ಹಲಾಲ್ ಮಾಂಸ ಎಂದರೇನು? ಜಟ್ಕಾ ಕಟ್ vs ಹಲಾಲ್ ಕಟ್ : ತಿನ್ನೋಕೆ ಯಾವ ಮಾಂಸ ಬೆಸ್ಟ್
ಬೆಂಗಳೂರು, ಮಾ. 30: ಹಿಜಾಬ್ ವಿವಾದ ಬುಡದಲ್ಲಿ ಮತ್ತೊಂದು ವಿವಾದ ಎದ್ದಿದೆ. ಯುಗಾದಿ ಹೊಸತೊಡಕು ಸಮೀಪಿಸುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಹಲಾಲ್ ಕಟ್ ಮಾಂಸ ಬಹಿಷ್ಕರಿಸುವಂತೆ ಅಭಿಯಾನ ಅರಂಭಿಸಿದ್ದಾರೆ. ಜತೆಗೆ ಹಿಂದೂ ಮಾಂಸ ಪದ್ಧತಿ ಜಟ್ಕಾ ಕಟ್ ಅಂಗಡಿಗಳಲ್ಲಿ ಮಾಂಸ ಖರೀದಿಸುವಂತೆ ಪ್ರಚಾರ ಮಾಡುತ್ತಿದ್ದಾರೆ. ಹಿಜಾಬ್ ನಂತರ ಇದೀಗ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ ಎದ್ದಿದೆ. ಜಟ್ಕಾ ಕಟ್ ಮತ್ತು ಹಲಾಲ್ ಕಟ್ ಕುರಿತ ಸಮಗ್ರ ವಿವರ ಇಲ್ಲಿದೆ.
ಹಲಾಲ್ ಕಟ್:
ಮುಸ್ಲಿಂ ಧರ್ಮಗ್ರಂಥ ಹೇಳುವ ಪ್ರಕಾರ ಶುದ್ಧ ಆಹಾರ ಸೇವನೆಗೆ ಆದ್ಯತೆ ನೀಡಲಾಗುತ್ತದೆ. ಅದರ ಪ್ರಕಾರ ಯಾವುದೇ ಒಂದು ಪ್ರಾಣಿಯನ್ನು ಸೇವನೆಗಾಗಿ ಕೊಲ್ಲುವ ಸಂಪ್ರದಾಯವನ್ನು ಪಾಲನೆ ಮಡುತ್ತಾರೆ. ಒಂದು ಪ್ರಾಣಿಯನ್ನು ಕೊಲ್ಲುವ ಮುನ್ನ ಅದರ ಕುತ್ತಿಗೆ ಕೆಳಗಿನ ರಕ್ತ ನಾಳವನ್ನು ಕತ್ತರಿಸುತ್ತಾರೆ. ರಕ್ತ ಸಂಪೂರ್ಣ ಹೊರಗೆ ಹರಿದು ಹೋದ ನಂತರ ಅದರ ಮಾಂಸವನ್ನು ಮಾರಾಟ ಮಾಡುತ್ತಾರೆ, ಇಲ್ಲವೇ ಸೇವನೆ ಮಾಡುತ್ತಾರೆ. ಸಾಮಾನ್ಯವಾಗಿ ಮುಸ್ಲಿಂ ಸಮುದಾಯದವರು ಹಲಾಲ್ ಕಟ್ ಮಾಡದ ಮಾಂಸವನ್ನು ಸೇವನೆ ಮಾಡುವುದಿಲ್ಲ. ಅವರ ಸಂಪ್ರದಾಯದ ಪ್ರಕಾರ ಹಲಾಲ್ ಕಟ್ ಮಾಡದ ಮಾಂಸ ಸೇವನೆಗೆ ಅರ್ಹವಲ್ಲ ಎಂಬ ನಂಬಿಕೆ. ಹೀಗಾಗಿ ಮುಸ್ಲಿಂ ಸಮುದಾಯದವರು ಹಲಾಲ್ ಕಟ್ ಮಾಡಿದ ಮಾಂಸವನ್ನೇ ಸೇವನೆ ಮಾಡುತ್ತಾರೆ.
ಜಟ್ಕಾ ಕಟ್:
ಜಟ್ಕಾ ಕಟ್ ಅಥವಾ ದೇವಿ ಕಟ್ ಎಂದೇ ಪರಿಚಿತವಾಗಿರುವ ಈ ಸಂಪ್ರದಾಯ ಹಿಂದೂಗಳು ಪಾಲನೆ ಮಡುತ್ತಾರೆ. ಅದರಲ್ಲೂ ಸಿಖ್ ಸಮುದಾಯ ಸೇರಿದಂತೆ ಉತ್ತರ ಭಾರತದಲ್ಲಿ ಈ ಸಂಪ್ರದಾಯ ಹೆಚ್ಚು ಪ್ರಚಲಿತದಲ್ಲಿದೆ. ಒಂದು ಪ್ರಾಣಿಯ ಜೀವವನ್ನು ನೋವಿಲ್ಲದಂತೆ ಕೊಲ್ಲುವುದು. ರಕ್ತದಲ್ಲಿ ಹಲವು ಕ್ರಿಮಿಗಳು ಇರುತ್ತವೆ. ಒಂದೇ ಸಲ ಕತ್ತಿಯಿಂದ ಕಡಿದರೆ, ಪ್ರಾಣಿ ಸಾವಿನಲ್ಲೂ ನರಳದಂತೆ ಪ್ರಾಣ ಬಿಡುತ್ತದೆ. ಅದರ ಜತೆಗೆ ರಕ್ತ ಪೂರ್ಣ ಪ್ರಮಾಣದಲ್ಲಿ ಹರಿದು ಹೋಗುತ್ತದೆ. ಹೀಗಾಗಿ ದೇವಿ ಕಟ್ ಅಥವಾ ಜಟ್ಕಾ ಕಟ್ ಮಾಡಿದ ಮಾಂಸವಷ್ಟೇ ತಿನ್ನಲು ಶ್ರೇಷ್ಠ ಎಂಬುದು ಹಿಂದೂ ಹಾಗೂ ಸಿಖ್ ಜನರ ನಂಬಿಕೆ. ಹೀಗಾಗಿ ಸಾಮಾನ್ಯವಾಗಿ ಹಿಂದೂ ಸಮುದಾಯದವರು ಜಟ್ಕಾ ಕಟ್ ಮೂಲಕ ಪ್ರಾಣಿಗಳನ್ನು ಕೊಂದು ಅದರ ಮಾಂಸ ಸೇವನೆ ಮಾಡುತ್ತಾರೆ.

ಹಿಜಾಬ್ ಬಳಿಕ 'ಕಟ್' ವಿವಾದ:
ಈ ಎರಡೂ ಸಂಪ್ರದಾಯಗಳು ಚಾಲ್ತಿಯಲ್ಲಿದ್ದರೂ, ಮುಸ್ಲಿಂ ಸಮುದಾಯದವರೇ ಹೆಚ್ಚು ಮಾಂಸ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಲಾಲ್ ಕಟ್, ಜಟ್ಕಾ ಕಟ್ ಎಂದು ಪರಿಭಾವಿಸದೇ ತಮಗೆ ಇಷ್ಟ ಬಂದ ಸ್ಟಾಲ್ ಗಳಲ್ಲಿ ಮಾಂಸ ಖರೀದಿಸಿ ಸೇವನೆ ಮಾಡುತ್ತಿರುವುದು ಸಾಮಾನ್ಯ. ಹೀಗಾಗಿ ಜಟ್ಕಾ ಕಟ್ ಮತ್ತು ಹಲಾಲ್ ಕಟ್ ಪ್ರಮೇಯವೇ ಇರಲಿಲ್ಲ. ಇನ್ನು ಬಹುತೇಕ ಹೋಟೆಲ್ ಗಳಿಗೆ ಮಾಂಸ ಪೂರೈಕೆ ಮಾಡುವರು ಮುಸ್ಲಿಂ ಸಮುದಾಯದವರೇ. ಹೀಗಾಗಿ ಜಟ್ಕಾ ಕಟ್ ಮತ್ತು ಹಲಾಲ್ ಕಟ್ ಗೆ ಯಾರೂ ಅಷ್ಟು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ.

ಹಿಜಾಬ್ ಬಳಿಕ ಜಟ್ಕಾ ಕಟ್ ಹಲಾಲ್ ಕಟ್ ವಿವಾದ:
ಶಾಲೆಗಳಿಗೆ ಹಿಜಾಬ್ ಧರಿಸಿ ಹೋಗಬಾರದು ಎಂಬ ವಿವಾದದ ಬುಡದಲ್ಲಿ ನಾನಾ ರೀತಿಯ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಹಿಂದೂ ದೇವರ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿ ಕೆಲವು ದೇವಾಲಯ ಆಡಳಿತ ಮಂಡಳಿಗಳು ತೀರ್ಮಾನ ತೆಗೆದುಕೊಂಡಿದ್ದವು. ಇದು ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ. ಜತೆಗೆ ಮುಸ್ಲಿಂ ಸಮುದಾಯದವರ ಅಂಗಡಿಗಳಲ್ಲಿ ಏನನ್ನೂ ಖರೀದಿ ಮಾಡಬಾರದು ಎಂದು ಕೆಲವು ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿದ್ದವು. ಈ ವಿವಾದದ ನಡುವೆ ಇದೀಗ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ ಹುಟ್ಟಿಕೊಂಡಿದೆ. ಹಲಾಲ್ ಕಟ್ ಮಾಡುವ ಮುಸ್ಲಿಂ ಸಮುದಾಯವರ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಬಾರದು ಎಂದು ಕೆಲವು ಹಿಂದೂಪರ ಸಂಘಟನೆಗಳು ಪ್ರಚಾರ ಮಾಡುತ್ತಿವೆ. ಇದರ ನಡುವೆ ಜಟ್ಕಾ ಕಟ್ ಮಾಂಸದ ಅಂಗಡಿಗಳು ತಲೆಯೆತ್ತಲು ಶುರುವಾಗಿವೆ.

ರಕ್ತ ಮಾರ್ತಾರೆ ಗೊತ್ತಾ?:
ವಾಸ್ತವದಲ್ಲಿ ಜಟ್ಕಾ ಕಟ್ ಮತ್ತು ಹಲಾಲ್ ಕಟ್ ಮಾಡುವ ಅಂಗಡಿ ಮಾಲೀಕರು ಎಲ್ಲರೂ ಅತಿ ಬುದ್ಧಿವಂತರೇ. ರಕ್ತ ಹೊರ ಚೆಲ್ಲುವ ನೆಪದಲ್ಲಿ ಹಲಾಲ್ ಕಟ್, ಜಟ್ಕಾ ಕಟ್ ಮಾಡುತ್ತಾರೆ. ವಾಸ್ತವದಲ್ಲಿ ಒಂದು ಹನಿ ರಕ್ತವನ್ನು ಬಿಡದೇ ಸಂಗ್ರಹಿಸಿ ಅಗತ್ಯ ಇರುವರಿಗೆ ಮಾರಾಟ ಮಾಡುತ್ತಾರೆ. ವಿವಾದದ ವಿಚಾರ ಬಂದಾಗ, ರಕ್ತದಲ್ಲಿ ಕ್ರಿಮಿಕೀಟಗಳಿರುತ್ತವೆ. ಈ ಮಾಂಸ ತಿನ್ನುವಂತಿಲ್ಲ ಎಂಬ ಗಿಣಿ ಪಾಠ ಮಾಡಲು ಆರಂಭಿಸಿದ್ದಾರೆ.
ಮಾಂಸದಲ್ಲಿನ ವ್ಯತ್ಯಾಸ ಏನು?
ಹಲಾಲ್ ಕಟ್ ಮಾಡಿದ ಮಾಂಸದಲ್ಲಿ ರಕ್ತ ಸಂಪೂರ್ಣವಾಗಿ ಹೊರಗೆ ಹೋಗಿರುತ್ತದೆ. ಇದರ ಮಾಂಸವನ್ನು ಬೇಯಿಸಿದಾಗ ಹೆಚ್ಚು ಮೃದುವಾಗಿರುತ್ತದೆ. ಜಟ್ಕಾ ಕಟ್ ಮಾಡಿದ ಮಾಂಸದಲ್ಲಿ ರಕ್ತ ಸ್ವಲ್ಪ ಮಟ್ಟಿಗೆ ಹಾಗೇ ಉಳಿದಿರುತ್ತದೆ. ಆದರೆ, ಇದನ್ನು ಬೇಯಿಸದೆಯೂ ಹೆಚ್ಚು ದಿನದವರೆಗೂ ಬಳಸಬಹುದು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸುತ್ತಾರೆ.












Click it and Unblock the Notifications