Railway Line: ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗಕ್ಕೆ ವಿಘ್ನ: ರೈತರಿಗೆ ಭೂಮಿ ಆತಂಕ, ಯೋಜನೆಗೆ ವಿರೋಧ
ಧಾರವಾಡ: ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಬೆಳಗಾವಿಗೆ ವಂದೇ ಭಾರತ್ ರೈಲು ಬಿಡುವಂತೆ ಈ ಹಿಂದೆ ಬೇಡಿಕೆ ಬಂದಿತ್ತು. ಇದರೊಂದಿಗೆ ಬೇರೆ ಬೇರೆ ಭಾಗಗಳಲ್ಲಿ ರೈಲು ಮಾರ್ಗ ನಿರ್ಮಿಸಲು, ಸಾರಿಗೆ ಸುಧಾರಣೆಗೆ ಆಗ್ರಹ ಸಾಮಾನ್ಯವಾಗಿದ್ದವು. ಇದೀಗ ಉತ್ತರ ಕರ್ನಾಟಕದಲ್ಲಿ ಪ್ರಮುಖ ರೈಲು ಮಾರ್ಗ ನಿರ್ಮಾಣಕ್ಕೆ ರೈತರು ಸೇರಿದಂತೆ ಸ್ಥಳೀಯರಿಂದ ವ್ಯಾಪಕ ವಿರೋಧ ಕೇಳಿ ಬರುತ್ತಿದೆ. ಅದಕ್ಕೆ ಸೂಕ್ತ ಕಾರಣಗಳನ್ನು ಅವರು ಸರ್ಕಾರದ ಮುಂದಿಟ್ಟಿದ್ದಾರೆ.
ಧಾರವಾಡ ಮತ್ತು ಬೆಳಗಾವಿ ಮಧ್ಯೆ ರೈಲು ಸಂಪರ್ಕ ಸಾಧಿಸಲು ಹಳಿ ಸ್ಥಾಪನೆ ಅಗತ್ಯವಾಗಿದೆ. ಅದಕ್ಕೆ ಬೇಕಾದ ಜಾಗ, ಭೂ ಸ್ವಾಧೀನ ಸೇರಿ ಯೋಜನೆಯ ನೀಲ ನಕ್ಷೆ ಸಿದ್ಧವಾಗಿದೆ. ಸದರಿ ನೀಲ ನಕ್ಷೆ ಆಧಾರದಲ್ಲಿ ಸರ್ಕಾರಿ ಹಾಗೂ ಅನೇಕ ಖಾಸಗಿ ಆಸ್ತಿ ಪಾಸ್ತಿಗಳು ನೆಲಸಮಗೊಳ್ಳುತ್ತವೆ. ಈ ಭಾಗದಲ್ಲಿ ಈಗಾಗಲೇ ಕೈಗಾರಿಕಾ ಉದ್ದೇಶಕ್ಕಾಗಿ ಕೃಷಿ ಭೂಮಿ ಕಳೆದುಕೊಂಡಿರುವ ರೈತರ ಮತ್ತೆ ರೈಲ್ವೆ ಮಾರ್ಗಕ್ಕೆ ಕೃಷಿ ಭೂಮಿ ನೀಡಲು ಸಿದ್ಧರಿಲ್ಲ ಎಂದು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉದ್ದೇಶಿತ ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣವಾದರೆ ರೈತರಲ್ಲಿ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಅಲ್ಲದೇ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ, ಈಗಾಗಲೇ ಜೀವನೋಪಾಯಕ್ಕೆ ಆಸರೆಯಾಗಿರುವ ಕಟ್ಟಡಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಚಿಂತೆ, ಭಯದಿಂದಲೇ ಈ ಭಾಗದ ಜನರು ಯೋಜನೆಗೆ ವಿರೋಧ ಹೊರ ಹಾಕುತ್ತಿದ್ದಾರೆ.
ಕೋಟಿ ಬೆಲೆ ಬಾಳುವ ಜಾಗ ಕಳೆದುಕೊಳ್ಳುವ ಆತಂಕ
ಈ ಹಿಂದೆ ಕೈಗಾರಿಕಾ ಉದ್ದೇಶಕ್ಕಾಗಿ ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಬೇಲೂರು ಗ್ರಾಮಸ್ಥರು ಎಲ್ಲ ಭೂಮಿ ಕಳೆದುಕೊಂಡಿದ್ದಾರೆ. ಸದ್ಯ ಉದ್ದೇಶಿಸಿರುವ ಈ ರೈಲು ಮಾರ್ಗವು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸಾಗಲಿದೆ. ಭವಿಷ್ಯದಲ್ಲಿ ಜನದಟ್ಟಣೆ, ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದಂತೆ ಹೆದ್ದಾರಿ ರಸ್ತೆಯನ್ನು ವಿಸ್ತರಣೆ ಮಾಡಿದರೆ ನಮ್ಮ ಗತಿ ಏನು? ಎಂಬುದು ಗ್ರಾಮಸ್ಥರ ಅಳಲಾಗಿದೆ. ಗ್ರಾಮದ ಜನರಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ ಎಂಬ ಚಿಂತೆಯು ಹಲವರಲ್ಲಿ ಕಾಡುತ್ತಿದೆ. ಸಮೀಪವ ಹೆದ್ದಾರಿ ಇರುವ ಕಾರಣಕ್ಕೆ ಈ ಭಾಗದ ಆಸ್ತಿಗಳು ಕೋಟಿ ರೂಪಾಯಿ ಲೆಕ್ಕದಲ್ಲಿ ಮಾರಾಟವಾಗುತ್ತವೆ.
73 ಕಿಮಿ ರೈಲು ಮಾರ್ಗ, 2500 ಕೋಟಿ ರೂ. ಅಂದಾಜು ಮೊತ್ತ
ಬೆಳಗಾವಿಯಿಂದ ಧಾರವಾಡವು ಸುಮಾರು 73 ಕಿಲೋ ಮೀಟರ್ ಅಂತರವಿದೆ. ಇಲ್ಲಿ ರೈಲು ಮಾರ್ಗ ಸ್ಥಾಪನೆಗೆ ಸುಮಾರು 2500 ಕೋಟಿ ರೂ.ಗೂ ಅಧಿಕ ಹಣ ವ್ಯಯಿಸಲು ಮುಂದಾಗಿರುವ ಕೇಂದ್ರ ರೈಲ್ವೆ ಇಲಾಖೆಯು ಈಗಾಗಲೇ ನೀಲಿ ನಕ್ಷೆ ಸಿದ್ಧಪಡಿಸಿದೆ. ಈ ಸಂಬಂಧ ಭೂಮಿ ಸ್ವಾಧೀನಕ್ಕೆ ಜಾಗಗಳನ್ನು ಗುರುತಿಸಿದೆ ಎನ್ನಲಾಗಿದೆ. ಅಲ್ಲದೇ ಈ ಭಾಗದಲ್ಲಿ ಕೃಷಿ ಭೂಮಿಗಳು, ಕಟ್ಟಡಗಳು ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತವೆ. ಅವುಗಳನ್ನು ಕಳೆದುಕೊಂಡು ರೈತರು ಸಂಕಷ್ಟ ಎದುರಿಸಬೇಕಾ? ಭಯ ಎದುರಾಗಿರುವ ಕಾರಣಕ್ಕೆ ಸದರಿ ನೂತನ ರೈಲು ಯೋಜನೆಗೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದಿಂದ ಅವರ ಮನವೊಲಿಸುವ ಕಾರ್ಯ ಮುಂದಿನ ದಿನಗಳಲ್ಲಿ ಆಗುವ ನಿರೀಕ್ಷೆ ಇದೆ.












Click it and Unblock the Notifications