ಪ್ರಧಾನಿ ಮೋದಿ ವಿರುದ್ಧ ರಾಷ್ಟ್ರಪತಿಗೆ ದಿನೇಶ್ ಗುಂಡೂರಾವ್ ಪತ್ರ!
ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಮೂಡ್‌ನಲ್ಲಿ ಪ್ರಧಾನಿ ಮೋದಿ ಅವರು ಸರ್ಕಾರದ ಅಧಿಕೃತ ಕಾರ್ಯಕ್ರಮಗಳನ್ನೂ ವಿಪಕ್ಷಗಳನ್ನು ಹಣಿಯಲು ಬಳಸುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರವನ್ನೂ ಬರೆದಿದ್ದಾರೆ.
'ಸಿಕಲ್ ಸೆಲ್ ಅನೀಮಿಯಾ' ನಿರ್ಮೂಲನೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಇಂದು ಭಾಗವಹಿಸಿದ್ದರು. ಆದರೆ ಸಭೆ ಬೆನ್ನಲ್ಲೇ ವಿವಾದ ಕೂಡ ಭುಗಿಲೆದ್ದಿದೆ. ವರ್ಚುವಲ್ ಸಭೆಗೆ ಪ್ರಧಾನಿ ಚಾಲನೆ ನೀಡುತ್ತಾರೆ ಎನ್ನಲಾಗಿತ್ತು. ಅಲ್ಲದೆ ಆರೋಗ್ಯ ಸಚಿವರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಎಂ ಚರ್ಚಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಆಹ್ವಾನಿಸಿತ್ತು. ಹೀಗೆ ಕರ್ನಾಟಕ ಆರೋಗ್ಯ ಸಚಿವನಾಗಿ ವಿಕಾಸ ಸೌಧದಿಂದ ವರ್ಚುವಲ್ ಸಭೆಯಲ್ಲಿ ನಾನು ಕೂಡ ಭಾಗವಹಿಸಿದ್ದೆ. ಆದರೆ ಪ್ರಧಾನಿ ಮೋದಿಯವರು ಯಾರೊಂದಿಗೂ ಚರ್ಚಿಸಿದೆ, ವಿಪಕ್ಷಗಳನ್ನ ದೂಷಿಸುವ ಭಾಷಣ ಮಾಡಿದರು ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಏನಿದೆ?
'ಸಿಕಲ್ ಸೆಲ್ ಅನೀಮಿಯಾ' ನಿವಾರಣೆಗೆ ದೇಶದಲ್ಲೇ ಮೊದಲು ಜಾಗೃತವಾಗಿದ್ದು ಕರ್ನಾಟಕ ರಾಜ್ಯ. 2016ರಿಂದ ಕರ್ನಾಟಕ ಸರ್ಕಾರ ಸಿಕಲ್ ಸೆಲ್ ವಿರುದ್ಧ ಹೋರಾಟಕ್ಕೆ ಕಾರ್ಯಕ್ರಮ ರೂಪಿಸಿದೆ. 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೈಸೂರು ಭಾಗದ ಬುಡಕಟ್ಟು ಜನರ ತಪಾಸಣೆ ನಡೆಸಿ ಪಾಸಿಟಿವ್ ಬಂದವರಿಗೆ ಉಚಿತ ಚಿಕಿತ್ಸೆ ಕೂಡ ನೀಡ್ತಿದೆ. ಹೀಗಾಗಿ ಕರ್ನಾಟಕ ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ಮೋದಿಯವರು ರಾಜ್ಯ ಸರ್ಕಾರದ ಅಭಿಪ್ರಾಯ ಕೇಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಹೀಗಾಗಿಯೇ ಆರೋಗ್ಯ ಸಚಿವನಾಗಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆದ್ರೆ ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಚುನಾವಣಾ ಭಾಷಣಕ್ಕೆ ನಮ್ಮ ಸಮಯ ವ್ಯರ್ಥಮಾಡಿದರು. ಹಾಗೇ ಪ್ರಧಾನಿ ಮೋದಿಯವರು ಎಲ್ಲರಿಗೂ ನಿರಾಸೆ ಉಂಟುಮಾಡಿದರು ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಆಡಳಿತ ದುರುಪಯೋಗ ಆರೋಪ!
ಇನ್ನು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ ದಿನೇಶ್ ಗುಂಡೂರಾವ್. ಅಲ್ಲದೆ ಪ್ರಧಾನಿ ಅವರು ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಅವರು ಮಾಡಿರುವ ಆರೋಪಗಳು ನಿರಾಧಾರ ಎಂದು ಹೇಳಿರುವ ಸಚಿವರು, ಪ್ರಧಾನಿ ಮೋದಿಯವರು ಕಾಂಗ್ರೆಸ್ & ಇತರ ವಿಪಕ್ಷಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಲು ಸರ್ಕಾರಿ ಕಾರ್ಯಕ್ರಮ ಬಳಕೆಯಾಗುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಕುರಿತಾಗಿ ತಮಗಿರುವ ಪೂರ್ವಾಗ್ರಹ ಮುಂದಿಡಲು ಸರ್ಕಾರದ ಅಧಿಕೃತ ಕಾರ್ಯಚಟುವಟಿಕೆ ಆರಿಸಿಕೊಂಡಿರುವುದು ಆಕ್ಷೇಪಾರ್ಹ ಎಂದು ಪತ್ರದಲ್ಲಿ ಕರ್ನಾಟಕದ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಗ್ಯಾರಂಟಿ ವಿಚಾರದಲ್ಲೂ ಭರ್ಜರಿ ವಾರ್!
ಇನ್ನು ಜನಸಾಮಾನ್ಯರಿಗೆ ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಗಳನ್ನ ಪ್ರಧಾನಿ ಮೋದಿಯವರು ಮೋಸ ಎಂದು ಕರೆದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಒಂದೊಂದಾಗಿ ಜಾರಿಗೆ ಬರುತ್ತಿವೆ. ಇದರಿಂದ ಸಾಮಾನ್ಯರಿಗೆ ಆರ್ಥಿಕವಾಗಿ ಅನುಕೂಲ ಆಗಿದೆ. ಬೆಲೆ ಏರಿಕೆ ಬಿಸಿಯಿಂದ ರಿಲೀಫ್ ಸಿಕ್ಕಿದೆ. ಆದರೆ ಮೋದಿ ಅವರು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ಸರ್ಕಾರಿ ಕಾರ್ಯಕ್ರಮಲ್ಲಿ ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಸಚಿವರು ಆರೋಪವನ್ನ ಮಾಡಿದ್ದಾರೆ. ಪ್ರತಿಯೊಬ್ಬ ನಾಗರಿಕನೂ ತನ್ನ ರಾಜಕೀಯ ಅಭಿಪ್ರಾಯಗಳನ್ನು ರಾಜಕೀಯ ವೇದಿಕೆಗಳಲ್ಲಿ ವ್ಯಕ್ತಪಡಿಸಲು ಮುಕ್ತನಾಗಿದ್ದಾನೆ. ಆದರೆ ರಾಜಕೀಯ ಪೂರ್ವಗ್ರಹ ಸರ್ಕಾರದ ಸಮಾರಂಭದಲ್ಲಿ ಪ್ರಧಾನಿಯೊಬ್ಬರು ವ್ಯಕ್ತಪಡಿಸುವುದು ಅಕ್ಷಮ್ಯ ಎಂದಿದ್ದಾರೆ ದಿನೇಶ್ ಗುಂಡೂರಾವ್.












Click it and Unblock the Notifications