ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬೆನ್ನಲ್ಲೇ ಹೊತ್ತಿದ ಕಿಚ್ಚು!
ಹುಬ್ಬಳ್ಳಿ: ಅಂದಹಾಗೆ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ, ಐಎಸ್ಐ ಉಗ್ರರ ಜೊತೆಗೆ ನಂಟು ಇದ್ದವರು ಭಾಗವಹಿಸಿಲ್ಲ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಖಾ ಸುಮ್ಮನೆ ಈ ರೀತಿ ಆರೋಪ ಮಾಡುತ್ತಾ ಇದ್ದಾರೆ ಅಂತ, ಬಾಷಾ ಪೀರಾ ದರ್ಗಾ ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕ ಮತ್ತು ಉತ್ತರ ಕರ್ನಾಟಕ ಭಾಗದ ಹಿರಿಯ ರಾಜಕೀಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಹಿನ್ನೆಲೆ ಈ ರೀತಿ ಅವರು ಮಾತನಾಡಿದ್ದಾರೆ.
ಮುಸ್ಲಿಂ ಧರ್ಮ ಗುರುಗಳ ಸಮಾವೇಶಕ್ಕೆ 150 ಕ್ಕೂ ಸೂಫಿಗಳಿಗೆ ಆಹ್ವಾನ ನೀಡಲಾಗಿತ್ತು. 100 ಕ್ಕೂ ಹೆಚ್ಚು ಧರ್ಮ ಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ಇದರಲ್ಲಿ ಯಾರೊಬ್ಬರೂ ಐಎಸ್ಐ ಉಗ್ರರ ಜೊತೆ ನಂಟು ಇದ್ದವರು ಇಲ್ಲ. ಪೊಲೀಸ್ ಇಲಾಖೆಯ ಸೂಚನೆಯ ಮೇರೆಗೆ ವೇದಿಕೆ ಮೇಲೆ 25 ಜನ ಧರ್ಮಗುರುಗಳಿಗೆ ಅವಕಾಶ ನೀಡಲಾಗಿತ್ತು. ವೇದಿಕೆ ಮೇಲೆ, ಯಾರು ಭಾಗವಹಿಸುತ್ತಾರೆ ಅನ್ನೋ ಮಾಹಿತಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ನೀಡಲಾಗಿತ್ತು ಎಂದು ಸಯ್ಯದ್ ತಾಜುದ್ದೀನ್ ಖಾದ್ರಿ ಅವರು ಸ್ಪಷ್ಟಪಡಿಸಿದ್ದಾರೆ.

ಉಗ್ರರ ಜೊತೆ ನಂಟಿದ್ದರೆ ತನಿಖೆಗೆ ಸಿದ್ಧ!
ಇದೇ ವೇಳೆ ಯತ್ನಾಳ್ ಹೇಳಿಕೆ ವಿರುದ್ಧ ಗರಂ ಆದ ಸಯ್ಯದ್ ತಾಜುದ್ದೀನ್ ಖಾದ್ರಿ ಅವ್ರು, ಅಕಸ್ಮಾತ್ ಐಎಸ್ಐ ಉಗ್ರರ ಜೊತೆ ನಂಟು ಇದ್ದಿದ್ದೇ ನಿಜವಾದರೆ ಗುಪ್ತಚರ ಇಲಾಖೆಗೆ ಮಾಹಿತಿ ಇರಬೇಕಿತ್ತು. ಐಎಸ್ಐ ಉಗ್ರರ ಜೊತೆಗೆ, ಯಾರು ನಂಟು ಇಟ್ಟುಕೊಂಡಿದ್ದಾರೆ ಅನ್ನೋದನ್ನು ಯತ್ನಾಳ ಅವರೆ ಹೇಳಲಿ. ಬಸನಗೌಡ ಪಾಟೀಲ್ ಯತ್ನಾಳ್ ಉಗ್ರರ ಜತೆಗಿನ ನಂಟು ಇದ್ದವರ ಹೆಸರು ಬಹಿರಂಗಪಡಿಸಲಿ, ನಾವು ಎಲ್ಲಾ ತನಿಖೆಗೆ ಸಿದ್ದ. ಸರಿಯಾದ ರೀತಿಯ ತನಿಖೆ ಆಗಲಿ ಅಂತಾ, ಸರ್ಕಾರಕ್ಕೂ ಮನವಿ ಮಾಡುತ್ತೇವೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿರುವ ಆರೋಪಕ್ಕೆ ಇದೀಗ ಸಯ್ಯದ್ ತಾಜುದ್ದೀನ್ ಖಾದ್ರಿ ಉತ್ತರಿಸಿದ್ದಾರೆ.
ಯತ್ನಾಳ್ ವಿರುದ್ಧ ಹಿಂಡಸಗೇರಿ ಆಕ್ರೋಶ
ಈ ಮಧ್ಯೆ 'ಬಸನಗೌಡ ಪಾಟೀಲ್ ಯತ್ನಾಳ್ ಹುಚ್ಚರಂತೆ ವರ್ತನೆ ಮಾಡುತ್ತಿದ್ದಾರೆ. ಇದನ್ನ ಕೇಳಿ ನನಗೆ ಆಶ್ಚರ್ಯ ಆಗಿತ್ತು' ಅಂತ ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಹಾಗೂ ಮುಸ್ಲಿಂ ಧರ್ಮ ಗುರು ಸಮಾವೇಶ ಉಸ್ತುವಾರಿ ಹೊತ್ತಿದ್ದ, ಹಿಂಡಸಗೇರಿ ಅವರು ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿಯ ಶಾಸಕ ಹಾಗೂ ಉತ್ತರ ಕರ್ನಾಟಕದ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಎ.ಎಮ್.ಹಿಂಡಸಗೇರಿ ಹೀಗೆ ಪ್ರತಿಕ್ರಿಯೆ ನೀಡಿದ್ದರು. ಹಾಗೇ ಸಯ್ಯದ್ ತಾಜುದ್ದೀನ್ ಖಾದ್ರಿ ಕೂಡ ಈಗ ಆಕ್ರೋಶ ಹೊರಹಾಕಿದ್ದಾರೆ.

ಐಎಸ್ಐ ಉಗ್ರರ ಜತೆ ನಂಟು...
ಯತ್ನಾಳ ಅವರ ಹೇಳಿಕೆ ಸಣ್ಣ ವಿಷಯ ಅಲ್ಲ ರಾಜ್ಯ ಸರ್ಕಾರದ ಎಲ್ಲಾ ಜನ ಪ್ರತಿನಿಧಿಗಳು ಆ ಸಮಾವೇಶಕ್ಕೆ ಬಂದಿದ್ದರು. ಯತ್ನಾಳ ಅವರ ಮನಸ್ಸು ಸ್ಥಿರವಾಗಿಲ್ಲ ಅವರ ಪಕ್ಷದ ವಿರುದ್ದವೇ ಯತ್ನಾಳ್ ಮನಸ್ಸಿಗೆ ಬಂದ ರೀತಿ ಮಾತನಾಡುತ್ತಾರೆ. ಐಎಸ್ಐ ಉಗ್ರರ ಜತೆ ನಂಟು ಇದ್ದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸತ್ಯಕ್ಕೆ ದೂರವಾದದ್ದು ನಾನು ಇದನ್ನು ಖಂಡಿಸುತ್ತೇನೆ ಅಂತಾ ಎ.ಎಮ್. ಹಿಂಡಸಗೇರಿ ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಒಳ್ಳೆ ಬುದ್ಧಿ ಕೊಡಲಿ, ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ರಾಜಕೀಯವಾಗಿ ಮಾತನಾಡಲಿ, ಆದ್ರೆ ಹೀಗೆ ಧಾರ್ಮಿಕವಾಗಿ ಮಾತನಾಡುವ ವರ್ತನೆ ಸರಿ ಅಲ್ಲ. ಅಲ್ಲಿ ಅನೇಕ ಗುರುಗಳು ಬಂದು ಎಲ್ಲಾ ಧರ್ಮಗಳಲ್ಲಿ ಶಾಂತಿ ನೆಲೆಸಬೇಕು ಅನ್ನೋ ಉದ್ದೇಶದಿಂದ ನಾವು ಈ ಸಮಾವೇಶ ಮಾಡಿದ್ದೆವು. ನಮ್ಮಲ್ಲಿ ಶೈಕ್ಷಣಿಕವಾಗಿ ಅಲ್ಪ ಸಂಖ್ಯಾತರು ಹಿಂದುಳಿದಿದ್ದಾರೆ. ಯಾರೇ ಆಗಲಿ ಧಾರ್ಮಿಕವಾಗಿ ಮಾತನಾಡಬಾರದು ಎಂದು ಎ.ಎಮ್. ಹಿಂಡಸಗೇರಿ ಹೇಳಿದರು. ಇದರ ಜೊತೆಗೆ ಬಾಷಾ ಪೀರಾ ದರ್ಗಾ ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಕೂಡ ಬೇಸರ ಹೊರಹಾಕಿದ್ದಾರೆ.












Click it and Unblock the Notifications