ಜೈನಮುನಿ ಹತ್ಯೆ ಕೇಸ್‌ಗೆ ದೊಡ್ಡ ಟ್ವಿಸ್ಟ್: ಆಪ್ತನಿಂದಲೇ ಭೀಕರ ಕೊಲೆ?
ಕರ್ನಾಟಕದ ಜನ ಇಂದು ಬೆಚ್ಚಿಬಿದ್ದಿದ್ದಾರೆ. ನಾಪತ್ತೆಯಾಗಿದ್ದ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿಗಳಾದ, ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಶವ ಪತ್ತೆಯಾದ ಬಳಿಕ ಸಂಚಲನ ಸೃಷ್ಟಿಯಾಗಿದೆ. ಇದು ಕೊಲೆ ಎಂಬ ಅನುಮಾನದಲ್ಲೇ ಕೇಸ್ ಬೆನ್ನು ಹತ್ತಿದ್ದ ಪೊಲೀಸರಿಗೆ ಆಘಾತಕಾರಿ ಅಂಶ ಗೊತ್ತಾಗಿದೆ. ಆಪ್ತನಿಂದ ಜೈನಮುನಿಗಳು ಹತ್ಯೆಯಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಕೂಡ ಬಯಲಾಗಿದೆ.
ಹೌದು, ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಪ್ರಕರಣ ಇದೀಗ ದೊಡ್ಡ ತಿರುವು ಪಡೆದಿದೆ. ಇದು ಹತ್ಯೆ ಎಂಬುದನ್ನ ತನಿಖಾಧಿಕಾರಿಗಳು ಕಂಡು ಹಿಡಿದಿದ್ದಾರೆ. ಈ ನಡುವೆ, ಕೊಲೆಗೈದ ಬಳಿಕ ಮೃತದೇಹ ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಎಸೆದಿರುವ ಕುರಿತಾಗಿ ಆರೋಪಿಗಳು ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಹತ್ಯೆಯ ಹಿಂದೆ ಇರುವ ಕೈವಾಡ ಯಾರದ್ದು? ಈ ರೀತಿ ಹತ್ಯೆ ಮಾಡಲು ಕಾರಣ ಏನು? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ಹಣಕ್ಕಾಗಿ ನಡೆಯಿತಾ ಭೀಕರ ಹತ್ಯೆ?
ಅಷ್ಟಕ್ಕೂ ಮೂಲತಃ ಖಟಕಬಾವಿ ಗ್ರಾಮದವನಾದ ಕೇಸ್‌ನ ಪ್ರಮುಖ ಆರೋಪಿ ಜೈನಮುನಿ ಜೊತೆ ಉತ್ತಮ ಒಡನಾಟ ಹೊಂದಿದ್ದನಂತೆ. ಹೀಗೆ ಜೈನಮುನಿಗಳ ವಿಶ್ವಾಸಗಳಿಸಿ ಹಿರೇಕೋಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ. ಬಳಿಕ ಇದೇ ಸ್ನೇಹವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ಅವರ ಬಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾನೆ. ಆದರೆ ಇದೇ ಹಣ ವಾಪಸ್ ಕೇಳಿದ ಕಾರಣಕ್ಕೆ ಇದೀಗ ಜೈನಮುನಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಜುಲೈ 5ರಿಂದ ಹಿರೇಕೋಡಿ ನಂದಿಪರ್ವತ ಆಶ್ರಮದಿಂದ ಜೈನಮುನಿಗಳು ನಾಪತ್ತೆಯಾಗಿದ್ದರು.
ಪೊಲೀಸರ ಲಾಠಿ ನೋಡಿ ಸತ್ಯ ಹೇಳಿದರು!
ಹೌದು, ಜುಲೈ 5ರಿಂದ ಹಿರೇಕೋಡಿ ನಂದಿಪರ್ವತ ಆಶ್ರಮದಿಂದ ಮುನಿಗಳು ನಾಪತ್ತೆಯಾದ ಹಿನ್ನೆಲೆ ಕೇಸ್ ದಾಖಲಾಗಿತ್ತು. ನಿನ್ನೆ ಮಧ್ಯಾಹ್ನ ಚಿಕ್ಕೋಡಿ ಠಾಣೆಗೆ ಜೈನಮುನಿಗಳು ನಾಪತ್ತೆ ಆಗಿರುವ ಬಗ್ಗೆ ಭಕ್ತರು ದೂರನ್ನು ನೀಡಿದ್ದರು. ಪೊಲೀಸ್ ಪಡೆ ಮುನಿಗಳ ಹುಡುಕಾಟ ಶುರು ಮಾಡಿತ್ತು. ಇಲ್ಲೇ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಹೀಗೆ ಖಾಕಿ ಪಡೆ ಹುಡುಕಾಟ ನಡೆಸುವಾಗಲೂ ಆರೋಪಿಗಳು ಜೊತೆಯಾಗಿದ್ದರಂತೆ. ಮುನಿಗಳ ಹುಡುಕಾಟದ ವೇಳೆ ನಾಟಕ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಅನುಮಾನಗೊಂಡು ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದಾಗಿ ಅಸಲಿ ಕಹಾನಿ ಬಯಲಾಗಿದೆ.

ಸಮಗ್ರ ತನಿಖೆಗೆ ಸಿಎಂ ಆಗ್ರಹ
ಈ ಮಧ್ಯೆ ಹಿರೇಕೋಡಿ ಜೈನಮುನಿ ಹತ್ಯೆ ಪ್ರಕರಣ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕೋರ್ಟ್‌ನಲ್ಲಿ ಶಿಕ್ಷೆ ಆಗುವಂತೆ, ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅಲ್ಲದೆ ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸಿಎಂ, ಕಾನೂನುಬಾಹಿರ ಕೃತ್ಯ ಎಸಗಿದವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ. ಈಗಾಗಲೇ ನಮ್ಮ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ ಹಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ಆರೋಪಿ ಕಾನೂನಿನಿಂದ ತಪ್ಪಿಸಿಕೊಳ್ಳಬಾರದು ಎನ್ನುವ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ

ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಪ್ರಕರಣ ರಾಜ್ಯವನ್ನೇ ಬೆಚ್ಚಿಸಿದೆ. ಒಟ್ನಲ್ಲಿ ಇಡೀ ರಾಜ್ಯವನ್ನ ಬೆಚ್ಚಿಬೀಳಿಸಿದ್ದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಕೂಡ ಈ ಕೇಸ್ ಬಗ್ಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದು, ತನಿಖೆ ಚುರುಕುಗೊಂಡಿದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ ನೀಡಿರುವ ಹಿನ್ನೆಲೆ, ಅಧಿಕಾರಿಗಳು ಕೂಡ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಮತ್ತಷ್ಟು ಆಳವಾದ ತನಿಖೆ ನಡೆಯುವ ನಿರೀಕ್ಷೆ ಇದ್ದು, ಇನ್ನೂ ಯಾರೆಲ್ಲಾ ಈ ಕೇಸ್‌ನಲ್ಲಿ ಲಾಕ್ ಆಗಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications