ಡಿಸಿಪಿ ಸೇರಿ ಹಲವು ಪೊಲೀಸರ ಎತ್ತಂಗಡಿಗೆ ಚುನಾವಣಾ ಆಯೋಗ ಸೂಚನೆ!
ಬೆಂಗಳೂರು, ಏಪ್ರಿಲ್ 18; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಬಳಿಕ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಸರ್ಕಾರಿ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಘೋಷಣೆಯಾಗಲಿದೆ.
ಚುನಾವಾಣಾ ಕರ್ತವ್ಯ ಲೋಪ ಮಾಡಿ ಚುನಾವಣಾ ಕಾರ್ಯಕ್ಕೆ ಅಡ್ಡಿ ಉಂಟು ಮಾಡಬಾರದು ಎಂದು ಎಲ್ಲಾ ಅಧಿಕಾರಿಗಳು/ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಕರ್ತವ್ಯ ಲೋಪ ಮಾಡಿದರೆ ಅಮಾನತುಗೊಳಿಸುವ ಅಧಿಕಾರವನ್ನು ಜಿಲ್ಲಾಧಿಕಾರಿ/ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಲಾಗಿದೆ.

ಕರ್ನಾಟಕ ಚುನಾವಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಕೇಂದ್ರ ಚುನಾವಣಾ ಸೂಚನೆ ನೀಡಿದೆ. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ದೇವರಾಜ್ ಮತ್ತು ಇತರ 5 ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.
ಸುರಪುರ ಮತ್ತು ದೇವದುರ್ಗ ಕ್ಷೇತ್ರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಡಿವೈಎಸ್‌ಪಿಗಳ ವರ್ಗಾವಣೆಗೆ ಸಹ ಆಯೋಗ ನಿರ್ದೇಶನ ನೀಡಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಸುರಪುರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ವರ್ಗಾವಣೆ ಮಾಡಲಾಗುತ್ತಿದೆ.
ವರ್ಗಾವಣೆಗೊಳ್ಳುವವರು; ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ದೇವರಾಜ್, ಯಶವಂತಪುರ ಎಸಿಪಿ ಅರುಣ್ ಗೌಡ, ರಾಜರಾಜೇಶ್ವರಿ, ಯಶವಂತಪುರ ಮತ್ತು ರಾಜಗೋಪಾಲನಗರ ಠಾಣೆಗಳ ಇನ್ಸ್‌ಪೆಕ್ಟರ್‌ಗಳಾದ ಶಿವಣ್ಣ, ಸುರೇಶ್ ಕೆ., ಮಂಜುನಾಥ್ ಮತ್ತು ಜಗದೀಶ್. ಕೋಮು ದ್ವೇಷ ಭಾಷಣದ ಆರೋಪದ ಮೇಲೆ ಆರ್. ಆರ್. ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಇತ್ತೀಚೆಗೆ ಎರಡು ಎಫ್‌ಐಆರ್ ದಾಖಲಾಗಿದ್ದವು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಪರಿಸ್ಥಿತಿ ನಿಭಾಯಿಸಿದ ಕುರಿತು ಚುನಾವಣಾ ಆಯೋಗಕ್ಕೆ ಯಾವುದೇ ದೂರು ಬಂದಿರಲಿಲ್ಲ. ಆದರೆ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿತ್ತು.
ಚುನಾವಣಾ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಅಧಿಕಾರಿ/ ಸಿಬ್ಬಂದಿಗಳ ಬೇಜವಾಬ್ದಾರಿತನ, ಅವಿಧೇಯತೆ ಹಾಗೂ ಸರಕಾರಿ ನೌಕರನಿಗೆ ಸಲ್ಲದ ರೀತಿಯಲ್ಲಿ ನಡೆದು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021 3ನೇ ನಿಯಮದ (1) ನೇ ಉಪನಿಯಮದ ಖಂಡಗಳನ್ನು ಉಲ್ಲಂಘಿಸಿದರೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957 ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ, 1951 ರಡಿ ಕಲ್ಪಿಸಿದ ಅವಕಾಶಗಳ ಮೇರೆಗೆ ಶಿಸ್ತು ಕ್ರಮ ಜರುಗಿಸಲು ಅವಕಾಶವಿದೆ.
ಮಾರ್ಚ್ 29ರಂದು ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ತಕ್ಷಣವೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಏಪ್ರಿಲ್ 11ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಿದೆ. ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಸಲು ಅವಕಾಶವಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನ. ಮೇ 10ರಂದು ಚುನಾವಣೆ ನಡೆಯಲಿದೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications