Cauvery Water: ಕಾವೇರಿ ನೀರಿನ ವಿಚಾರದಲ್ಲಿ ಕಾವೇರಿದ ಯದ್ಧ!
ಬೆಂಗಳೂರು: ಕಾವೇರಿ ನೀರಿನ ವಿಚಾರಕ್ಕೆ ತಮಿಳುನಾಡು ಮತ್ತೊಮ್ಮೆ ಕರ್ನಾಟಕದ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದೆ. ಮಳೆ ಇಲ್ದೆ ಕರ್ನಾಟಕದ ರೈತರು ಹಾಗೂ ಜನ ಪರದಾಡುವ ಸಂದರ್ಭದಲ್ಲಿ ನಮಗೆ ನೀರು ಬೇಕು ಅಂತಾ ನಮ್ಮ ಡ್ಯಾಂ ನೀರನ್ನ ನೆರೆಯ ರಾಜ್ಯ ಪಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕಾವೇರಿ ವಿಚಾರವಾಗಿ ಉತ್ತರ ನೀಡಿದ್ದಾರೆ.
ಅಷ್ಟಕ್ಕೂ ತಮಿಳುನಾಡು ಸರ್ಕಾರದ ವಾದ ಹೇಗಿದೆ ಎಂದರೆ, ಕರ್ನಾಟಕದ ಜಲಾಶಯದ ಸಂಪೂರ್ಣ ನೀರನ್ನು ಒಂದೇ ಸಾರಿ ಬಿಟ್ಟುಬಿಡಿ ಎಂಬಂತಿದೆ. ಈ ಕುರಿತು ಹೋರಾಟಗಳು ಶುರುವಾಗಿದ್ದು ರೈತರ ಆಕ್ರೋಶ ಜೋರಾಗಿದೆ. ಈ ಬಗ್ಗೆ ಈಗ ಉತ್ತರ ನೀಡಿರುವ ಡಿಸಿಎಂ ತಮಿಳುನಾಡು 24 ಸಾವಿರ ಕ್ಯೂಸೆಕ್ ನೀರು ಬಿಡಲು ಪಟ್ಟು ಹಿಡಿದಿತ್ತು. ಈಗಿನ ಪರಿಸ್ಥಿತಿಯಲ್ಲಿ ಇಷ್ಟು ನೀರು ಬಿಡಲು ಅಸಾಧ್ಯ ಎಂದು ನಮ್ಮ ಅಧಿಕಾರಿಗಳು ವಾದ ಮಂಡಿಸಿದ್ದಾರೆ. ನಾವು 3 ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ಹೇಳಿದೆವು. ಪರಿಣಾಮ ಪ್ರಾಧಿಕಾರ 5 ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ದೇಶಿಸಿದೆ ಎಂದಿದ್ದಾರೆ ಡಿಕೆ ಶಿವಕುಮಾರ್.

ನಮ್ಮ ಜಲಾಶಯ ಬಂದು ನೋಡಲಿ
ಅಲ್ಲದೆ ಅವರು ನಮ್ಮ ಆಣೆಕಟ್ಟುಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ಮಾಡಲಿ ಎಂದು ಮನವಿ ಮಾಡಿದ್ದೇವೆ. ಅವರು ಬಂದು ಪರಿಶೀಲನೆ ಮಾಡಿ ವಾಸ್ತವಾಂಶ ಅರಿಯಲಿ. ನಮಗೆ ಕುಡಿಯುವ ಉದ್ದೇಶಕ್ಕೆ ನೀರಿಲ್ಲ. ಹೀಗಾಗಿ ತಮಿಳುನಾಡಿನವರು ಮೃದುಧೋರಣೆ ತಾಳಬೇಕು. ಕರ್ನಾಟಕದಲ್ಲಿ ಮಳೆ ಕೊರತೆ ಬಗ್ಗೆ ತಮಿಳುನಾಡಿಗೆ ಅರಿವಿದೆ. ಕಳೆದ ವರ್ಷ ನಿಗದಿಗಿಂತಲೂ ಹೆಚ್ಚು ನೀರು ಬಳಕೆ ಮಾಡಿದ್ದರು. ಕಳೆದ ವರ್ಷ ಅವರು 80% ಹೆಚ್ಚುವರು ನೀರು ಬಳಸಿದ್ದಾರೆ. ಅವರ ನೀರನ್ನ ಅವರು ಯಾವ ಕಾರಣಕ್ಕೆ ಬಳಸುತ್ತಾರೆ ಎಂದು ಪ್ರಶ್ನಿಸುವುದಿಲ್ಲ. ಸಂಕಷ್ಟದ ಸಮಯದಲ್ಲಿ ಅವರು ಸಮಯೋಚಿತವಾಗಿ ನೀರು ಬಳಸಬಹುದಿತ್ತು ಎಂದಿದ್ದಾರೆ ಡಿಸಿಎಂ.
ಮೇಕೆದಾಟು ಅಸ್ತ್ರ ಬಳಸಿದ ಕರ್ನಾಟಕ!
ಸಂಕಷ್ಟದ ಸಮಯದಲ್ಲಿ ಮೇಕೆದಾಟು ಯೋಜನೆಯೊಂದೇ ಪರಿಹಾರ. ಈ ಬಗ್ಗೆ ಪ್ರಾಧಿಕಾರದ ಮುಂದೆ ನಾವು ಪ್ರಸ್ತಾಪ ಮಾಡುತ್ತೇವೆ. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ. ಮೇಕೆದಾಟು ಇದ್ದರೆ ನಾವು ನೀರು ಶೇಖರಣೆ ಮಾಡಿಕೊಳ್ಳಬಹುದಾಗಿತ್ತು. ಈ ಆಣೆಕಟ್ಟಿನಿಂದ ನಾವು ನೀರು ಬಳಸಿಕೊಳ್ಳಲು ಆಗಲ್ಲ. ಆದ್ರೆ ಸಂಕಷ್ಟದ ಸಮಯ ಬಂದರೆ ತಮಿಳುನಾಡಿಗೆ ನೀರು ಬಿಡಲು ಅನುಕೂಲವಾಗುತ್ತೆ. ಈ ವಿಚಾರದ ಬಗ್ಗೆಯೂ ತಮಿಳುನಾಡಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ ಡಿಸಿಎಂ ಡಿ.ಕೆ.ಶಿವಕುಮಾರ್.

ತಮಿಳುನಾಡು ಸರ್ಕಾರದ ಎಡವಟ್ಟೇನು?
ವಿರೋಧ ಪಕ್ಷಗಳು ನೀರು ಹರಿಸಬೇಡಿ ಎಂದು ಹೇಳುತ್ತಿವೆ. ಆ ರೀತಿ ಮಾಡಲು ಆಗಲ್ಲ. ನಾವು ಏನೇ ಮಾಡಿದರೂ & ಮಾತನಾಡಿದರೂ ನ್ಯಾಯಾಲಯವನ್ನು ಗಮನದಲ್ಲಿ ಇಟ್ಟುಕೊಂಡೇ ಮಾಡಬೇಕು. ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡಿದಾಗ ಮೊದಲು ಪ್ರಾಧಿಕಾರದ ಮುಂದೆ ವಾಸ್ತವಾಂಶ ಇಟ್ಟು, ಆ ನಂತರವೇ ಸುಪ್ರೀಂ ಕೋರ್ಟ್‌ನ ಮೊರೆ ಹೋಗೋಣ ಎಂದು ಸಲಹೆ ನೀಡಿದ್ದಾರೆ. ಪ್ರಾಧಿಕಾರದ 23ನೇ ಸಭೆಯಲ್ಲಿ ತಮಿಳುನಾಡು ಹೆಚ್ಚುವರಿಯಾಗಿ ಕಾವೇರಿ ನೀರು ಬಳಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ್ದೇವೆ. ಮತ್ತೆ ಮಳೆಯಾಗುವ ನಿರೀಕ್ಷೆ ಇತ್ತು, ಆದರೆ ಮಳೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ನೀರು, ನಮ್ಮ ಹಕ್ಕು
ಹಾಗೇ ಕರ್ನಾಟಕದಿಂದ ಹೆಚ್ಚುವರಿ ನೀರು ಬಿಡಲಾಗ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಪ್ರಾಧಿಕಾರ ನೀಡಿರುವ ದಿನಾಂಕದ ವೇಳೆಗೆ ಎಷ್ಟು ನಿರು ಬಿಳಿಗುಂಡ್ಲುವಿಗೆ ಹರಿಯುತ್ತೆ ಎಂಬುದು ಮುಖ್ಯ. ನಿನ್ನೆ ಬೆಂಗಳೂರಿನಲ್ಲಿ ಮಳೆ ಆಗಿರುವ ಕಾರಣ ಅರ್ಕಾವತಿ ಮೂಲಕ ಆ ನೀರು ಕೂಡ ಹೋಗಿರಲಿದೆ. ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕುಡಿಯಲು ಕಾವೇರಿ ನೀರು ಅವಲಂಬಿಸಿದ್ದೇವೆ. ನಾವು ಅದನ್ನ ಕಾಪಾಡುತ್ತೇವೆ. ನಮ್ಮ ರೈತರ ಹಿತ ಕಾಯೋದಕ್ಕೆ ಅವರಿಗೆ ಕೆಲ ಸೂಚನೆ ನೀಡಿದ್ದೇವೆ. ರಾಜ್ಯದ ಹಿತಕ್ಕೆ ಬದ್ಧ. ಕಾನೂನಿಗೆ ಗೌರವ ನೀಡುವುದು ಕೂಡ ಮುಖ್ಯ. ದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ಸದ್ಯದಲ್ಲೇ ತಿಳಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ ಇದೇ ವೇಳೆ ಮಾಹಿತಿ ನೀಡಿದರು.

ಎಲ್ಲರೂ ಸೇರಿ ಕರ್ನಾಟಕದ ಹಿತ ಕಾಯೋಣ
ಇನ್ನು ಬಿಜೆಪಿ & ಜೆಡಿಎಸ್ ಪ್ರತಿಭಟನೆ ಮಾಡುವ ಬಗ್ಗೆ ಉತ್ತರಿಸುತ್ತಾ, ರಾಜಕೀಯದಲ್ಲಿ ಅವರ ನಿರ್ಧಾರವನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಅವರಿಗೆ ವಾಸ್ತವಾಂಶ ಗೊತ್ತಿದೆ. ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದರು. ಆದ್ರೂ ಮಾತನಾಡುತ್ತಿದ್ದಾರೆ. ಅವರನ್ನ ಕರೆದು ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ಸಭೆಯಲ್ಲಿ ಏನೇನು ಚರ್ಚೆ ಮಾಡಿದ್ದೇವೆ ಎಂದು ಹೇಳಲ್ಲ. ನಾವಿಬ್ಬರೂ ಸೇರಿ ರಾಜ್ಯದ ಹಿತ ಕಾಯೋಣ ಸರ್ವಪಕ್ಷ ನಿಯೋಗ ಭೇಟಿಗೆ ದಿನಾಂಕ ಕೇಳುತ್ತೇವೆ ಎಂದು ಡಿಸಿಎಂ ತಿಳಿಸಿದ್ದಾರೆ.
ಹೆಚ್ಚುವರಿ ನೀರನ್ನು ಏನು ಮಾಡಿದ್ರು?
ಕಳೆದ ವರ್ಷ ತಮಿಳುನಾಡು ಜಲಾಶಯಕ್ಕೆ ಹರಿದಿದ್ದ 400 ಟಿಎಂಸಿಗೂ ಹೆಚ್ಚು ಪ್ರಮಾಣದ ಕಾವೇರಿ ನದಿ ನೀರು ಸಮುದ್ರ ಸೇರಿದೆ. ಮುಂಗಾರು ಅಬ್ಬರ ಕಾರಣ ಮೆಟ್ಟೂರು ಡ್ಯಾಂನಿಂದ 472.6 ಟಿಎಂಸಿ ಹೆಚ್ಚುವರಿ ನೀರು ಹೊರಬಿಡಲಾಗಿತ್ತು. 62 ವರ್ಷದ ನಂತರ ಇಷ್ಟು ನೀರನ್ನ ಹೊರಬಿಟ್ಟಿದ್ದು, ಗಮನ ಸೆಳೆದಿತ್ತು. 1961ರಲ್ಲಿ 321 ಟಿಎಂಸಿ ನೀರನ್ನ ಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿದೆ. ಇಷ್ಟೆಲ್ಲ ನೀರನ್ನ ಅಲ್ಲಿ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರಿ ಬೇಕು ಅಂತಾ ತಮಿಳುನಾಡು ಕಿರಿಕ್ ಶುರುಮಾಡುತ್ತಿದೆ.
ಜೂನ್ ತಿಂಗಳಲ್ಲಿ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಬತ್ತಿ ಹೋಗುವ ಹಂತಕ್ಕೆ ತಲುಪಿತ್ತು. ಆದರೆ ವರುಣನ ಕೃಪೆಯಿಂದ ಜುಲೈ ತಿಂಗಳಲ್ಲಿ ಉತ್ತಮವಾಗಿ ಮಳೆ ಬಿದ್ದ ಕಾರಣ ಕೆಆರ್‌ಎಸ್ ಡ್ಯಾಂ ಒಂದಷ್ಟು ತುಂಬಿಕೊಂಡಿದೆ. ಮುಂಗಾರಿನ ಹಿನ್ನೆಲೆ ಕೆಲ ದಿನಗಳ ಹಿಂದೆ ಕೊಡಗಿನಲ್ಲಿ ಉತ್ತಮ ಮಳೆ ಬಿದ್ದಿತ್ತು. ಅಲ್ಲದೆ ಕೇರಳದ ವಯನಾಡು ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆ ಕೆಆರ್‌ಎಸ್ ಡ್ಯಾಂ ಮಟ್ಟ ಹೆಚ್ಚಾಗಿದೆ. ಆದರೆ ತಮಿಳುನಾಡು ಜಲಾಶಯಗಳಿಗೆ ರಾಜ್ಯ ಬಿಡಬೇಕಾದ ನೀರು ಇನ್ನೂ ಲಭ್ಯವಾಗಿಲ್ಲ. ಅದರಲ್ಲೂ ಆಗಸ್ಟ್ ತಿಂಗಳಲ್ಲಿ ಮತ್ತೆ ಮಳೆ ಕೈಕೊಟ್ಟಿದೆ. ಹೀಗಾಗಿ ರಾಜ್ಯದ ರೈತರು ಭಯದಲ್ಲಿದ್ದಾರೆ. ಈ ಬೆಳವಣಿಗೆ ನಡುವೆ ತಮಿಳುನಾಡು ಕಾವೇರಿ ನದಿ ನೀರಿನ ವಿಚಾರಕ್ಕೆ ಕಿರಿಕ್ ತೆಗೆದಿದೆ.












Click it and Unblock the Notifications