ಪರಿಸ್ಥಿತಿಗೆ ತಕ್ಕಂತೆ ಕಾಲಕಾಲಕ್ಕೆ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.












Click it and Unblock the Notifications