ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ FIR ದಾಖಲಿಸಲು ಹೊಸ ಮಾರ್ಗಸೂಚಿ: ಡಿಜಿಪಿ ಎಂ.ಎ. ಸಲೀಮ್ ಆದೇಶ
ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ "ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ" ಎಫ್‌ಐಆರ್ ದಾಖಲಿಸುವುದಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (DG & IGP) ಎಂ.ಎ. ಸಲೀಮ್ ಬ್ರೇಕ್ ಹಾಕಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪಾಲಿಸುವ ಉದ್ದೇಶದಿಂದ ಫೆಬ್ರವರಿ 7 ರಂದು ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪ್ರಾಥಮಿಕ ವಿಚಾರಣೆ ಕಡ್ಡಾಯ
ಹೊಸ ಮಾರ್ಗಸೂಚಿಯ ಪ್ರಕಾರ, ಸಾಮಾಜಿಕ ಮಾಧ್ಯಮಗಳಲ್ಲಿನ ಆಕ್ಷೇಪಾರ್ಹ ಪೋಸ್ಟ್‌ಗಳ ಬಗ್ಗೆ ದೂರು ಬಂದ ತಕ್ಷಣ ಎಫ್‌ಐಆರ್ ದಾಖಲಿಸುವಂತಿಲ್ಲ. ದೂರಿನಲ್ಲಿ ಉಲ್ಲೇಖಿಸಲಾದ ವಿಷಯವು ಮೇಲ್ನೋಟಕ್ಕೆ ಅಪರಾಧವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೊದಲು ಪ್ರಾಥಮಿಕ ವಿಚಾರಣೆಯನ್ನು ನಡೆಸಬೇಕು. ಯಾವುದೇ ಪೋಸ್ಟ್ ಸಾರ್ವಜನಿಕ ಶಾಂತಿಗೆ ತಕ್ಷಣದ ಅಪಾಯವನ್ನು ಉಂಟುಮಾಡುವಂತಿದ್ದರೆ ಮಾತ್ರ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

'ನೊಂದ ವ್ಯಕ್ತಿ' ಮಾತ್ರ ದೂರು ನೀಡಲು ಅವಕಾಶ
ವಿಶೇಷವಾಗಿ ಮಾನಹಾನಿ ಅಥವಾ ವೈಯಕ್ತಿಕ ಘನತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ಕಾನೂನಿನ ಪ್ರಕಾರ 'ನೊಂದ ವ್ಯಕ್ತಿ' (Aggrieved Person) ಮಾತ್ರ ದೂರು ನೀಡಬೇಕು. ಆ ಘಟನೆಗೆ ಸಂಬಂಧವಿಲ್ಲದ ಮೂರನೇ ವ್ಯಕ್ತಿ ನೀಡುವ ದೂರುಗಳನ್ನು (ಗಂಭೀರ ಅಪರಾಧಗಳನ್ನು ಹೊರತುಪಡಿಸಿ) ಪೊಲೀಸರು ಸ್ವೀಕರಿಸಬಾರದು. ಇದು ರಾಜಕೀಯ ಪ್ರೇರಿತ ದೂರುಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ
ಸಂವಿಧಾನದ 19(1)(ಎ) ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಸ್ವಾತಂತ್ರ್ಯವಿದೆ. ಕಟುವಾದ ರಾಜಕೀಯ ಭಾಷಣಗಳು ಅಥವಾ ಆಕ್ಷೇಪಾರ್ಹ ಎನಿಸಬಹುದಾದ ರಾಜಕೀಯ ಪೋಸ್ಟ್‌ಗಳಿಗೆ ನೇರವಾಗಿ ಕೇಸ್ ದಾಖಲಿಸಬಾರದು ಎಂದು ಸಲೀಮ್ ಸೂಚಿಸಿದ್ದಾರೆ. ಕೇದಾರನಾಥ್ ಸಿಂಗ್ ಮತ್ತು ಶ್ರೇಯಾ ಸಿಂಘಾಲ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಳ್ಳಬೇಕು. ದೇಶದ್ರೋಹ ಅಥವಾ ದ್ವೇಷ ಬಿತ್ತುವ ಪೋಸ್ಟ್‌ಗಳ ವಿಷಯದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸ್ಪಷ್ಟ ಸಾಕ್ಷ್ಯಗಳಿದ್ದರೆ ಮಾತ್ರ ಪ್ರಕರಣ ದಾಖಲಿಸಲು ಅನುಮತಿ ನೀಡಲಾಗಿದೆ.
ಬಂಧನಕ್ಕೆ ಕಟ್ಟುನಿಟ್ಟಿನ ನಿಯಮ
ಸುಪ್ರೀಂ ಕೋರ್ಟ್‌ನ 'ಅರ್ನೇಶ್ ಕುಮಾರ್' ಪ್ರಕರಣದ ಮಾರ್ಗಸೂಚಿಯಂತೆ, ಅನಗತ್ಯವಾಗಿ ಯಾರನ್ನೂ ಬಂಧಿಸಬಾರದು. 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಇರುವ ಪ್ರಕರಣಗಳಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಬೇಕೇ ಹೊರತು, ತಕ್ಷಣದ ಬಂಧನಕ್ಕೆ ಮುಂದಾಗಬಾರದು ಎಂದು ಮಾರ್ಗಸೂಚಿಯಲ್ಲಿ ಎಚ್ಚರಿಸಲಾಗಿದೆ.
ಈ ಹೊಸ ಕ್ರಮದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬಲ ಸಿಗಲಿದ್ದು, ಪೊಲೀಸರ ಅಧಿಕಾರ ದುರುಪಯೋಗಕ್ಕೆ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ. ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡ ಈ ಹಿಂದೆ ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮಗಳ ಜವಾಬ್ದಾರಿಯುತ ಬಳಕೆಯ ಬಗ್ಗೆ ಸಮಾಲೋಚನೆ ನಡೆಸಿದ್ದರು, ಅದಕ್ಕೆ ಪೂರಕವಾಗಿ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.












Click it and Unblock the Notifications