ಅಪರಾಧದಲ್ಲಿ ಭಾಗಿಯಾಗಿರುವವರಿಗೆ ಬಿಜೆಪಿ ಬೆನ್ನೆಲುಬು: ದಿನೇಶ್ ಗುಂಡೂರಾವ್ ಆರೋಪ
ಬೆಂಗಳೂರು, ಜುಲೈ 24: ಕಾನೂನುಬಾಹಿರ ಮತ್ತು ಅಪರಾಧ ಚಟುವಟಿಕೆ ಎಸಗುವವರಿಗೆ ಯಾವುದೇ ಜಾತಿ ಅಥವಾ ಧರ್ಮವಿಲ್ಲ. ಪೊಲೀಸರು ಕಾನೂನಿನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದೂ ಸಂಘಟನೆಗಳನ್ನು ಗುರಿಯಾಗಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ದಿನೇಶ್, ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೆ ಬಿಜೆಪಿ ಬೆನ್ನೇಲುಬಾಗಿರುವುದು ಕೆಟ್ಟ ಪ್ರವೃತ್ತಿಯಾಗಿದೆ. ಅಪರಾಧಗಳ ವಿಚಾರದಲ್ಲಿ ಧರ್ಮಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಅಕ್ರಮ ಚಟುವಟಿಕೆಗಳಿಗೆ ಬಿಜೆಪಿ ಬೆಂಬಲಿಸುತ್ತಿದೆ ಎಂದು ಗುಂಡೂರಾವ್ ಟೀಕಿಸಿದರು.

ಈ ಮೂಲಕ ನಾಡಿನ ಜನರ ಗಮನ ಬೇರೆಡೆ ಸೆಳೆದು ಶಾಂತಿ ಕದಡಲು ಬಿಜೆಪಿ ಯತ್ನಿಸುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಹಲವು ಪ್ರಕರಣಗಳು ದಾಖಲಾಗಿದ್ದ ಕೆಲವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಜಿಲ್ಲೆಯಿಂದ 65 ಮಂದಿಯನ್ನು ಪೊಲೀಸರು ಗಡಿಪಾರು ಮಾಡಿದ್ದಾರೆ. ಡ್ರಗ್ಸ್ ಹಾವಳಿ ಮತ್ತು ನೈತಿಕ ಪೋಲೀಸಿಂಗ್ ವಿರುದ್ಧ ಪೊಲೀಸರು ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಎರಡು ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂವರು ಭಜರಂಗದಳ ಕಾರ್ಯಕರ್ತರಾದ ಬಾಲು ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಶಕ್ತಿನಗರ ಎಂಬ ಮೂವರು ಭಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿತ್ತು.
ಮಂಗಳೂರು ನಗರದ ಸುಲ್ತಾನ್ ಜ್ಯುವೆಲರಿ ಹಾಗೂ ಹೋಳಿ ಆಚರಣೆ ವೇಳೆ ನಡೆದ ನೈತಿಕ ಪೊಲೀಸ್ಗಿರಿಯಲ್ಲಿ ಭಾಗಿಯಾಗಿದ್ದ ಭಜರಂಗದಳದ ಮೂವರನ್ನು ಗಡಿಪಾರು ಮಾಡಲು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಇಲಾಖೆ ನಿರ್ಧರಿಸಿದೆ. ಇದೀಗ ಈ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು? ಎಂದು ಕಾರಣ ಕೇಳಿ ನೋಟಿಸ್ ನೀಡಿದೆ. ಇಂದು ಮೂವರು ಬಜರಂಗದಳ ಕಾರ್ಯಕರ್ತರಿಗೆ ಕಾನೂನು ಸುವ್ಯವಸ್ಥೆ ಖಾತ್ರಿ ಪಡಿಸಲು ಡಿಸಿಪಿ ಎದುರು ಹಾಜರಾಗಲು ಸೂಚನೆ ನೀಡಲಾಗಿತ್ತು.












Click it and Unblock the Notifications