108 ಆಂಬ್ಯುಲೆನ್ಸ್‌ಗಳು ಅಗತ್ಯಕ್ಕಿಂತ ಹೆಚ್ಚು ಸೇವೆಯಲ್ಲಿವೆ: ಬಿಜೆಪಿಯದ್ದು ಸುಳ್ಳು ಆರೋಪ: ಸಚಿವ
ಬೆಂಗಳೂರು: ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿನ '108 ಆಂಬ್ಯುಲೆನ್ಸ್‌ಗಳು ಧೂಳು ಹಿಡಿದಿವೆ. ದುರಸ್ತಿ ಎದುರು ನೋಡುತ್ತಿವೆ ಎಂಬುದು ಬಿಜೆಪಿ ಸುಳ್ಳಿನ ಫ್ಯಾಕ್ಟರಿಯಲ್ಲಿ ಹುಟ್ಟಿದ ವದಂತಿಯಾಗಿದೆ. ಇದಕ್ಕೆ ನಾಡಿನ ಜನತೆ ಕಿವಿಗೊಡಬಾರದು. ಬಿಜೆಪಿ ಆರೋಪ ಸತ್ಯಕ್ಕೆ ದೂರವಾಗಿದೆ. ಅಗತ್ಯತೆಗಿಂತಲೂ ಅಧಿಕ ಆಂಬ್ಯುಲೆನ್ಸ್‌ಗಳು ಸೇವೆಯಲ್ಲಿ ಕಾರ್ಯನಿರತವಾಗಿವೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿರುಗೇಟು ನೀಡಿದರು.
ಶೇ.25 ರಷ್ಟು ಆಂಬ್ಯುಲೆನ್ಸ್‌ಗಳು ನಿರ್ವಹಣೆ ಹಂತದಲ್ಲಿವೆ. ದುರಸ್ತಿ ಎದುರು ನೋಡುತ್ತಿವೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರದ ಮೇಲೆ ಆರೋಪಿಸಿತ್ತು. ಸಾರ್ವಜನಿಕರಿಂದ ಒಂದಷ್ಟು ದೂರುಗಳು ಬಂದಿವೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರವೇ ಇನ್ನುಮುಂದೆ ಆಂಬ್ಯುಲೆನ್ಸ್‌ಗಳ ನಿರ್ವಹಣೆ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇತ್ತ ಬಿಜೆಪಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬುಧವಾರ ಸಚಿವರು ಎಕ್ಸ್ ಪೋಸ್ಟ್ ಮಾಡಿದ್ದು, ಬಿಜೆಪಿ ಅರೆಬರೆ ಮಾಹಿತಿ ಇರಿಸಿಕೊಂಡು ಸುಳ್ಳು ಬಿತ್ತುವ ಮೊದಲು ನಿಮ್ಮ ಕಾಲದ ವೈಫಲ್ಯಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಅಗತ್ಯಕ್ಕಿಂತ ಹೆಚ್ಚು ಆಂಬ್ಯುಲೆನ್ಸ್‌ಗಳಿಂದ ಸೇವೆ
108 ಆಂಬ್ಯುಲೆನ್ಸ್‌ಗಳು ಸುಸ್ಥಿತಿಯಲ್ಲಿವೆ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತಿವೆ ಎಂದು ಸಚಿವರು ವಿವರಿಸಿದ್ದಾರೆ. ಮಾರ್ಗಸೂಚಿ ಅನ್ವಯ ರಾಜ್ಯಕ್ಕೆ 813 ಆಂಬ್ಯುಲೆನ್ಸ್‌ಗಳ ಅವಶ್ಯಕತೆ ಇದೆ. ನಮ್ಮ ಸರ್ಕಾರ 1,841 ಆಂಬ್ಯುಲೆನ್ಸ್‌ಗಳನ್ನು ರಸ್ತೆಗಿಳಿಸಿ ಸೇವೆ ಒದಗಿಸುತ್ತಿದೆ. 108 ಸೇವೆಗೆ ಯಾವುದೇ ಹಣದ ಕೊರತೆಯಿಲ್ಲ. 2025-26ರ ಆಯವ್ಯಯದಲ್ಲಿ 180 ಕೋಟಿ ರೂಪಾಯಿಗೆ ಅನುಮೋದನೆಯಾಗಿ, ಈಗಾಗಲೇ ಬಿಡುಗಡೆಯೂ ಆಗಿದೆ ಎಂದು ಅವರು ಲೆಕ್ಕ ಕೊಟ್ಟರು.
ದೇಶದಲ್ಲೇ ಮೊದಲ ಬಾರಿಗೆ ಸರ್ಕಾರವೇ ನೇರವಾಗಿ 'ಕಮಾಂಡ್ ಸೆಂಟರ್' ಮೂಲಕ 108 ಆ್ಯಂಬುಲೆನ್ಸ್ ಈ ಸೇವೆಯನ್ನು ನಡೆಸುತ್ತಿದೆ. ಸರ್ಕಾರವೊಂದು ಇಡೀ ರಾಜ್ಯಾದ್ಯಂತ ಆಂಬ್ಯುಲೆನ್ಸ್‌ಗಳ ಸೇವೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಮುನ್ನೆಡೆಸುತ್ತಿದೆ ಎಂದರೇ ಅದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾತ್ರ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದರು.
ಕಳೆದ ಅಧಿಕಾರಾವಧಿಯಲ್ಲಿ, ಅದರಲ್ಲೂ ಭೀಕರ ಮಾರಣಾಂತಿಕ ಸೋಂಕು ದೇಶದ ನೆಮ್ಮದಿ ಕಸಿದಿದ್ದ ಕಾಲದಲ್ಲೂ ಬಿಡದೆ ಜನರ ಜೀವದ ಜೊತೆ ಚೆಲ್ಲಾಟವಾಡಿ ಪರ್ಸೆಂಟೇಜ್ ದಂಧೆ ನಡೆಸಿದ್ದು ಯಾರು ಎಂಬುದು ಜನರಿಗೆ ತಿಳಿದಿದೆ. ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ. ನಿಮ್ಮ ಬಿಜೆಪಿ ಆಡಳಿತದಲ್ಲಿ ತುಕ್ಕು ಹಿಡಿದಿದ್ದ, ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಒಳಗಾಗಿದ್ದ ಆರೋಗ್ಯ ಇಲಾಖೆ ನನ್ನ ನೇತೃತ್ವದಲ್ಲಿ ಚೇತರಿಕೆ ಕಂಡಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದಿಂದಲೇ ಆಂಬ್ಯುಲೆನ್ಸ್ ನಿರ್ವಹಣೆ
ದಿನದಲ್ಲಿ 24 ಗಂಟೆಗಳೂ ತುರ್ತು ಸ್ಪಂದನೆ ಸೇವೆ ಆಂಬ್ಯುಲೆನ್ಸ್ ಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಅಗತ್ಯವಾದ ತಂತ್ರಜ್ಞಾನ, ಕಂಮಾಂಡ್ ಸೆಂಟರ್, ಮಾನವ ಸಂಪನ್ಮೂಲ ಯೋಜನೆ ಸೇರಿದಂತೆ ಆರೋಗ್ಯ ಇಲಾಖೆಯಿಂದ ಅವುಗಳ ನಿರ್ವಹಣೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶೀಘ್ರವೇ ಸರ್ಕಾರದಿಂದ ಆಂಬ್ಯುಲೆನ್ಸ್ ಸೇವೆ, ನಿರ್ವಹಣೆ ಆಗಲಿದೆ. ಈ ಹಿಂದೆ 108 ಕವಚ ಆಂಬ್ಯುಲೆನ್ಸ್‌ಗಳನ್ನು ಒಡಂಬಡಿಕೆ ಆಧಾರದಲ್ಲಿ ನಿರ್ವಹಿಸಲಾಗುತ್ತಿತ್ತು. ಇನ್ನು ಮುಂದೆ ಸರ್ಕಾರವೇ ಅಗತ್ಯ ಅನುದಾನದಲ್ಲಿ ನಿರ್ವಹಿಸಲು ತೀರ್ಮಾನಿಸಿದೆ.












Click it and Unblock the Notifications