Cauvery Dispute: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಾ ಕರ್ನಾಟಕ?
ಬೆಂಗಳೂರು: ತಮಿಳುನಾಡು ಸರ್ಕಾರಕ್ಕೆ ಕರ್ನಾಟಕದ ಬರ ಪರಿಸ್ಥಿತಿ ಅರ್ಥವೇ ಆದಂತೆ ಕಾಣುತ್ತಿಲ್ಲ. ಹೀಗಾಗಿ ಕಾವೇರಿ ನೀರು ಹಂಚಿಕೆ ವಿಚಾರವನ್ನು ದೆಹಲಿಗೆ ಕೊಂಡೊಯ್ಯುತ್ತಾ ದೊಡ್ಡದು ಮಾಡುತ್ತಿದೆ. ಇದೇ ವೇಳೆ ಕರ್ನಾಟಕ ಸರ್ಕಾರ ಕೂಡ ತಮಿಳುನಾಡು ವಿರುದ್ಧ ಗಟ್ಟಿ ನಿಲುವು ತೆಗೆದುಕೊಂಡು ತೊಡೆ ತಟ್ಟಿತ್ತು. ಆದರೆ ಇದೀಗ ದಿಢೀರ್ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸುತ್ತಾ ಕರ್ನಾಟಕ ಸರ್ಕಾರ? ಎಂಬ ಆತಂಕ ಕಾಡಲು ಶುರುವಾಗಿದೆ.
ಈಗ ಕಾವೇರಿ ನೀರು ಹಂಚಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಕಾವೇರಿ ನೀರು ಹರಿಸಬೇಕೊ, ಬೇಡವೋ ಎಂಬುದರ ಕುರಿತು ಯೋಚನೆ ಮಾಡಲಾಗುತ್ತಿದೆ. ಮಂಗಳವಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹಾಕ್ತಿದ್ದೇವೆ, ಬಳಿಕ ತೀರ್ಮಾನ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ. ಹೌದು 15 ದಿನ ಕಾಲ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣೆ ಸಮಿತಿ ಆದೇಶ ನೀಡಿದ ಬಳಿಕ ಸದಾಶಿವನಗರ ನಿವಾಸದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಈ ವಿಚಾರ ತಿಳಿಸಿದ್ದಾರೆ.

ರಾಜಧಾನಿ ತಲುಪಿದ ಕಾವೇರಿ ಕೂಗು
ದೆಹಲಿಗೆ ಯಾವ ಸಮಯದಲ್ಲಾದ್ರೂ ಭೇಟಿ ನೀಡಲು ನಾವು ಸಿದ್ಧ. ರಾಜ್ಯದ ಸಂಸದರು ಮತ್ತು ಹಾಗೂ ಸಿಎಂ ಶೀಘ್ರವೇ ಒಂದು ದಿನಾಂಕ ನಿಗದಿ ಮಾಡೋಣ ಎಂದು ಹೇಳಿದ್ದಾರೆ. ರಾಜ್ಯದ ಸಂಸದರು ರಾಜಕಾರಣ ಬಿಟ್ಟು ನಮಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ. ನೀರನ್ನು ಹೆಚ್ಚು ಬಿಟ್ಟಿಲ್ಲ, ಕಳೆದ ಎರಡು ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ನೀರು ಹರಿಸಿದ್ದೇವೆ. ಕಾವೇರಿ ನೀರು ನಿರ್ವಹಣೆ ಸಮಿತಿಯವರು 5 ಸಾವಿರ ಕ್ಯೂಸೆಕ್ ಬಿಡುಗಡೆ ಮಾಡಿ ಎಂದು ಹೇಳುತ್ತಾರೆ, ಆದರೆ ಅಲ್ಲಿಗೆ ತಲುಪುವುದು ಕೇವಲ 2 ರಿಂದ 3 ಸಾವಿರ ಕ್ಯೂಸೆಕ್ ಮಾತ್ರ. ಪ್ರಧಾನಿ ಕಚೇರಿಗೆ ಎರಡು ಬಾರಿ ಪತ್ರ ಬರೆದಿದ್ದೇವೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಕಾಯುತ್ತೇವೆ ಎಂದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್.
ಮಾಜಿ ಪ್ರಧಾನಿ ದೇವೆಗೌಡರು ರಾಜ್ಯಸಭೆಯಲ್ಲಿ ಮಾತನಾಡುತ್ತಾ ಕಾನೂನು ಹೋರಾಟ ಮತ್ತು ಉಭಯ ರಾಜ್ಯಗಳ ಸಭೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಅವರ ಸಲಹೆಯಲ್ಲಿ ಅರ್ಥವಿದೆ, ಗೌರವವಿದೆ. ಅವರ ಸಲಹೆಗಳನ್ನು ಕೇಳುತ್ತೇವೆ. ಮೇಕೆದಾಟು ಯೋಜನೆಯೇ ಇದಕ್ಕೆ ಪರಿಹಾರ. ಸುಪ್ರೀಂ ಕೋರ್ಟ್ ತಾಂತ್ರಿಕ ವಿಚಾರಗಳಲ್ಲಿ ನಾವು ತಲೆಹಾಕಲ್ಲ ಎಂದು ಹೇಳಿದ ಕಾರಣ ಕೇಂದ್ರ ಜಲ ಆಯೋಗ ಬಳಿ ಹೋಗಬೇಕಾಯಿತು ಎಂದಿದ್ದಾರೆ.

ಮಾಜಿ ಸಿಎಂಗೆ ಡಿಸಿಎಂ ಉತ್ತರ
ಬೊಮ್ಮಾಯಿ ಅವರು ನೀರು ಬಿಡುಗಡೆ ಮಾಡುವುದು ಬೇಡ ಸುಪ್ರೀಂಗೆ ಹೋಗಿ ಎಂದು ಟ್ವೀಟ್ ಮಾಡಿರುವ ಬಗ್ಗೆ ಉತ್ತರಿಸಿದ ಡಿಸಿಎಂ "ಹೌದು ಅವರು ಹೇಳುವುದು ಸರಿ ಇದೆ. ನೀರು ಬಿಡದೆ ಇದ್ದರೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡುತ್ತದೆ, ಸಮಿತಿ ಮಾತು ಪಾಲಿಸದೆ ಇರುವವರು ಇಲ್ಲಿಗೆ ಬಂದಿದ್ದೀರಿ ಎಂದು ಕೇಳಿದಾಗ ನಮ್ಮ ವಾದ ಕೂಡ ಬಿದ್ದು ಹೋಗುತ್ತೆ" ಎಂದಿದ್ದಾರೆ. ಅಲ್ಲದೆ ಬೊಮ್ಮಾಯಿ ಅವರು ಸುಪ್ರೀಂ ಕೋರ್ಟ್ ಇದೆ ಎಂದು ಹೇಳ್ತಾರೆ ಅಷ್ಟೇ. ಆದರೆ ನೀರು ಹಂಚಿಕೆ ಬಗ್ಗೆಯೇ ಸೂತ್ರ ಹೊಂದಾಣಿಕೆಯಾಗಿಲ್ಲದೆ ಹೇಗೆ ಮುಂದುವರೆಯುವುದು? ರಾಜ್ಯವೂ ಉಳಿಯ ಬೇಕು & ಆದೇಶ ಉಲ್ಲಂಘನೆ ಆಗದ ರೀತಿಯೂ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸಲು ಸಜ್ಜಾಗುತ್ತಿದ್ದೇವೆ ಎಂದಿದ್ದಾರೆ ಡಿಸಿಎಂ.
ನೀರನ್ನು ಬಿಡದೆ ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದರೆ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಈ ಸಮಸ್ಯೆಯ ಬಗೆಹರಿಸುವ ಕುರಿತು ಯೋಚಿಸುತ್ತೇವೆ. ಸುಪ್ರೀಂ ಕೋರ್ಟಿನಲ್ಲಿ ಬಲವಾಗಿ ವಾದ ಮಂಡಿಸುತ್ತೇವೆ, ಎರಡೂ ರಾಜ್ಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಹೇಗಿದೆ ಎಂದು ಅವಲೋಕಿಸಿ. ಆನಂತರ ತೀರ್ಪು ನೀಡಿ ಎಂದು ಮನವಿ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಕುಡಿಯುವ ನೀರಿಗೆ ಆದ್ಯತೆ
ನಾನು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ವಸ್ತು ಸ್ಥಿತಿ ವಿವರಿಸಿದ್ದೇನೆ ತಮಿಳುನಾಡಿನವರು ಭೇಟಿಗೆ ಪ್ರಯತ್ನ ನಡೆಸುತ್ತಿದ್ದಾರೆ. ಮಳೆ ಬೀಳದ ಕಾರಣ ನೀರಿನ ಹರಿವು ಕಡಿಮೆಯಾಗಿದೆ, ಕುಡಿಯುವ ನೀರಿಗೂ ತೊಂದರೆಯಾಗುತ್ತದೆ ಎಂಬುದನ್ನು ಮನವರಿಕೆ ಮಾಡುತ್ತೇವೆ. ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ, ಇದಕ್ಕೆ ಸರ್ಕಾರದ ಮೊದಲ ಆದ್ಯತೆ, ನಂತರ ರೈತರ ಬೆಳೆಗೆ ನೀರು ಹರಿಸಲಾಗುವುದು. ರೈತರು ಸಹ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಎಲ್ಲದಕ್ಕೂ ಕಾದು ನೋಡಬೇಕಿದೆ ಎಂದಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್. ಈ ಮೂಲಕ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ತಿಕ್ಕಾಟವೂ ಜೋರಾಗುವ ಮುನ್ಸೂಚನೆ ಸಿಕ್ಕಿದೆ.












Click it and Unblock the Notifications