ಕಾವೇರಿಗಾಗಿ ಸಿನಿಮಾ ಮಂದಿ ಬೆಂಬಲ, ಯಾರ ನೇತೃತ್ವದಲ್ಲಿ ಹೋರಾಟ?
ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆ ಉಂಟಾಗಿದ್ದು, ಕುಡಿಯುವ ನೀರು ಕೂಡ ಬಂಗಾರವಾಗುವ ದಿನಗಳು ಎದುರಾಗಿವೆ. ಪರಿಸ್ಥಿತಿ ಹೀಗಿದ್ದಾಗ ಕನ್ನಡಿಗರು ರೊಚ್ಚಿಗೆದ್ದು, ತೀವ್ರ ಹೋರಾಟ ಆರಂಭಿಸಿದ್ದಾರೆ. ಆದರೂ ಕನ್ನಡದ ಚಿತ್ರ ನಟರು ಸೈಲೆಂಟ್ ಆಗಿದ್ದಾರೆ ಅನ್ನೋ ಆಕ್ರೋಶ ಮೊಳಗಿತ್ತು. ಈ ಆರೋಪದ ನಂತರ ಸಿನಿಮಾ ನಟರು ಕನ್ನಡಿಗರ ಪರ ಮಾತನಾಡಿದ್ದರು. ಇದೀಗ ಹ್ಯಾಟ್ರಿಕ್ ಹೀರೋ ನೇತೃತ್ವದಲ್ಲಿ ನಾಳೆ ಬಂದ್ ವೇಳೆ ಪ್ರತಿಭಟನೆಗೆ ಸಕಲ ಸಿದ್ಧತೆ ನಡೆದಿದೆ.
ನಟ ಶಿವಣ್ಣ ಹಿಂದೆ ಕೂಡ ಹಲವು ಬಾರಿ ಕಾವೇರಿ ಹೋರಾಟದಲ್ಲಿ ಮುಂದಾಳತ್ವ ವಹಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈಗಲೂ ಸಿನಿಮಾ ಸ್ಟಾರ್ಸ್ ಕಾವೇರಿ ಹೋರಾಟಕ್ಕಾಗಿ ಸಜ್ಜಾಗಿದ್ದಾರೆ. ನಾಳೆ ಕರ್ನಾಟಕ ಬಂದ್ ನಡೆಯಲಿದ್ದು, ಸಿನಿ ಮಂದಿ ಕೂಡ ಹೋರಾಟ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರನ್ನು ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಭೇಟಿ ಮಾಡಿ ಮಾತನಾಡಿದ್ದಾರೆ. ಭೇಟಿ ವೇಳೆ ಬಂದ್‌ಗೆ ಬೆಂಬಲ ನೀಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ನಟ ಶಿವಣ್ಣ ತಿಳಿಸಿದ್ದಾರೆ ಎನ್ನಲಾಗಿದೆ.

ರೈತರ ಪರ ಸಿನಿಮಾ ರಂಗದ ಹೋರಾಟ
ನಟ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ ನಂತರ, ಎಂ.ಎನ್. ಸುರೇಶ್ ಹೇಳಿಕೆ ನೀಡಿದ್ದಾರೆ. ಶಿವಣ್ಣ ಅವರ ನಿವಾಸಕ್ಕೆ ನಾವು & ಪದಾಧಿಕಾರಿಗಳು ಬಂದಿದ್ದೇವೆ. ಸೆಪ್ಟೆಂಬರ್ 29ರ ಶುಕ್ರವಾರ ನಡೆಯುವ ರಾಜ್ಯ ಬಂದ್‌ಗೆ, ನಮ್ಮ ಚಿತ್ರರಂಗದ ಬೆಂಬಲ ಇದೆ ಎಂದಿದ್ದಾರೆ. ಹಾಗೇ ರೈತರ ಹೋರಾಟ ಬೆಂಬಲಿಸಿ ನಾವು ಪ್ರತಿಭಟನೆ ನಡೆಸುತ್ತಿರುವ ವಿಚಾರವನ್ನ ಇದೀಗ ಶಿವಣ್ಣ ಅವರಿಗೆ ತಿಳಿಸಿದೆವು. ಅವರು ಕೂಡ ಖಂಡಿತ ಬರ್ತ್ತೇನೆ ಅಂತಾ ಹೇಳಿದ್ದಾರೆ ಎಂದು ಎಂ.ಎನ್. ಸುರೇಶ್ ತಿಳಿಸಿದ್ದಾರೆ. ಹಾಗಾದ್ರೆ ಪ್ರತಿಭಟನೆ ಆರಂಭವಾಗುವುದು ಎಷ್ಟೊತ್ತಿಗೆ?
ಸಿನಿಮಾ ಸ್ಟಾರ್ಸ್ ಹೋರಾಟ ಎಲ್ಲಿ?
ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಶಿವರಾಜ್‌ಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಸೆ. 29 ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಗುರುರಾಜ ಕಲ್ಯಾಣ ಮಂಟಪದಲ್ಲಿ ಹೋರಾಟ ನಡೆಯಲಿದೆ. ಅಲ್ಲಿಯೇ ಕನ್ನಡ ಚಿತ್ರರಂಗದ ನಟ & ನಟಿಯರು ಬರುತ್ತಾರೆ. ಶಿವಣ್ಣ, ರವಿಚಂದ್ರನ್, ಪ್ರೇಮ್, ಧ್ರುವಸರ್ಜಾ, ವಿಜಯ್ ರಾಘವೇಂದ್ರ, ಶ್ರೀಮುರುಳಿ ಸೇರಿದಂತೆ ಕನ್ನಡ ಸಿನಿ ಲೋಕದ ಸ್ಟಾರ್ ನಟರು ಪ್ರತಿಭಟನೆ ವೇಳೆ ಪಾಲ್ಗೊಳ್ಳಿದ್ದಾರೆ ಎನ್ನಲಾಗಿದೆ.

ಇನ್ನು ಕರ್ನಾಟಕ ಬಂದ್‌ಗೆ ಚಿತ್ರ ಪ್ರದರ್ಶಕರ ಸಂಘ ಬೆಂಬಲ ಸೂಚಿಸಿದೆ. ಕರ್ನಾಟಕ ಬಂದ್ ಹಿನ್ನೆಲೆ ನಾಳೆ ಚಿತ್ರಮಂದಿರಗಳನ್ನು ಬಂದ್ ಮಾಡಲು ಪ್ರದರ್ಶಕರ ಸಂಘ ನಿರ್ಧರಿಸಿದೆ. ಇದೇ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್, ರಾಕಿಂಗ್ ಸ್ಟಾರ್ ನಟ ಯಶ್ ಅವರು ಕೂಡ ಈ ಹೋರಾಟಕ್ಕೆ ಬೆಂಬಲ ಕೊಡ್ತಾರಾ? ಎಂಬ ಪ್ರಶ್ನೆ ಮೂಡಿದೆ. ಆ ಬಗ್ಗೆ ವಿವರ ಮುಂದೆ ಇದೆ ಓದಿ.
ರಾಕಿಂಗ್ ಸ್ಟಾರ್ ಯಶ್ ಬರ್ತಾರಾ?
ಇನ್ನು ನಾಳೆ ನಡೆಯಲಿರುವ ಸಿನಿಮಾ ಸ್ಟಾರ್‌ಗಳ ಕಾವೇರಿ ಪ್ರತಿಭಟನೆ ವೇಳೆ ನಟ ಯಶ್ ಕೂಡ ಭಾಗವಹಿಸುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಇಲ್ಲಿಯವರೆಗೂ ಕನ್ನಡ ಸ್ಟಾರ್ಸ್ ಕಾವೇರಿ ಹೋರಾಟಕ್ಕೆ ಬರುತ್ತಿಲ್ಲ ಕಾವೇರಿ ವಿಚಾರದ ಬಗ್ಗೆ ಧ್ವನಿ ಎತ್ತುತ್ತಿಲ್ಲ ಏಕೆ ಎಂಬ ಆಕ್ರೋಶ ಮೊಳಗಿತ್ತು. ಆದರೆ ಇದೀಗ ಸಿನಿಮಾ ಮಂದಿ ಕೂಡ ಹೋರಾಟಕ್ಕೆ ಸಕಲ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಈ ಹೋರಾಟದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ ಅವರು ಕೂಡ ಭಾಗವಹಿಸುತ್ತಾರಾ? ಎಂಬ ಪ್ರಶ್ನೆ ಮೂಡಿದೆ.
ಒಟ್ನಲ್ಲಿ ಕಳೆದ ವರ್ಷ ಅಂದ್ರೆ 2022ರ ಮಳೆಗಾಲದಲ್ಲಿ ತಮಿಳುನಾಡಿನ ಡ್ಯಾಂಗೆ ಹರಿದಿದ್ದ 400 ಟಿಎಂಸಿಗೂ ಹೆಚ್ಚು ಕಾವೇರಿ ನದಿ ನೀರು ಸಮುದ್ರಕ್ಕೆ ಸೇರಿದೆ. ಮುಂಗಾರು ಮಳೆ ಅಬ್ಬರ ಕಾರಣ ಮೆಟ್ಟೂರು ಡ್ಯಾಂನಿಂದ 472 ಟಿಎಂಸಿ ಹೆಚ್ಚು ನೀರನ್ನ ಹೊರಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿದೆ. ಇಷ್ಟೊಂದು ನೀರನ್ನ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರಿಗೋಸ್ಕರ ತಮಿಳುನಾಡು ಕಿರಿಕ್ ಶುರುಮಾಡಿದ್ದು, ಕನ್ನಡಿಗರು ರೊಚ್ಚಿಗೆದ್ದು ಪ್ರತಿಭಟನೆ ಶುರು ಮಾಡಿದ್ದಾರೆ. ಬೆಂಗಳೂರು ಬಂದ್ ಮಾಡಿರುವ ಕನ್ನಡಿಗರು ಇದೀಗ ಕರ್ನಾಟಕ ಬಂದ್‌ಗೆ ಸಿದ್ಧತೆ ನಡೆಸಿದ್ದಾರೆ. ಕನ್ನಡದ ಸಿನಿಮಾ ಸ್ಟಾರ್ಸ್ ಕೂಡ ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ.












Click it and Unblock the Notifications