ಅಕ್ರಮ ಆಸ್ತಿಗಳಿಕೆ; ಪೊಲೀಸ್ ಇನ್ಸ್ ಪೆಕ್ಟರ್ ಮೇಲಿನ ಕೇಸ್ ರದ್ದು
ಬೆಂಗಳೂರು, ಆಗಸ್ಟ್ 30: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬಿ. ರಾಮಕೃಷ್ಣಗೆ ದೊಡ್ಡ ರಿಲೀಫ್ ಸಿಕ್ಕಿದೆ. 4 ವರ್ಷ ಜೈಲು ಶಿಕ್ಷೆ ಮತ್ತು 30 ಲಕ್ಷ ರೂ. ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿ, ರಾಮಕೃಷ್ಣರನ್ನು ಖುಲಾಸೆಗೊಳಿಸಿದೆ.
2019ರಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಪೊಲೀಸ್ ಇನ್ಸ್ಪೆಕ್ಟರ್ ಬಿ. ರಾಮಕೃಷ್ಣ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?; ಮೇಲ್ಮನವಿ ಪುರಸ್ಕರಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಸೂಕ್ತ ಸಾಕ್ಷಾಧಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಣ್ಣು ಮುಚ್ಚಿಕೊಂಡು ಲೋಕಾಯುಕ್ತ ಪೊಲೀಸರ ದೋಷಾರೋಪ ಪಟ್ಟಿಯನ್ನು ಅಂಗೀಕರಿಸಿದೆ.
ಮೇಲ್ಮನವಿದಾರರ ಪತ್ನಿ ವ್ಯಾಪಾರ ಮಾಡುತ್ತಿದ್ದರು. ಅವರು ಸಹ ತಮ್ಮ ಆದಾಯಕ್ಕೆ ಪ್ರತ್ಯೇಕವಾಗಿ ತೆರಿಗೆ ಪಾವತಿಸುತ್ತಿದ್ದರು. ಆ ವ್ಯಾಪಾರದಿಂದ ಬಂದ ಆದಾಯವನ್ನು ಮೇಲ್ಮನವಿದಾರರ ಅಕ್ರಮ ಸಂಪಾದನೆ ಎಂಬುದಾಗಿ ವಿಚಾರಣಾ ನ್ಯಾಯಾಲಯ ಪರಿಗಣಿಸಿದೆ. ಇನ್ಸ್‌ಪೆಕ್ಟರ್ ಅವರ ಹೂಡಿಕೆ ಮತ್ತು ವೆಚ್ಚಗಳನ್ನು ತಪ್ಪಾಗಿ ಲೆಕ್ಕಾಚಾರ ಮಾಡಿದೆ ಎಂದು ಆದೇಶಿಸಿದೆ.
ಅಲ್ಲದೆ, ಸರ್ಕಾರದ ಇಲಾಖೆ ವಿಚಾರಣೆಯಲ್ಲಿ ರಾಮಕೃಷ್ಣ ನಿರಪರಾಧಿಯಾಗಿ ಸಾಬೀತಾಗಿದ್ದಾರೆ. ಪರಿಶೀಲನಾ ಅವಧಿಯಲ್ಲಿ ರಾಮಕೃಷ್ಣ ಸುಮಾರು 31.35 ಲಕ್ಷ ಆದಾಯ ಹೊಂದಿದ್ದರು. ಅದರಲ್ಲಿ ಒಟ್ಟಾರೆ 20.81 ಲಕ್ಷ ರೂ. ಆಸ್ತಿ ಮತ್ತು ಹೊಣೆಗಾರಿಕೆಗಳಿಂದ ಬಂದ ಆದಾಯವಾಗಿತ್ತು. 10.5 ಲಕ್ಷ ರೂ. ಆದಾಯ ಹೆಚ್ಚಿದೆ ಎಂದು ಹೇಳಲಾಗಿದೆ.
ಬಲ್ಲ ಮೂಲಗಳ ಆದಾಯವು ಆಸ್ತಿ ಮತ್ತು ಹೊಣೆಗಾರಿಕೆಗಳಿಗಿಂತ ಹೆಚ್ಚಿರುವ ಸಂದರ್ಭದಲ್ಲಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಡಿ ವಿಚಾರಣೆಗೆ ಒಳಪಡಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ರಾಮಕೃಷ್ಣಗೆ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ ಮತ್ತು ದಂಡವನ್ನು ರದ್ದುಪಡಿಸಿದೆ
ಪ್ರಕರಣದ ಹಿನ್ನೆಲೆ: 2008ರಲ್ಲಿ ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಪೊಲೀಸ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಅವರ ಮೇಲೆ ಲೊಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. 1996 ರಿಂದ 2008ರ ನಡುವಿನ ಸೇವಾ ಅವಧಿಯಲ್ಲಿ ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 2007-10ರಲ್ಲಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ರಾಮಕೃಷ್ಣರನ್ನು ದೋಷಿಯಾಗಿ ಪರಿಗಣಿಸಿತ್ತು. ಜತೆಗೆ, 4 ವರ್ಷ ಜೈಲು ಶಿಕ್ಷೆ ಮತ್ತು 30 ಲಕ್ಷ ರೂ. ದಂಡ ವಿಧಿಸಿ 2017ರಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications