ಕರ್ನಾಟಕದ ಹಲವು ನ್ಯಾಯಾಲಯ, ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ
ಕರ್ನಾಟಕದಲ್ಲಿ ಪದೇ ಪದೇ ಸಾರ್ವಜನಿಕ ಸ್ಥಳಗಳಿಗೆ ಬೆದರಿಕೆ ಕರೆ ಹಾಗೂ ಇ-ಮೇಲ್ ಕಳಿಸುವ ಕಿಡಿಗೇಡಿಗಳ ಹಾವಳಿ ಜಾಸ್ತಿ ಆಗಿದೆ. ಇಷ್ಟು ದಿನಗಳ ಕಾಲ ಶಾಲೆ & ಕಾಲೇಜುಗಳು ಸೇರಿದಂತೆ, ಶಿಕ್ಷಣ ಸಂಸ್ಥೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಿಡಿಗೇಡಿಗಳು ಇದೀಗ ನೇರವಾಗಿ ಕನ್ನಡ ನಾಡಿನ ನ್ಯಾಯಾಲಯಗಳನ್ನೇ ಗುರಿಯಾಗಿಸಿ ಬಾಂಬ್ ಬೆದರಿಕೆ ಇ-ಮೇಲ್ ಕಳಿಸಿದ್ದಾರೆ. ಈ ರೀತಿಯಾಗಿ, ಬಾಂಬ್ ಬೆದರಿಕೆ ಮೇಲ್ ಬಂದ ಹಿನ್ನೆಲೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.
ಬಾಂಬ್ ಬೆದರಿಕೆ ಸಂದೇಶ ಧಾರವಾಡ ಹೈಕೋರ್ಟ್ ಪೀಠವೂ ಸೇರಿ ಗದಗ ಮತ್ತು ಬಾಗಲಕೋಟೆಯ ಜಿಲ್ಲಾ ನ್ಯಾಯಾಲಯಗಳಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಸಂಕೀರ್ಣ ಸ್ತಬ್ಧವಾಗಿ ಕೆಲ ಸಮಯದ ತನಕ ಆತಂಕ ಎದುರಾಗಿತ್ತು. ಸಂದೇಶ ಓದಿದ ತಕ್ಷಣ ಧಾರವಾಡ ಹೈಕೋರ್ಟ್ ಪೀಠದ ಕಲಾಪ ಸ್ಥಗಿತಗೊಳಿಸಿ ತಪಾಸಣೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಕಟ್ಟಡವನ್ನು ತಕ್ಷಣ ಖಾಲಿ ಮಾಡಿಸಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ನೇತೃತ್ವದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಹಾಗಾದರೆ ಈ ಮೇಲ್ ಬಂದಿದ್ದು ಎಲ್ಲಿಂದ? ಎಂಬ ಬಗ್ಗೆ ತಕ್ಷಣವೇ ಶೋಧ ಆರಂಭಿಸಲಾಗಿದೆ.

ಹೈಕೋರ್ಟ್ ಕಟ್ಟಡದಲ್ಲಿ ತಕ್ಷಣ ಪರಿಶೀಲನೆ
ಶಿಕ್ಷಣ ಕಾಶಿ ಎಂಬ ಬಿರುದು ಪಡೆದಿರುವ, ಧಾರವಾಡದ ಪಿಬಿ ರಸ್ತೆ ಹೈಕೋರ್ಟ್ ಪೀಠದ ರಿಜಿಸ್ಟ್ರಾರ್ ಅವರಿಗೆ ಅನಾಮಧೇಯ ಇ-ಮೇಲ್ ಬಂದಿತ್ತು. ಇ-ಮೇಲ್ ಸಂದೇಶ ಪರಿಶೀಲನೆ ನಡೆಸಿದ ವೇಳೆ ಕೋರ್ಟ್ ಆವರಣದಲ್ಲಿ ಸ್ಫೋಟಕ ಇರಿಸಿದ ಬಗ್ಗೆ ಬೆದರಿಕೆ ಹಾಕಲಾಗಿತ್ತು. ಈ ವಿಚಾರ ತಕ್ಷಣವೇ ಪೊಲೀಸರಿಗೆ ತಿಳಿಸಲಾಗಿದೆ. ಕೂಡಲೇ ಅಲರ್ಟ್ ಆದ ಪೊಲೀಸರು, ನ್ಯಾಯಾಧೀಶರು & ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದ್ದಾರೆ. ಹಾಗೂ ಕೂಡಲೇ ಇಡೀ ಕೋರ್ಟ್ ಆವರಣ ಸೇರಿದಂತೆ ಒಳಗೆಲ್ಲಾ ಪರಿಶೀಲನೆ ನಡೆಸಲಾಗಿದೆ.
ಪಾಸ್‌ಪೋರ್ಟ್ ಕಚೇರಿಗೂ ಬೆದರಿಕೆ ಇ-ಮೇಲ್
ಕೂಡಲೇ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹುಬ್ಬಳ್ಳಿ ಮತ್ತು ಧಾರವಾಡ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಕಟ್ಟಡವನ್ನು ತಮ್ಮ ಸುಪರ್ದಿಗೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ & ಬಾಂಬ್ ಪತ್ತೆ ದಳ ಕೂಡಲೇ ಕೋರ್ಟ್‌ನ ಮೂಲೆ ಮೂಲೆ ಜಾಲಾಡಿದ್ದಾರೆ. ಇದೇ ರೀತಿ ಗದಗ & ಬಾಗಲಕೋಟೆ ಜಿಲ್ಲಾ ನ್ಯಾಯಾಲಯಗಳಿಗೂ ಬೆದರಿಕೆ ಸಂದೇಶ ಬಂದಿದೆ. ಹಾಗೂ ಬೆಂಗಳೂರಿನ ಕೋರಮಂಗಲದ ಪಾಸ್‌ಪೋರ್ಟ್ ಕಚೇರಿಗೆ ಕೂಡ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಅನಾಮದೇಯರು. ಈ ಕಾರಣಕ್ಕೆ ಎಲ್ಲಾ ಘಟನೆಗಳ ಬಗ್ಗೆ ತನಿಖೆ ಮುಂದುವರಿದಿದೆ.












Click it and Unblock the Notifications