ಸ್ಟಾರ್ ಪಟ್ಟಿಯಲ್ಲಿ ಹೆಸರಿಲ್ಲದ ನಟ ಸುದೀಪ್ ಖರ್ಚು ಯಾರ ಲೆಕ್ಕಕ್ಕೆ?: ಚುನಾವಣಾಧಿಕಾರಿಗಳ ತಾರತಮ್ಯ ಬಗ್ಗೆ ಎಎಪಿ ಪ್ರಶ್ನೆ
ಬೆಂಗಳೂರು, ಏಪ್ರಿಲ್ 27: ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಎಲ್ಲ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರನ್ನು ಇಟ್ಟುಕೊಂಡು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಪ್ರಚಾರ ವಿಚಾರದಲ್ಲಿ ಚುನಾವಣಾಧಿಕಾರಿಗಳ ವಿರುದ್ಧ ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.
ಸ್ಥಳೀಯ ಚುನಾವಣಾ ಅಧಿಕಾರಿಗಳು ಬಿಜೆಪಿ ಪರವಾಗಿ ವರ್ತಿಸುತ್ತಿದೆ. ಆಮ್ ಆದ್ಮಿ ಪಾರ್ಟಿ ವಿರುದ್ಧ ಮಲತಾಯಿ ಧೋರಣೆ ತೋರುತ್ತಿದೆ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇಲ್ಲದ ನಟ ಸುದೀಪ್ ಅವರು ಖರ್ಚುವೆಚ್ಚ ಯಾರ ಖಾತೆಯಿಂದ ಮಾಡಲಾಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ವಕೀಲರ ಘಟಕದ ಸದಸ್ಯರಾದ ಗಂಗಾಧರ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಎಎಪಿ ರಾಜ್ಯ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿ ಮಾತನಾಡಿದ ಗಂಗಾಧರ್, ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳಿಗೆ ಬಿಜೆಪಿ ಅಭ್ಯರ್ಥಿಗಳು ತೊಂದರೆ ನೀಡುತ್ತಿದ್ದಾರೆ. ಜೊತೆಗೆ, ಚುನಾವಣಾ ಅಧಿಕಾರಿಗಳು ಕೂಡ ತಾರತಮ್ಯ ಮಾಡುತ್ತಿದ್ದಾರೆ. ಎಎಪಿ ಮುಖಂಡರು ನೀಡುವ ದೂರುಗಳಿಗೆ ಚುನಾವಣಾ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸುವದರ ಜೊತೆಗೆ ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಕ್ಷೇತ್ರಗಳಲ್ಲಿ ಎಎಪಿಗೆ ನೋಟಿಸ್ ನೀಡಿ ಕಿರುಕಳ
ನಗರದ ಗಾಂಧಿನಗರ ವಿಧಾನಸಭಾ ಕ್ಷೇತ್ರ, ಬೆಂಗಳೂರು ದಕ್ಷಿಣ, ಮಹಾಲಕ್ಷ್ಮೀ ಲೇಔಟ್, ರಾಜರಾಜೇಶ್ವರಿನಗರ ಕ್ಷೇತ್ರಗಳಲ್ಲಿ ಸ್ಥಳೀಯ ಚುನಾವಣಾಧಿಕಾರಿಗಳು (ಆರ್‌ಒ) ಎಎಪಿಗೆ ನೋಟಿಸ್‌ಗಳನ್ನು ನೀಡಿ ಕಿರುಕುಳ ನೀಡುತ್ತಿದ್ದಾರೆ. ಮನೆಮನೆಗೆ ತೆರಳಿ ಪ್ರಚಾರ ಮಾಡುವುದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಆಪಾದಿಸಿದರು.
ಚುನಾವಣೆ ಸಂದರ್ಭದಲ್ಲಿ ಮನೆ ಮನೆ ಪ್ರಚಾರಕ್ಕೂ ಅವಕಾಶ ನೀಡದಿದ್ದರೆ ಪ್ರಚಾರ ಮಾಡುವುದು ಹೇಗೆ?. ಮನೆ ಮನೆ ಪ್ರಚಾರಕ್ಕೆ 48 ಗಂಟೆ ಕಾಲ ಮೊದಲೇ ಎಲ್ಲ ವಿವರಗಳನ್ನು ನೀಡಿ ಅನುಮತಿ ಪಡೆಯಬೇಕೆಂದು ಹೇಳುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳ ವೈಯಕ್ತಿಕ ಖಾತೆಗಳಲ್ಲಿ ಜಾಹೀರಾತಲ್ಲದ ಪೋಸ್ಟ್ ಹಾಕುವುದಕ್ಕೂ ಚುನಾವಣಾ ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಇನ್ನು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯಾದ ಯಾದಗಿರಿಯ ಸುರಪುರ ವಿಧಾನಸಭಾ ಕ್ಷೇತ್ರದ ತೋಳದಿನ್ನೆ ಗ್ರಾಮದಲ್ಲಿ ಎಎಪಿ ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ಬೀದಿಸಭೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ನಮ್ಮಗಳ ಎಎಪಿ ಕಾರ್ಯಕರ್ತರ ಮೇಲೆ ಹೊಡೆದು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಚುನಾವಣಾ ಆಯೋಗ, ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ ಎಂಬುದರ ಸ್ಪಷ್ಟತೆ ಸಿಕ್ಕಿಲ್ಲ. ಅವರೆಲ್ಲರೂ ಆಡಳಿತ ಪಕ್ಷ ಬಿಜೆಪಿಯ ಪರವಾಗಿ ಕೆಲಸ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಪಟ್ಟಿಯಲ್ಲಿಲ್ಲದ ನಟ ಸುದೀಪ್ ಖರ್ಚು ಯಾರ ಲೆಕ್ಕಕ್ಕೆ?
ಸ್ಯಾಂಡಲ್‌ವುಡ್ ಸ್ಟಾರ್ ನಟ ಸುದೀಪ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಮಾತ್ರ ಮತಯಾಚನೆ ಮಾಡುವುದೆಂದು ಹೇಳಿದ್ದರು. ಅಧಿಕೃತ ಸ್ಟಾರ್ ಪ್ರಚಾರಕದ ಪಟ್ಟಿಯಲ್ಲಿ ಸುದೀಪ್ ಹೆಸರೇ ಇಲ್ಲ. ಆದರೂ ಏಪ್ರಿಲ್ 26ರಂದು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ತಿಪ್ಪೇಸ್ವಾಮಿ ಪರ ಅವರು ಮತಯಾಚಿಸಿ ಪ್ರಚಾರದಲ್ಲಿ ತೊಡಗಿದ್ದರು.
ಪ್ರಚಾರ ಕಾರ್ಯಕ್ಕೆಂದೆ ನಟ ಸುದೀಪ್ ಹೆಲಿಕಾಪ್ಟರ್ ಮೂಲಕ ತೆರಳಿ, ಐಶಾರಾಮಿ ಕಾರುಗಳಲ್ಲಿ ತಿರುಗಾಡಿದ್ದಾರೆ. ಈ ಓಡಾಟಕ್ಕೆಲ್ಲ ಅಂದಾಜು ಕನಿಷ್ಠ ಸುಮಾರು 15 ರಿಂದ 40 ಲಕ್ಷ ರೂಪಾಯಿಯಷ್ಟು ಖರ್ಚಾಗಿರುತ್ತದೆ. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತಿದೆ? ಈ ಖರ್ಚುಗಳನ್ನು ಚುನಾವಣಾ ಆಯೋಗವು ಯಾರ ಲೆಕ್ಕಕ್ಕೆ ಸೇರಿಸುತ್ತಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ವಕೀಲರ ಘಟಕದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ, ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಅಂಜನಾ ಗೌಡ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications