ಧರ್ಮಸ್ಥಳ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: 13 ಸ್ಥಳ ಗುರುತಿಸಿದ ದೂರುದಾರ ವ್ಯಕ್ತಿ, ಇಂದು 2 ಸ್ಥಳ ನಿರೀಕ್ಷೆ
ಧರ್ಮಸ್ಥಳ, ಜುಲೈ 29: ಧರ್ಮಸ್ಥಳ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಹತ್ವದ ಬೆಳವಣಿಗೆ ನಡೆದಿದೆ. ಧರ್ಮಸ್ಥಳದಲ್ಲಿ ಸಾಕಷ್ಟು ಅಪರಾಧ ಕೃತ್ಯ ನಡೆದಿವೆ ಎಂದು ಹೇಳಿದ್ದ ಅನಾಮಿಕ ವ್ಯಕ್ತಿ (ಸಾಕ್ಷಿ ದೂರುದಾರ) ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಶವಗಳ ಹೂತ 13 ಜಾಗಗಳನ್ನು ತೋರಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಇಂದು ಸಹ ಎರಡು ಸ್ಥಳ ಗುರುತಿಸುವ ನಿರೀಕ್ಷೆ ಇದೆ. ಮಹಜರು ಜೊತೆಗೆ ಇಂದು ಎರಡನೇ ದಿನ ಮಳೆಯಲ್ಲೇ ಗುಂಡಿ ಅಗೆಯುವ ಕಾರ್ಯ ನಡೆದಿದೆ.
ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತಿದ್ದೆ ಎಂದ ದೂರುದಾರ ವ್ಯಕ್ತಿ ಶವ ಅವಶೇಷಗಳಿರುವ ಜಾಗಗಳನ್ನು ಸೋಮವಾರ ತೋರಿಸಿದ್ದಾನೆ. ಇದರಲ್ಲಿ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಮತ್ತು ಅರಣ್ಯ ವ್ಯಾಪ್ತಿಯ ಜಾಗಗಳು ಸೇರಿವೆ. ಆತ ತೋರಿಸಿದ್ದಂತೆ ಎಸ್‌ಐಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಜಾಗದಲ್ಲಿ ಟೇಪ್ ಕಟ್ಟಿದ್ದಾರೆ. ನಿರ್ದಿಷ್ಟ ಅಳತೆಯ ಜಾಗ ಗುರುತಿಸಿ ಎಲ್ಲವುಗಳಿಗೆ ಸಂಖ್ಯೆ ನೀಡಿದ್ದಾರೆ. ರಾತ್ರಿಯಿಡಿ ಆ ಅಲ್ಲಿ ಗಸ್ತು ನಿಯೋಜಿಸಲಾಗಿದೆ. ಈ ಮೂಲಕ ಧರ್ಮಸ್ಥಳ ಪ್ರಕರಣಗಳ ತನಿಖೆಗೆ ಮತ್ತಷ್ಟು ವೇಗ ಸಿಕ್ಕಂತಾಗಿದೆ. ಇಂದು ಮಂಗಳವಾರ ಸಹ ಸ್ಥಳ ಗುರುತಿಸುವುದು, ಮಹಜರು ಮುಂದುವರಿದಿದೆ.

ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನದಿ ಬದಿಯಲ್ಲಿ ನೆನ್ನೆ ಮೊದಲ ಸ್ಥಳ ಗುರುತಿಸಿದ್ದ ವ್ಯಕ್ತಿ, ನಂತರ ಅರಣ್ಯ ಪರಿಸರದಲ್ಲಿ ಒಟ್ಟು ಎಂಟು ಸ್ಥಳ ಹೀಗೆ ಹದಿಮೂರು ಸ್ಥಳ ಗುರುತಿಸಿದ್ದಾನೆ. ಎಸ್‌ಐಟಿ ಸಿಬ್ಬಂದಿ ಮಹಜರು ನಡೆಸಿದ್ದಾರೆ. ಇಂದು ಮಂಗಳವಾರ ಸಹ ಅಧಿಕಾರಿಗಳ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದೆ. ಎಸ್‌ಐಟಿ ಮಾತ್ರವಲ್ಲದೆ ವಿಧಿ ವಿಜ್ಞಾನದ ತಜ್ಞರು, ಭದ್ರತಾ ಸಿಬ್ಬಂದಿ ದೂರುದಾರನ ಜೊತೆ ಎರಡು ಕಿಲೋ ಮೀಟರ್ ಸುತ್ತಮುತ್ತ ಮಹಜರು ಎರಡನೇ ದಿನವು ಮುಂದುವರಿದಿದೆ.
ಜಾಗ ಗುರುತಿಸಿದ ಪ್ರಕ್ರಿಯೆ ಹೇಗಿತ್ತು?
ಮುಖಕ್ಕೆ ಮುಸುಕು ಹಾಕಿದ್ದ ವ್ಯಕ್ತಿಯನ್ನು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಕರೆದೊಯ್ಯಲಾಯಿತು. ಬೆಳಗ್ಗೆ 10 ಗಂಟೆ ಹೊತ್ತಿಗೆ ಅಧಿಕಾರಿಗಳು ಹಾಜರಿದ್ದರು. ನಂತರ ದೂರುದಾರ ವ್ಯಕ್ತಿಯನ್ನು ಬೆಳಗ್ಗೆ 11.50ರ ಹೊತ್ತಿಗೆ ತನಿಖಾಧಿಕಾರಿಗಳು ಧರ್ಮಸ್ಥಳದ ಸ್ಥಾನಘಟ್ಟದ ಕಡೆಗೆ ಕರೆದೊಯ್ದರು. ಆತ ಒಂದೊಂದಾಗೆ ತಾನು ಈ ಜಾಗದಲ್ಲಿ ಹೆಣ ಹೂತಿದ್ದೆ ಎಂದು ಜಾಗ ಗುರುತಿಸಿದೆ. ತನಿಖಾ ಸಿಬ್ಬಂದಿ ಆ ಸ್ಥಳದಲ್ಲಿ ಕೆಂಪು ಬಣ್ಣದ ಟೇಪ್ ಹಾಕಲು ಆರಂಭಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಒಂದಷ್ಟು ಜಾಗಗಳು ನಂತರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಊಟ ಮಾಡಿದ ಬಳಿಕ ಮತ್ತೆ ಕಾಡಿನೊಳ್ಳಕ್ಕೆ ಮುಸುಕುದಾರಿ ವ್ಯಕ್ತಿಯನ್ನು ಕರೆದೊಯ್ದ ತನಿಖಾಧಿಕಾರಿಗಳಿಗೆ ಮತ್ತೆ ನಾಲ್ಕು ಸ್ಥಳಗಳನ್ನು ತೋರಿಸಿದ್ದಾರೆ. ಇತ್ತೀಚೆಗೆ ಸಾಕ್ಷಿ ದೂರದಾರನನ್ನು ಶನಿವಾರ ಮತ್ತು ಭಾನುವಾರ ಮಂಗಳೂರಿನ ಕಚೇರಿಯಲ್ಲಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು. ಸ್ಥಳ ಮಹಜರು ಸೇರಿದಂತೆ, ದೂರು, ಹೂತಿಟ್ಟ ಶವಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.












Click it and Unblock the Notifications