ರಾಜ್ಯೋತ್ಸವದ ದಿನವೇ ‘ಚಿನ್ನ’ದ ಪದಕ ಉಡುಗೊರೆಯಾಗಿ ನೀಡಿದ ಕನ್ನಡದ ಹುಡುಗರು!
ಒಂದು ಕಡೆ ಇಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ನಡೆಯುತ್ತಿದ್ದರೆ, ಮತ್ತೊಂದು ಕಡೆ ಕರ್ನಾಟಕ ರಾಜ್ಯ ಪುರುಷರ ಟೆನಿಸ್ ಟೀಂ ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯೋತ್ಸವ ಆಚರಿಸಿದೆ. ಗೋವಾದ ಫಟೋರ್ಡಾದ ಮೈದಾನದಲ್ಲಿ ನಡೆಯುತ್ತಿರುವ, 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಈ ಸಾಧನೆಯನ್ನ ಮಾಡಿದೆ. ಹಾಗಾದರೆ ಹೇಗಿತ್ತು ಈ ಮ್ಯಾಚ್? ಕರ್ನಾಟಕ ತಂಡ ಗೆದ್ದು ಬೀಗಿದ್ದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.
ಅಷ್ಟಕ್ಕೂ ಕರ್ನಾಟಕ ಹಾಗೂ ನೆರೆಯ ತಮಿಳುನಾಡು ತಂಡಗಳ ನಡುವೆ ಇಂದು ನಡೆದ, ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 2-1 ಸೆಟ್ ಅಂತರದ ಜಯ ದಾಖಲಿಸಿತು. ಈ ಮೂಲಕ ಕರ್ನಾಟಕ ತಂಡ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದು, ಈ ಗೆಲುವಿನ ಮುಖೇನ ಕನ್ನಡ ರಾಜ್ಯೋತ್ಸವವನ್ನ ಆಚರಿಸಿದ್ದಾರೆ ಕರ್ನಾಟಕದ ಆಟಗಾರರು. ಇನ್ನು ಪ್ರಜ್ವಲ್ ದೇವ್ ಕರ್ನಾಟಕ ತಂಡದ ಪರವಾಗಿ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿ ಮಿಂಚಿ ಗಮನ ಸೆಳೆದಿದ್ದಾರೆ.

ಕರ್ನಾಟಕದ 'ಚಿನ್ನ'ದ ಬೇಟೆ ಹೇಗಿತ್ತು?
ಇನ್ನು ಆರಂಭಿಕ ಸಿಂಗಲ್ಸ್ ಪಂದ್ಯದಲ್ಲಿ ಸೂರಜ್ ಪ್ರಬೋಧ್ ಅವರು ಮನೀಶ್ ಕುಮಾರ್ ಎದುರು ಸೋತ ಬಳಿಕ, ಪ್ರಜ್ವಲ್ ಅವರು ಕರ್ನಾಟಕದ ಕೀರ್ತಿ ಬೆಳಗಿದ್ದಾರೆ. ಮತ್ತೊಂದು ಸುತ್ತಿನ ಅಂದರೆ 2ನೇ ಸಿಂಗಲ್ಸ್ ಪಂದ್ಯದಲ್ಲಿ ಏಷಿನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಹಾಗೂ ಐಟಿಎಫ್ ಧಾರವಾಡ ಓಪನ್ಸ್ ವಿಜೇತರಾದ ರಾಮಕುಮಾರ್ ರಾಮನಾಥನ್ ಅವರನ್ನು 6-1, 6-3 ನೇರ ಸೆಟ್‌ಗಳ ಮೂಲಕ ಸೋಲಿಸಿ ಕರ್ನಾಟಕ ತಂಡಕ್ಕೆ ನವ ಚೈತನ್ಯವನ್ನೂ ತಂದರು.
ರಾಜ್ಯೋತ್ಸವಕ್ಕೆ ಕನ್ನಡಿಗರಿಗೆ ಚಿನ್ನ ಗಿಫ್ಟ್!
ಇದಾದ ನಂತರ ಪ್ರಜ್ವಲ್ ಅವರು ಆದಿಲ್ ಕಲ್ಯಾಣ್‌ಪುರ್ ಜೊತೆ ಸೇರಿ ಎನ್. ಜೀವನ್ & ಓಜೆಸ್ ಜಯರಾಕೇಶ್ ವಿರುದ್ಧ ನಿರ್ಣಾಯಕ ಡಬಲ್ಸ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಮಿಂಚಿದ್ದಾರೆ. ಈ ಪಂದ್ಯ ಆರಂಭದಲ್ಲಿ ಸಾಕಷ್ಟು ಬಿರುಸಿನಿಂದ ಕೂಡಿತ್ತು. ಎರಡೂ ಕಡೆ ಪ್ರಬಲ ಹೋರಾಟ ಬಂದ ಹಿನ್ನೆಲೆ ಪಂದ್ಯ ಕೂಡ ಗಮನ ಸೆಳೆದಿತ್ತು. ಮೊದಲನೇ ಸೆಟ್‌ನ ಆರಂಭದಲ್ಲಿ ಪ್ರಬಲ ಹೋರಾಟ ಎದುರಿಸಿದರೂ ಬಳಿಕ ಕರ್ನಾಟಕದ ಜೋಡಿ 7-6 (9-7) ಸೆಟ್‌ನ ಅಂತರದಲ್ಲಿ ಗೆಲುವು ದಾಖಲಿಸಿತು.

ಆದರೆ 2ನೇ ಸೆಟ್‌ನಲ್ಲಿ ಎದುರಾಳಿಗೆ ಅವಕಾಶ ನೀಡದ ಕರ್ನಾಟಕ ತಂಡ, ಸುಲಭವಾಗಿ 6-3 ರಿಂದ ಸೋಲು ತೋರಿಸಿ ಚಿನ್ನದ ಪದಕ ಗೆದ್ದು ಬೀಗಿದೆ. ಹೀಗೆ ಕರ್ನಾಟಕ ರಾಜ್ಯೋತ್ಸವ ದಿನವೇ ಕನ್ನಡಿಗರಿಗೆ ಚಿನ್ನದ ಪದಕವನ್ನ ಈ ಜೋಡಿ ಉಡುಗೊರೆಯಾಗಿ ನೀಡಿದೆ. ಇನ್ನು ಈ ಗೆಲವು ಕನ್ನಡಿಗರಿಗೆ ರಾಜ್ಯೋತ್ಸವದ ಜೊತೆಯಲ್ಲಿ ಡಬಲ್ ಸಂಭ್ರಮ ತಂದಿದೆ. ಹಾಗೇ ಕರ್ನಾಟಕದ ತಂಡದ ಆಟಗಾರರು ಬೇರೆ ಬೇರೆ ವಿಭಾಗದಲ್ಲೂ ಮಿಂಚುತ್ತಿದ್ದಾರೆ.












Click it and Unblock the Notifications