ಉತ್ತಮ ಮಳೆಯಾದರೂ ಕರ್ನಾಟಕದ ರೈತರಿಗೆ ಹೊಸ ಸಮಸ್ಯೆ: ಸರ್ಕಾರದ ನಡೆಗೆ ವಿರೋಧ!
ಈ ಬಾರಿ ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆ ಆಗಿದೆ. ಆದರೆ, ಈ ಬಾರಿ ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ವಿಚಾರದಲ್ಲಿ ಸಂಕಷ್ಟ ಎದುರಾಗಿದೆ. ಈ ಸಂಬಂಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಅನ್ನದಾತ ರೈತನನ್ನು ಸಂಕಷ್ಟಕ್ಕೀಡು ಮಾಡುವ ಹಾಗೂ ವ್ಯವಸ್ಥೆಯಲ್ಲಿ ಶೋಷಣೆಗೊಳಪಡಿಸುವ ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಲೇ ಇದೆ. ಈ ಬಾರಿ ಆಶಾದಾಯಕ ಮುಂಗಾರಿನ ಹಿನ್ನೆಲೆಯಲ್ಲಿ ಉತ್ತಮ ಬೆಳೆ ಬೆಳೆಯುವ ಉತ್ಸಾಹದಲ್ಲಿರುವ ರೈತ ಸಮುದಾಯವನ್ನು ರಸಗೊಬ್ಬರ ಹಾಗೂ ಬಿತ್ತನೆ ಬೀಜ ಪೂರೈಸುವ ಕಂಪನಿಗಳು ನಕಲಿ ಬೀಜಗಳನ್ನು ಪೂರೈಸುವ ಮೂಲಕ ಕೃಷಿ ಚಟುವಟಿಕೆಯನ್ನು ನಿಷ್ಕ್ರಿಯಗೊಳಿಸುವ ವಿಷಕಾರಕ ಕೃತ್ಯದಲ್ಲಿ ತೊಡಗಿರುವುದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಈ ನಿಟ್ಟಿನಲ್ಲಿ ಅಂತಹ ಕಂಪನಿಗಳ ಮೇಲೆ ಕ್ರಿಮಿನಲ್ ಮುಕದ್ದಮೆ ಹೂಡಿ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಸಕಾಲದಲ್ಲಿ ರೈತ ಸಮೂಹಕ್ಕೆ ಗುಣಮಟ್ಟದ ಬಿತ್ತನೆ ಬೀಜ, ಅಗತ್ಯ ರಸಗೊಬ್ಬರಗಳು ದೊರಕಲು ಸಾಧ್ಯವಿರುವ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.

ಪ್ರಕೃತಿಯನ್ನು ನಂಬಿ ಬದುಕುವ ದೇಶದ ಬಹುದೊಡ್ಡ ಮಾನವ ಸಂಪನ್ಮೂಲವಾಗಿರುವ ರೈತ ಸಮುದಾಯಕ್ಕೆ ಯಾವುದೇ ತೊಂದರೆಗಳು ಬಾಧಿಸದಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಪ್ರೋತ್ಸಾಹ ಯೋಜನೆಗಳ ಜತೆಗೇ ರೈತ ರಕ್ಷಣೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ಬದುಕಿಗೆ ಕಿಂಚಿತ್ತೂ ತೊಂದರೆಯಾಗದಂತೆ ಬದ್ಧತೆಯ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ.
ಕೃಷಿ ಇಲಾಖೆಗೆ ಪೂರಕ ಶಕ್ತಿ ತುಂಬಲು ರೈತರನ್ನು ವಂಚಿಸುವ ಜಾಲಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಜಾಗೃತ ದಳವನ್ನು ರಚಿಸಬೇಕು. ಈ ಬಾರಿ ಉತ್ತಮ ಮುಂಗಾರಿನ ಮೂಲಕ ರೈತರನ್ನು ಪ್ರಕೃತಿ ಮಾತೆ ಅಪ್ಪಿಕೊಂಡಿದ್ದಾಳೆ. ರೈತ ಅದರ ಪ್ರತಿಫಲ ಅನುಭವಿಸಲು ಭಂಗ ತರುವ ಯಾವುದೇ ವಂಚಕ ಯತ್ನಗಳನ್ನು ಹಿಮ್ಮಟ್ಟಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಾಧ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಜರೂರಾಗಿ ತೆಗೆದುಕೊಳ್ಳಲಿ ಎಂದು ಒತ್ತಾಯಿಸುವೆ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಅನ್ನದಾತರಿಗೆ ಯೂರಿಯಾ ಗೊಬ್ಬರ ವಿತರಿಸಲು ಯಾಕಿಷ್ಟು ವಿಳಂಬ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಪ್ರಶ್ನೆ ಮಾಡಿದೆ. ಕೃಷಿ ಇಲಾಖೆಯ ನಿರ್ಲಕ್ಷ್ಯಕ್ಕೆ ರೈತರು ಚಳಿ, ಮಳೆ ಎನ್ನದೆ ಬೀದಿಯಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದೆ. ಸಮಯಕ್ಕೆ ಸರಿಯಾಗಿ ರಸಗೊಬ್ಬರ ಕೊಡಲಾಗದ ಮೇಲೆ ಕೃಷಿ ಮಂತ್ರಿಯಾಗಿದ್ದು ಏನು ಪ್ರಯೋಜನ ಚಲುವರಾಯಸ್ವಾಮಿ ಅವರೇ, ನಿಮ್ಮ ರಾಜಕೀಯ ಪಕ್ಕಕ್ಕಿಟ್ಟು, ಯೂರಿಯೊ ಗೊಬ್ಬರದ ಕೊರತೆಯನ್ನು ನೀಗಿಸಿ, ನಾಡಿನ ಕೃಷಿಕರ ಹಿತರಕ್ಷಣೆಯ ಕೆಲಸವನ್ನು ಮೊದಲು ಮಾಡಿ ಎಂದು ಆಗ್ರಹಿಸಿದೆ.












Click it and Unblock the Notifications