ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದ ಕಾರ್ಮಿಕರು ಮಣ್ಣಿನಡಿ ಮಣ್ಣಾದರು
ಮಡಿಕೇರಿ: ಮಂಜಿನ ನಗರಿಯಲ್ಲಿ ಇಂದು ಭೀಕರ ದುರಂತ ಒಂದು ಸಂಭವಿಸಿದ್ದು, ಇದೇ ದುರ್ಘಟನೆಗೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದ ಪರಿಣಾಮ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದಾರೆ. ಈ ಪೈಕಿ ಈಗ ಇಬ್ಬರ ಶವ ಹೊರತೆಗೆದಿದ್ದು, ಇನ್ನೊಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಮಡಿಕೇರಿ ನಗರದ ಸ್ಟೀವರ್ಟ್ ಹಿಲ್ ಬಡಾವಣೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇನ್ನು ಮಣ್ಣಿನ ಅಡಿ ಸಿಲುಕಿದವರನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಸಪ್ಪ, ನಿಂಗಪ್ಪ & ಆನಂದ್ ಎಂದು ಗುರುತಿಸಲಾಗಿದೆ. ಖಾಸಗಿ ಜಾಗದಲ್ಲಿ, ತಡೆಗೋಡೆ ನಿರ್ಮಾಣಕ್ಕೆ ಮಣ್ಣು ತೆಗೆಯುತ್ತಿದ್ದ ಸಂದರ್ಭ ಮಣ್ಣು ಕುಸಿದಿದೆ ಎನ್ನಲಾಗಿದೆ. ಘಟನೆ ಪರಿಣಾಮ ಒಟ್ಟಾರೆ ನಾಲ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿದರು. ಆದರೆ ಈ ವೇಳೆ ಅದೃಷ್ಟವಶಾತ್ ಕಾರ್ಮಿಕ ರಾಜು ಎಂಬ ವ್ಯಕ್ತಿ, ತನ್ನ ಜೊತೆಗೆ ಇದ್ದ ಇತರ ಕಾರ್ಮಿಕರ ಸಹಾಯದಿಂದ ಮೇಲಕ್ಕೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಆದರೆ ಇನ್ನುಳಿದ ಮೂವರು, ವಿಧಿ ಆಟಕ್ಕೆ ಮಣ್ಣಿನ ಅಡಿಯೇ ಜೀವ ಬಿಟ್ಟಿದ್ದಾರೆ.

ಎಷ್ಟೇ ಪ್ರಯತ್ನಿಸಿದರೂ ಜೀವ ಉಳಿಯಲಿಲ್ಲ
ಅಷ್ಟಕ್ಕೂ, ಈ ದುರ್ಘಟನೆ ಸಂಭವಿಸಿದ ಜಾಗದಲ್ಲಿ ಒಟ್ಟು 9 ಕಾರ್ಮಿಕರು ಕೆಲಸ ಮಾಡ್ತಾ ಇದ್ದರು ಅಂತಾ ಹೇಳಲಾಗಿದೆ. ಘಟನೆ ಬಗ್ಗೆ ಸುದ್ದಿ ತಿಳಿದ ತಕ್ಷಣ, ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಿ ಜಿಲ್ಲಾಸ್ಪತ್ರೆಗೆ ರವಾನಿಸಿದರು. ಇಷ್ಟೆಲ್ಲಾ ಕಷ್ಟಪಟ್ಟರೂ ಮೂವರು ಜೀವಂತವಾಗಿ ಮೇಲಕ್ಕೆ ಬರಲೇ ಇಲ್ಲ. ಈ ವೇಳೆ ಜೆಸಿಬಿ ಸಹಾಯ ಕೂಡ ಪಡೆಯಲಾಗಿತ್ತು. ಆದರೆ ಮಣ್ಣಿನ ಕೆಳಗೆ ಸಿಲುಕಿದ್ದ ಕಾರ್ಮಿಕರ ಪ್ರಾಣಪಕ್ಷಿ ಹಾರಿಹೋಗಿತ್ತು. ರಕ್ಷಣಾ ಕಾರ್ಯಾಚರಣೆ ಅವರ ಜೀವ ಉಳಿಸಲು ಸಹಾಯ ಮಾಡಲೇ ಇಲ್ಲ.
ಆಘಾತಕ್ಕೆ ಒಳಗಾದ ಕಾರ್ಮಿಕರು
ಮತ್ತೊಂದು ಕಡೆ ತಮ್ಮ ಜೊತೆಗೆ ಇದ್ದ ಕಾರ್ಮಿಕರು ಜೀವ ಕಳೆದುಕೊಂಡಿದ್ದನ್ನು ಕಣ್ಣಾರೆ ಕಂಡಿದ್ದ ಇತರ ಕಾರ್ಮಿಕರು ಆಘಾತಕ್ಕೆ ಒಳಗಾಗಿದ್ದಾರೆ. ತುತ್ತಿನ ಚೀಲ ತುಂಬಿಸಿಕೊಳ್ಳಲು, ಊರು ಬಿಟ್ಟು ಊರಿಗೆ ಬಂದ ಕಾರ್ಮಿಕರ ಜೀವ ಹೀಗೆ ಕೆಲಸ ಮಾಡುವಾಗಲೇ ಮಣ್ಣಿನಡಿ ಕಳೆದು ಹೋಗಿದೆ. ಅಲ್ದೆ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಮತ್ತೊಂದು ಕಡೆ ಹೀಗೆ ದಿಢೀರ್ ಮಣ್ಣು ಕುಸಿತಕ್ಕೆ ಕಾರಣ ಏನು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ತನಿಖೆ ಬಳಿಕ ಎಲ್ಲಾ ಬಯಲಾಗಲಿದೆ.












Click it and Unblock the Notifications