ಕೆಪಿಎಸ್‌ಸಿ ಹಗರಣ : ಎ.ಕೆ.ಸುಬ್ಬಯ್ಯ ಆರೋಪಗಳೇನು?
ಬೆಂಗಳೂರು, ಆ.14 : ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬವೇ ಫಲಾನುಭವಿಗಳಾಗಿದ್ದಾರೆ ಎಂದು ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಅವರು ಆರೋಪ ಮಾಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎ.ಕೆ.ಸುಬ್ಬಯ್ಯ ಅವರು, 2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿಯನ್ನು ರದ್ದು ಮಾಡಿರುವ ಸರ್ಕಾರದ ನಿಲುವಿಗೆ ನನ್ನ ಬೆಂಬಲವಿದೆ ಎಂದರು. ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಮಾರಸ್ವಾಮಿ ಅವರು, ನೊಂದ ಅಭ್ಯರ್ಥಿಗಳು ಪ್ರಾಮಾಣಿಕರು ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.

ನೊಂದ ಅಭ್ಯರ್ಥಿಗಳು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ, ಮುಂದಿನ ಪರೀಕ್ಷೆಗೆ ಸಿದ್ದರಾಗಿ ಎಂದು ಸುಬ್ಬಯ್ಯ ಅವರು ಹೇಳಿದರು. ನೊಂದ ಅಭ್ಯರ್ಥಿಗಳ ಪರವಾಗಿ ಪ್ರತಿಣಭಟನೆ ನಡೆಸಲು ಕುಮಾರಸ್ವಾಮಿ ಅವರಿಗೆ ನೈತಿಕತೆ ಇಲ್ಲ. ಭ್ರಷ್ಟಾಚಾರದಲ್ಲಿಯೇ ತೊಡಗಿರುವ ಅವರು ಪ್ರತಿಭಟನೆ ನಿಲ್ಲಿಸಬೇಕು ಎಂದರು. [ಕೆಪಿಎಸ್ಸಿ ಹಗರಣ : ಎಚ್ಡಿಕೆ ನೀಡಿದ ದಾಖಲೆಗಳೇನು?]
ಉತ್ತರ ಪತ್ರಿಕೆ ಬದಲಾಯಿಸಿದ್ದರು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರುದ್ಧವೂ ವಾಗ್ಧಾಳಿ ನಡೆಸಿದ ಎ.ಕೆ.ಸುಬ್ಬಯ್ಯ ಅವರು, 1998 ರಿಂದ ದೇವೇಗೌಡ ಕುಟುಂಬ ಕೆಪಿಎಸ್ಸಿ ಫಲಾನುಭವಿಯಾಗಿದೆ. ಎಚ್.ಡಿ. ಬಾಲಕೃಷ್ಣೆ ಗೌಡ ಕೆಪಿಎಸ್ಸಿಗೆ ಆಯ್ಕೆಯಾಗಿದ್ದು ಹೇಗೆ ? ಉತ್ತರ ಪತ್ರಿಕೆ ಅದಲು ಬದಲಿಸಿ ಬಾಲಕೃಷ್ಣೆ ಗೌಡ ಆಯ್ಕೆಯಾದರು ಎಂದು ಆರೋಪಿಸಿದರು.
1978ರಲ್ಲಿ ದೇವೇಗೌಡರಿಗೆ ಓಡಾಡೋಕೆ ಕಾರು ಇರಲಿಲ್ಲ, ನನ್ನ ಕಾರಿನಲ್ಲಿ ಓಡಾಡುತ್ತಿದ್ದರು. ಈಗ ದೇವೇಗೌಡ ಕುಟುಂಬದ ಆಸ್ತಿ ಎಷ್ಟು ? ದೇವೇಗೌಡರ ಮೊಮ್ಮಗ 3 ಕೋಟಿಯ ಕಾರಿನಲ್ಲಿ ಓಡಾಡುತ್ತಿದ್ದಾರೆ. ಪ್ರಾಮಾಣಿಕರಂತೆ ಪ್ರತಿಭಟನೆ ಮಾಡುವ ಕುಮಾರಸ್ವಾಮಿ, ತಕ್ಷಣ ತಮ್ಮ ಪ್ರತಿಭಟನೆ ಕೈಬಿಡುವಂತೆ ಸುಬ್ಬಯ್ಯ ಅವರು ಆಗ್ರಹಿಸಿದರು.












Click it and Unblock the Notifications