Mekedatu Dam: ಕಾವೇರಿ ವಿವಾದದ ಕಿಡಿಯಲ್ಲಿ ಅರಳುತ್ತಾ ‘ಮೇಕೆದಾಟು’ ಡ್ಯಾಂ?
ಒಂದು ಕಡೆ ಕಾವೇರಿ ಕಿಚ್ಚು ಕರ್ನಾಟಕದಲ್ಲಿ ಹೆಚ್ಚಾಗಿದ್ದು, ಗಾಯಕ್ಕೆ ಉಪ್ಪು ಸುರಿಯಲು ಮತ್ತೆ ನೀರು ಬಿಡುವಂತೆ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ. ಈ ಮಧ್ಯೆ ಕರ್ನಾಟಕವೂ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಅದರಲ್ಲೂ ಮುಳ್ಳನ್ನು ಮುಳ್ಳಿಂದ ತೆಗೆಯಲು ರಾಜ್ಯ ಸರ್ಕಾರ ಕೂಡ ಪ್ಲ್ಯಾನ್ ಮಾಡಿದಂತೆ ಕಾಣುತ್ತಿದ್ದು, 'ಮೇಕೆದಾಟು' ಡ್ಯಾಂ ಕಟ್ಟಲೇಬೇಕು ಅಂತಾ ಹಠ ಹಿಡಿದಿದೆ.
ಬೆಂಗಳೂರು ನಗರದಿಂದ 90 ಕಿಲೋ ಮೀಟರ್ ದೂರದ ರಾಮನಗರದ ಜಿಲ್ಲೆ ಸಮೀಪ ಬರುವ ಸ್ಥಳವೇ ಮೇಕೆದಾಟು. ಕಾವೇರಿ ನದಿ ಇಲ್ಲಿ ರಭಸವಾಗಿ ಹರಿದು ಬಂಡೆ ಕೊರೆದು ವಿಚಿತ್ರ ಆಕೃತಿ ಮೂಡಿಸಿದೆ. ಈ ಸ್ಥಳದಲ್ಲಿ ಆಹಾರ ತಿನ್ನಲು ಬರುವ ಮೇಕೆಗಳು ಬಂಡೆ ದಾಟುವ ಕಾರಣಕ್ಕೆ ಈ ಪ್ರದೇಶದ ಹೆಸರು ಮೇಕೆದಾಟು ಎಂದಾಗಿದೆ ಎಂಬ ಮಾಹಿತಿ ಇದೆ. ಆದರೆ ಇದೇ ಮೇಕೆದಾಟು ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಕಾವೇರಿ ವಿವಾದದ ಕಿಚ್ಚು ಹೊತ್ತಿರುವಾಗ ಕಾವೇರಿ ನೀರಿನ ಸಮಸ್ಯೆಗೆ ಮೇಕೆದಾಟು ಡ್ಯಾಂ ಒಂದೇ ಪರಿಹಾರ ಅಂತಿದೆ ಕರ್ನಾಟಕ.

ನೀರಿಗಾಗಿ ಮತ್ತೆ ಹೊತ್ತಿಕೊಂಡ ಕಾಡ್ಗಿಚ್ಚು!
ಕಾವೇರಿ ನೀರಿನ ವಿವಾದದ ಹೆಚ್ಚಾದ ಹಿನ್ನೆಲೆಯಲ್ಲಿ ಕನ್ನಡಿಗರು ಇಂದು ಮೊದಲ ಬಂದ್ ಬಿಸಿ ಅನುಭವಿಸಿದ್ದಾರೆ. ಮತ್ತೊಂದು ಬಂದ್ ಬಿಸಿ ಎದುರಿಸಲು ಇದೀಗ ಸಜ್ಜಾಗಬೇಕಾಗಿದೆ. ಹೀಗೆ ರಾಜ್ಯದಲ್ಲಿ ಕಾವೇರಿ ನೀರಿನ ವಿಚಾರಕ್ಕೆ ಕಿಚ್ಚು ಹೊತ್ತಿರುವಾಗ ಮತ್ತೆ ಶಾಕ್ ಸಿಕ್ಕಿದೆ. ತಮಿಳುನಾಡಿಗೆ ಮತ್ತೆ 18 ದಿನ ಪ್ರತಿ ನಿತ್ಯವೂ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇಂದು ಆದೇಶ ನೀಡಿದೆ. ಹೀಗೆ ಪ್ರಾಧಿಕಾರದ ಆದೇಶಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ ಇದೇ ಹೊತ್ತಲ್ಲಿ ಮತ್ತೊಮ್ಮೆ 'ಮೇಕೆದಾಟು' ಅಸ್ತ್ರ ಪ್ರಯೋಗವಾಗಿದೆ.
ಮೇಕೆದಾಟು ಯೋಜನೆ ಒಂದೇ ಪರಿಹಾರ!
ಹೀಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ಮತ್ತೆ 18 ದಿನಗಳ ಕಾಲ ಪ್ರತಿ ನಿತ್ಯವೂ 3 ಸಾವಿರ ಕ್ಯೂಸೆಕ್ ಹರಿಸಲು ಹೇಳಿದ್ದೇ ತಡ ಕರ್ನಾಟಕಕ್ಕೆ ಹೊಸ ಸಮಸ್ಯೆ ಎದುರಾಗಿದೆ. ಈ ಸಮಯದಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ 'ಮೇಕೆದಾಟು' ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. 'ಇಂಥ ಸಂಕಷ್ಟದ ಸಮಯದಲ್ಲಿ ಮೇಕೆದಾಟು ಯೋಜನೆ ಪರಿಹಾರ. ಈ ಯೋಜನೆಯಿಂದ 66 ಟಿಎಂಸಿ ನೀರು ಅವರಿಗೆ ಸೇರಿ, ಕೆಆರ್‌ಎಸ್, ಕಬಿನಿ, ಹೇಮಾವತಿ ಆಣೆಕಟ್ಟೆ ಮೇಲಿನ ಒತ್ತಡ ತಗ್ಗುತ್ತದೆ. ಬೆಂಗಳೂರಿನ ಕುಡಿವ ನೀರಿಗೂ ಸಾಕಷ್ಟು ಅನುಕೂಲ ಆಗುತ್ತದೆ' ಎಂದಿದ್ದಾರೆ ಡಿಸಿಎಂ ಡಿ.ಕೆ.ಶಿವಕುಮಾರ್.
'ಮೇಕೆದಾಟು' ಇರುವುದೇ ತಮಿಳುನಾಡು ಗಡಿಯಲ್ಲಿ
ಹಾಗೇ ಮತ್ತೊಂದು ವಿಚಾರವನ್ನೂ ಇದೇ ವೇಳೆ ಪ್ರಸ್ತಾಪ ಮಾಡಿರುವ ಡಿ.ಕೆ.ಶಿವಕುಮಾರ್ ಅವರು, 'ಕಳೆದ ವಾರ ಸುಪ್ರೀಂಕೋರ್ಟ್ ತೀರ್ಪು ನೀಡುವ ಸಮಯದಲ್ಲಿ 'ಕರ್ನಾಟಕದವರು ಎಷ್ಟು ಬೇಕಾದರೂ ಅಣೆಕಟ್ಟು ಕಟ್ಟಿಕೊಳ್ಳಲಿ ನಿಮಗೆ ತೊಂದರೆ ಏನು? ನಿಮ್ಮ ಪಾಲಿನ ನೀರು 177 ಟಿಎಂಸಿ ನಿಮಗೆ ಸಿಗುತ್ತದೆ' ಎಂದು ಸ್ಪಷ್ಟವಾಗಿ ಹೇಳಿದೆ. ಆದ್ರೆ ಮೇಕೆದಾಟು ಅಣೆಕಟ್ಟು ನೀರನ್ನು ಕನಕಪುರದವರು ಬಳಸಿಕೊಳ್ಳುತ್ತಾರೆ ಎಂದು ಯಾರೋ ಹೇಳುತ್ತಿದ್ದರು. ಅಣೆಕಟ್ಟು ಇರುವುದೇ ತಮಿಳುನಾಡು ಗಡಿಯಲ್ಲಿ' ಎಂದು ಛೇಡಿಸಿದ್ದಾರೆ ಡಿಸಿಎಂ. ಈ ಮೂಲಕ ನೀರಿನ ಸಮಸ್ಯೆಗೆ 'ಮೇಕೆದಾಟು' ಒಂದೇ ಪರಿಹಾರ ಎಂಬುದನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.
ಇನ್ನೊಂದ್ಕಡೆ, ಕಾವೇರಿ ನೀರಿನ ಎರಡೂ ಸಮಿತಿಗೂ ಮೇಕೆದಾಟು ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಸುಪ್ರೀಂ ಕೋರ್ಟಿನ ತೀರ್ಪಿನಿಂದ ಮತ್ತೊಮ್ಮೆ ಭರವಸೆ ಮೂಡಿದೆ, ಆದ ಕಾರಣ ನಮ್ಮ ಸಂಸದರು, ಕೇಂದ್ರ ಸಚಿವರಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ಎಂದು ಮನವಿ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಈ ಮೂಲಕ ಕರ್ನಾಟಕ ಹಾಗೂ ತಮಿಳುನಾಡಿನ ಕಾವೇರಿ ನೀರಿನ ಸಮಸ್ಯೆಗೆ ಒಂದು ಗೋಲಿ ಹೊಡೆಯಲು ರಾಜ್ಯ ಸರ್ಕಾರ ದೃಢ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಆದರೆ ಈ ಕಾರ್ಯ ಆದಷ್ಟು ಬೇಗವೇ ಜಾರಿಗೆ ಬರಲಿ ಎಂಬುದು ಕನ್ನಡಿಗರ ಆಶಯ.












Click it and Unblock the Notifications