‘ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ತಡ ಮತಾಂಧರು, ಗಲಭೆಕೋರರು...’
ರಾಜ್ಯದಲ್ಲಿ ಗ್ಯಾರಂಟಿಗಳ ವಿಚಾರಕ್ಕೆ ಕಿತ್ತಾಡುತ್ತಿದ್ದ ಬಿಜೆಪಿ & ಕಾಂಗ್ರೆಸ್ ನಾಯಕರ ಮಧ್ಯೆ ಈಗ ಹಿಜಾಬ್ ಕಿತ್ತಾಟ ಕೂಡ ಜೋರಾಗಿದೆ. ಅದ್ರಲ್ಲೂ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇದೇ ಅಸ್ತ್ರ ಮುಂದಿಟ್ಟುಕೊಂಡು ಬಿಜೆಪಿ ವಾಗ್ದಾಳಿ ಶುರು ಮಾಡಿದೆ. ಹಾಗಾದರೆ ಹಿಜಾಬ್ ವಿಚಾರದಲ್ಲಿ ಬಿಜೆಪಿ ಹೇಳಿದ್ದು ಏನು? ಹಿಜಾಬ್ ಬಗ್ಗೆ ಬಿಜೆಪಿ ಮಾತಿಗೆ ಕಾಂಗ್ರೆಸ್ ಉತ್ತರ ಕೊಟ್ಟಿದೆಯಾ?
ಹೌದು, ಕಳೆದ ಸಾಲಿನಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ನಡೆಸುವ ಸಮಯದಲ್ಲಿ ಈ ರೀತಿ ಹಿಜಾಬ್ ವಿಚಾರ ದೊಡ್ಡ ಸದ್ದು ಮಾಡಿತ್ತು. ಅದರಲ್ಲೂ ಬಿಜೆಪಿ ನಾಯಕರು ಇದೇ ಅಸ್ತ್ರ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರೆ, ಕಾಂಗ್ರೆಸ್ ಇದೇ ವಿಷಯದಲ್ಲಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಆದರೆ ಹೇಗೋ ಹಿಜಾಬ್‌ನ ಕಿರಿಕ್ ತಣ್ಣಗಾಗಿದೆ ಅನ್ನುವಷ್ಟರಲ್ಲಿ ಮತ್ತೆ ಕಿಚ್ಚು ಹೊತ್ತಿದೆ. ಹಾಗಾದ್ರೆ ಹಿಜಾಬ್ ಕುರಿತಾಗಿ ಈಗ ಏನಿದೆ ಬಿಗ್ ಅಪ್‌ಡೇಟ್? ಇದರಿಂದ ಮತ್ತೊಮ್ಮೆ ದೊಡ್ಡ ಕಿರಿಕ್ ಆಗುತ್ತಾ?

ಹಿಜಾಬ್ ಫೈಟ್ ಮತ್ತೆ ಜೋರು?
ಅಷ್ಟಕ್ಕೂ ಈಗಿನ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಮತ್ತೊಮ್ಮೆ ಹಿಜಾಬ್ ಕಿಚ್ಚು ಧಗಧಗಿಸಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ರಾಜ್ಯ ಸರ್ಕಾರವು ಹಿಜಾಬ್‌ಗೆ ಅನುಮತಿ ನೀಡುತ್ತೆ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಹಾಕಬಹುದು ಎಂಬ ವರದಿಗಳು ಹರಿದಾಡುತ್ತಿರುವ ಇದೆ ಸಮಯದಲ್ಲಿ ಕಿಚ್ಚು ಹೊತ್ತಿದೆ. ಅದರಲ್ಲೂ ಬಿಜೆಪಿ ನಾಯಕರು, ಈ ವಿಚಾರ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಕೊಂಡೊಯ್ದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಲು ಸಜ್ಜಾಗಿದ್ದಾರೆ. ಹೀಗಾಗಿಯೇ ಈಗ ಕರ್ನಾಟಕ ಬಿಜೆಪಿ ಘಟಕದ ವತಿಯಿಂದ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಹಾಗಾದರೆ ಹಿಜಾಬ್ ಬಗ್ಗೆ ಬಿಜೆಪಿ ಹೇಳಿದ್ದೇನು?
'ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ತಡ...'
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಬಿಜೆಪಿ 'ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ತಡ ಮತಾಂಧರು, ಗಲಭೆಕೋರರು, ಪಿಎಫ್‌ಐ ಗೂಂಡಾಗಳು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಿ ಕೋಮುಗಲಭೆಗೆ ಮುನ್ನುಡಿ ಇಟ್ಟಿದ್ದಾರೆ. ಶಾಲಾ-ಕಾಲೇಜಿನಲ್ಲಿ ಮಕ್ಕಳ ನಡುವೆ ಸಮಾನತೆ ಕಾಪಾಡುವುದಕ್ಕಾಗಿ ಸಮವಸ್ತ್ರ ನಿಯಮ ಜಾರಿಯಲ್ಲಿದೆ. ಉಡುಪಿಯ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಆದೇಶವಿದ್ದರೂ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೆ ವಿಷಯವನ್ನು ಮುನ್ನಲೆಗೆ ತಂದು ಶಾಲೆಗಳಲ್ಲಿ ಹಿಜಾಬ್ ಅನ್ನು ಅಧಿಕೃತಗೊಳಿಸಿ ಪಿಎಫ್‌ಐಗೆ ಋಣ ಸಂದಾಯ ಮಾಡಿ ಸಂತೃಪ್ತಿಗೊಳಿಸುತ್ತಿದೆ.' ಎಂದು ಕಮಲ ಪಾಳಯ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದೆ.
ಒಟ್ನಲ್ಲಿ ಹಿಜಾಬ್ ವಿಚಾರವಾಗಿ ಮತ್ತೊಮ್ಮೆ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿ ಸದ್ದು ಮಾಡುವ ಮುನ್ಸೂಚನೆ ಸಿಕ್ಕಿದೆ. ಹಾಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಇದೇ ಸಂದರ್ಭದಲ್ಲಿ ರಾಜಕೀಯ ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಜನರು ಈ ಬೆಳವಣಿಗೆಯನ್ನು ಹೇಗೆ ಸ್ವೀಕರಿಸುತ್ತಾರೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications