ಸರ್ವರ ಏಳಿಗೆಗೆ ಸಮೃದ್ಧ ಕರ್ನಾಟಕ ಕಟ್ಟುವ ಸಂಕಲ್ಪ: ಸಿಎಂ ಬೊಮ್ಮಾಯಿ
ಬೆಂಗಳೂರು, ಜುಲೈ 28 : ರಾಜ್ಯದ ಎಲ್ಲ ವರ್ಗದವರ ಅಭಿವೃದ್ಧಿಗೆ ಸಮಗ್ರವಾದ ಯೋಜನೆ ರೂಪಿಸಲಾಗಿದೆ. ಅದರ ಮೂಲಕ ಹೆಚ್ಚಾಗುವ ರಾಜ್ಯದ ಆರ್ಥಿಕತೆಯ ಲಾಭವನ್ನು ಎಲ್ಲರಿಗೂ ತಲುಪಿಸುವ ಸದುದ್ದೇಶದಿಂದ ಸರ್ವರ ವಿಕಾಸವಾಗುವ ಸಮೃದ್ಧ ಕರ್ನಾಟಕ ಕಟ್ಟುವ ಸಂಕಲ್ಪ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಬುಧವಾರ ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಬಜೆಟ್ ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳಿಗೆ ಒಂದೇ ತಿಂಗಳ ಅವಧಿಯಲ್ಲಿ ಸರ್ಕಾರದ ಆದೇಶ ಹೊರಡಿಸಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಬಜೆಟ್ ಆಗಿ 4 ತಿಂಗಳಲ್ಲಿ ಯೋಜನೆ ಅನುಷ್ಠಾನಗೊಳಿಸಿದೆ. ಇದು ಆಡಳಿತದಲ್ಲಿನ ದಕ್ಷತೆಗೆ ಹಿಡಿದ ಕನ್ನಡಿ ಎಂದರು.
ರಾಜ್ಯದಲ್ಲಿ ಪ್ರಗತಿಪರವಾಗಿರುವ ಉದ್ಯಮ ಸ್ಥಾಪಿಸಿ, ಯುವಕರಿಗೆ ಉದ್ಯೋಗ ನೀಡುವುದರಿಂದ ಹಿಡಿದು ಹೊಲದಲ್ಲಿ ದುಡಿಯುವ ರೈತನವರೆಗೂ, ಕೂಲಿಕಾರರಿಗೆ, ಮಹಿಳೆಯರಿಗೆ, ಎಸ್.ಸಿ, ಎಸ್.ಟಿ ಸಮುದಾಯಗಳಿಗೆ, ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಕ್ರಮ
ಕಲ್ಯಾಣ ಕರ್ನಾಟಕ ಭಾಗದಲ್ಲಿ 14,000 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3,000 ಕೋಟಿ ರೂ. ಅನುದಾನ ನೀಡುವ ಮೂಲಕ ಪ್ರಾದೇಶಿಕ ಅಸಮಾನತೆ ನಿವಾರಿಸಲಾಗುತ್ತಿದೆ.
ರಾಜ್ಯದಲ್ಲಿ 5 ಹೊಸ ಇಂಟೆಗ್ರೇಟೆಡ್ ಟೌನ್‌ಷಿಪ್‌ಗಳನ್ನು ಕಟ್ಟುವ ಪ್ರಕ್ರಿಯೆ ಆರಂಭವಾಗಿದೆ. ಆರು ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಬಡವರಿಗೆ ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಡಯಾಲಿಸಿಸ್ ಸೈಕಲ್ ಅನ್ನು 60,000 ಕ್ಕೆ ಏರಿಲಾಗುತ್ತಿದೆ. ಕ್ಯಾನ್ಸರ್ ರೋಗಿಗಳಿಗೆ ಕೀಮೋಥೆರಪಿ ಚಿಕಿತ್ಸೆಯನ್ನು 10 ಕಾಲೇಜುಗಳಲ್ಲಿ ಒದಗಿಸಲು ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಭತ್ಯೆ, ಮಾಸಿಕ ಭತ್ಯೆ, ಗೌರವಧನ ಹೆಚ್ಚಳ
ಆಸಿಡ್ ದಾಳಿಗೆ ಒಳಗಾದವರಿಗೆ ನೀಡುವ ಭತ್ಯೆಯನ್ನು 10,000 ರೂ.ಗೆ ಹೆಚ್ಚಳ ಮಾಡಿದ್ದು, ಆಶಾ ಕಾರ್ಯಕರ್ತರಿಗೆ, ಸಫಾಯಿ ಕರ್ಮಚಾರಿ, ಗ್ರಾಮ ಸಹಾಯಕರಿಗೆ ಮಾಸಿಕ ಭತ್ಯೆ ಹೆಚ್ಚಳ ಮಾಡಲು ಆದೇಶಿಲಾಗಿದೆ. ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸಿದ್ದೇವೆ. ಸರ್ಕಾರದ ಈ ಎಲ್ಲ ಸಾಧನೆಗಳು, ಯೋಜನೆಗಳು ಜನರನ್ನು ತಲುಪುತ್ತಿವೆ. ಬಿಜೆಪಿ ಪರ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದ ಅಭಿವೃದ್ಧಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು.

ಅಶಾಂತಿಗೆ ಯತ್ನ: ಪ್ರವೀಣ್ ಹತ್ಯೆ ಗಂಭೀರವಾದದ್ದು
ಬಿಜೆಪಿ ಸರ್ಕಾರದ ಮುಂದಿರುವ ಸವಾಲುಗಳ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ನಾಡಿನಲ್ಲಿ ಕೋಮು ಸೌಹಾರ್ದತೆಯನ್ನು ಕದಡಿಸುವ ಘಾತುಕ ಶಕ್ತಿಗಳು ಕೇರಳ, ಕರ್ನಾಟಕ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ ಇಡೀ ದೇಶದಲ್ಲಿ ಅಶಾಂತಿಯನ್ನು ಹಬ್ಬಿಸಲು ಪ್ರಯತ್ನಿಸುತ್ತಿವೆ. ಕರ್ನಾಟಕದಲ್ಲಿ ಕಳೆದ 10ವರ್ಷಗಳಿಂದ ಸಮಾಜಘಾತುಕ ಶಕ್ತಿಗಳು ತಲೆಎತ್ತಿವೆ. 2014 ರಿಂದ ಇಲ್ಲಿಯವರೆಗೂ ಈ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ.
ರಾಜ್ಯದ ದಕ್ಷ ಪೊಲೀಸ್ ಅಧಿಕಾರಿಗಳ ಶ್ರಮದಿಂದ ಸ್ಲೀಪರ್ ಸೆಲ್ ಭಯೋತ್ಪಾದಕರು, ಅವರ ಸಂಘಟನೆಗಳಲ್ಲಿರುವ ಅನೇಕ ಅಪರಾಧಿಗಳನ್ನು ತಿಹಾರ್ ಜೈಲಿಗೆ ಕಳಿಸಲಾಗಿದೆ. ಡಿ.ಜೆ ಹಳ್ಳಿ ಪ್ರಕರಣ, ಮಂಗಳೂರು ಪ್ರಕರಣಗಳಲ್ಲಿ ನಿಷ್ಠೆಯಿಂದ ಪೊಲೀಸರು ಕಾರ್ಯ ನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ನಡೆದ ಪ್ರವೀಣ್ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 5 ತನಿಖಾ ತಂಡಗಳು ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಹೇಳಿದರು.

ಹತ್ಯೆ ಘಟನೆ: ಯುಪಿ ಮಾದರಿ ಅನುಸರಿಸಬೇಕಾಗುತ್ತದೆ
ಶಿವಮೊಗ್ಗದ ಹರ್ಷನ ಕೊಲೆ ವೇಳೆ ಸರ್ಕಾರ 24 ಗಂಟೆಯಲ್ಲಿ ಕ್ರಮ ತೆಗೆದುಕೊಂಡಿದೆ. ಡಿಜಿ ಹಳ್ಳಿ, ಕೆಜಿಹಳ್ಳಿ ಪ್ರಕರಣ, ಪಾಂಡವಪುರ ಪ್ರಕರಣದಲ್ಲಿ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಇದು ಕೇವಲ ಬಾಯಿಮಾತಲ್ಲ. ಅದೇ ರೀತಿ ಬಿಜೆಪಿ ಮುಖಂಡ ಪ್ರವೀಣ್ ಕೊಲೆ ಪ್ರಕರಣದಲ್ಲಿ ಸಹ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕರ್ನಾಟಕದಲ್ಲಿ ಅಹಿತಕರ ಘಟನೆಗಳನ್ನು ನಿಯಂತ್ರಣ ಮಾಡಲು ಹಲವು ವಿಧಾನಗಳನ್ನು ಪ್ರಯೋಗ ಮಾಡಲಾಗುತ್ತಿದೆ. ಪರಿಸ್ಥಿತಿ ಒದಗಿಬಂದರೆ ಕರ್ನಾಟಕದಲ್ಲಿ ಉತ್ತರ ಪ್ರದೇಶದ ಮಾದರಿ ಅನುಸರಿಸಲಿದ್ದೇವೆ. ಈಗಾಗಲೇ ಬಿಜೆಪಿ ಸರ್ಕಾರ ಸಾಕಷ್ಟು ಸವಾಲುಗಳನ್ನು ನಿಭಾಯಿಸಿದೆ. ಪ್ರತಿಪಕ್ಷಗಳು ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಬೊಮ್ಮಾಯಿ ಹೇಳಿದರು.












Click it and Unblock the Notifications