ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದರ ಏರಿಕೆಯಲ್ಲಿನ ಇಚ್ಛಾಶಕ್ತಿ, ಕಮ್ಮಿ ಮಾಡೋದ್ರಲ್ಲೂ ಇರ್ಲಿ

By ಬಾಲರಾಜ್ ತಂತ್ರಿ
|
Google Oneindia Kannada News

ಸರಕಾರ ಯಾವುದೇ ಇರಲಿ, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದಂತೆಯೇ ರಾಜ್ಯ ಸರಕಾರಿ ಸ್ವಾಮ್ಯದ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸಂಸ್ಥೆಗಳು ಪ್ರಯಾಣದ ದರವನ್ನು ಏಕಾಏಕಿ ಏರಿಕೆ ಮಾಡುವುದನ್ನು ವಾಡಿಕೆಯಂತೆ ಅನುಸರಿಸಿಕೊಂಡು ಬರುತ್ತಿವೆ.

ಆದರೆ, ದರ ಏರಿಕೆ ಮಾಡುವಾಗ ಪ್ರಯಾಣಿಕರಿಗೆ ಇವರು ನೀಡುವ ಅನಿವಾರ್ಯತೆಯ ಸ್ಪಷ್ಟೀಕರಣ, ಡೀಸೆಲ್ ಬೆಲೆ ಕಮ್ಮಿಯಾದಾಗ ದರವನ್ನು ಇಳಿಸುವುದರಲ್ಲಿ ಯಾಕಿಲ್ಲ ಎನ್ನುವುದು ಪ್ರಯಾಣಿಕರು ಸರಕಾರವನ್ನು ನೋವಿನಿಂದ ಕೇಳುತ್ತಿರುವ ಪಶ್ನೆ.

ಬೆಂಗಳೂರು ಮತ್ತು ರಾಜ್ಯದ ಜನತೆಗೆ ಜೀವನಾಡಿಯಂತಿರುವುದು ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸಂಸ್ಥೆಗಳು. ಲಕ್ಷಾಂತರ ಜನ ಪ್ರಯಾಣಿಕರು ಇದನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವುದು. (5 ವರ್ಷದಲ್ಲೇ ಮೊದಲ ಬಾರಿ ಡಿಸೇಲ್ ದರ ಇಳಿಕೆ)

ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಲಿ ಎಂದು ಆರಂಭವಾಗಿರುವ ಈ ಸಾರಿಗೆ ಸಂಸ್ಥೆಗಳು ಬೆಲೆ ಏರಿಸುತ್ತಲೇ ಬರುವ ಮೂಲಕ 'ಬಡವರ ಸ್ನೇಹಿ' ಸಾರಿಗೆ ಸಂಸ್ಥೆಗಳಾಗಿಯೇ ಉಳಿದಿಲ್ಲ ಎನ್ನುವುದು ವಿಷಾದನೀಯ.

ಮಧ್ಯಮ ವರ್ಗದ ಜನರು ಮತ್ತು ಇತರ ಸಣ್ಣಪುಟ್ಟ ಕೆಲಸದಲ್ಲಿ ಇರುವವರು ತಮ್ಮ ಮಾಸಿಕ ಆದಾಯದ ನಾಲ್ಕನೇ ಒಂದು ಭಾಗವನ್ನು ಬಸ್ ಪ್ರಯಾಣಕ್ಕೆಂದೇ ಮೀಸಲಿಡ ಬೇಕಾಗಿರುವುದು ವಾಸ್ತವತೆ.

ಪರಿಸ್ಥಿತಿ ಹೀಗಿರುವಾಗ ತೈಲಬೆಲೆ ನೆಪ ಇಟ್ಟುಕೊಂಡು ಪ್ರಯಾಣ ದರ ಏರಿಸಿದ್ದ ಈ ಸಾರಿಗೆ ಸಂಸ್ಥೆಗಳು ಡೀಸೆಲ್ ಬೆಲೆ ಕಮ್ಮಿಯಾದಾಗ ಬೆಲೆ ಇಳಿಸುವ ಮನಸ್ಸು ಯಾಕೆ ಮಾಡುತ್ತಿಲ್ಲ?

ಬೆಲೆ ಏರಿಕೆಯಾದಾಗ ರಾತ್ರೋರಾತ್ರಿ, ಸಾರ್ವಜನಿಕರಿಗೆ ಉಸಿರಾಡಲು ಪುರುಸೊತ್ತು ನೀಡದಂತೆ ಬೆಲೆ ಏರಿಕೆ ಮಾಡುವ ಸರಕಾರ, ಈಗ ಡೀಸೆಲ್ ಬೆಲೆ ಕಮ್ಮಿಯಾಗಿ ಹದಿನೈದು ದಿನಗಳಾದರೂ ಪ್ರಯಾಣದ ದರದ ಬಗ್ಗೆ ತುಟಿಕ್ ಪಿಟಿಕ್ ಅನ್ನದೇ ಜಾಣ ಕುರುಡುತನ ಮರೆಯುತ್ತಿರುರುವುದು ಯಾತಕ್ಕೆ?

ಮೊದಲೇ, ನಮ್ಮ ರಾಜ್ಯದಲ್ಲಿರುವಷ್ಟು ಪ್ರಯಾಣದರ ದಕ್ಷಿಣ ಭಾರತದ ಇತರ ರಾಜ್ಯಗಳಿಲ್ಲ. ಪ್ರಯಾಣದರ ಇದೇ ರೀತಿ ಮುಂದುವರಿದ ಪಕ್ಷದಲ್ಲಿ ಸಾರಿಗೆ ಸಂಸ್ಥೆಗಳ ಆದಾಯದಲ್ಲಿ ಮತ್ತಷ್ಟು ಹಿನ್ನಡೆಯಾಗುವುದರಲ್ಲಿ ಸಂಶಯವಿಲ್ಲ.

ಉದಾಹರಣೆಗೆ ಬೆಂಗಳೂರು ಬನಶಂಕರಿ ಒಂದನೇ ಹಂತದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಟೋದಲ್ಲಿ ತಗಲುವ ವೆಚ್ಚ ಸುಮಾರು 65 ರೂಪಾಯಿ. ಬಸ್ ಪ್ರಯಾಣದರ ಒಬ್ಬರಿಗೆ 18 ರೂಪಾಯಿ. ಮೂರು ಜನ ಪ್ರಯಾಣಿಸುವಂತಿದ್ದರೆ ಬಸ್ ದರ್ ಆಟೋ ದರಕ್ಕೆ ಸಮನಾಗಿರುತ್ತದೆ.

ಡೀಸೆಲ್ ಬೆಲೆ ಏರಿಕೆ, ಆಡಳಿತಾತ್ಮಕ ಶುಲ್ಕ, ಹಿಂದಿನ ಸರಕಾರ ಅವಧಿಯಲ್ಲಿನ ನಷ್ಟವನ್ನು ಸರಿದೂಗಿಸುವುದಕ್ಕಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬೆಲೆ ಏರಿಕೆಯಾದಾಗ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿರುವುದು ಹಾಗೂ ಡಾಲರ್ ಎದುರು ರೂಪಾಯಿ ಗಣನೀಯ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಡೀಸೆಲ್ ಬೆಲೆಯನ್ನು 5 ವರ್ಷದಲ್ಲಿ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಕಮ್ಮಿ ಮಾಡಿತ್ತು

ರಾಜ್ಯದಲ್ಲಿ ಸ್ಥಳೀಯ ಸೆಸ್ ಸೇರಿ ಲೀಟರ್ ವೊಂದಕ್ಕೆ ಸುಮಾರು ನಾಲ್ಕು ರೂಪಾಯಿಯಷ್ಟು ಡೀಸೆಲ್ ಬೆಲೆ ಕಮ್ಮಿಯಾಗಿದೆ. ಇಷ್ಟು ಪ್ರಮಾಣದಲ್ಲಿ ತೈಲ ಬೆಲೆ ಕಮ್ಮಿಯಾಗಿದ್ದರೂ ರಾಜ್ಯ ಸರಕಾರ ಪ್ರಯಾಣದರ ಇಳಿಸುವ ಕ್ರಮಕ್ಕೆ ಯಾಕೆ ಮುಂದಾಗುತ್ತಿಲ್ಲ?

ಮೇ ತಿಂಗಳಲ್ಲಿ ಬಿಎಂಟಿಸಿ ಮಾಸಿಕ ಬಸ್ ದರವನ್ನು 725 ರಿಂದ 825 ರೂಪಾಯಿಗೆ (ಬ್ಲ್ಯಾಕ್ ಬೋರ್ಡ್), 925 ರೂಪಾಯಿಂದ 1050 (ರೆಡ್ ಬೋರ್ಡ್) ರೂಪಾಯಿಗೆ, ಮತ್ತು ದೈನಂದಿನ ಬಿಎಂಟಿಸಿ ಬಸ್ ಪಾಸ್ ದರವನ್ನು 65 ರೂಪಾಯಿಗೆ ಅವೈಜ್ಞಾನಿಕವಾಗಿ ಬಿಎಂಟಿಸಿ ಏರಿಕೆ ಮಾಡಿತ್ತು.

ಇದಲ್ಲದೇ, ಪ್ರತೀ ಸ್ಟೇಜಿನ ದರವನ್ನು ಸುಮಾರು 15% ಏರಿಕೆ ಮಾಡಲಾಗಿತ್ತು. ಇತ್ತ, ಕೆಎಸ್ಆರ್ಟಿಸಿ ಕೂಡಾ 207 ಕೋಟಿ ರೂಪಾಯಿ ನಷ್ಟವನ್ನು ಸರಿದೂಗಿಸಲು ತನ್ನ ಎಲ್ಲಾ ಮಾದರಿಯ ಬಸ್ ಸೇವೆಯ ಪ್ರಯಾಣದ ದರದಲ್ಲಿ ಶೇ.8ರಷ್ಟು ಏರಿಕೆ ಮಾಡಿತ್ತು.

Deregulating diesel prices, Karnataka government not interested in roll back the BMTC and KSRTC bus fare

ಸಂಸ್ಥೆಯನ್ನು ನಷ್ಟದ ದಾರಿಯಿಂದ ತಪ್ಪಿಸಲು ಬೆಲೆ ಏರಿಕೆ ಒಂದೇ ಪರಿಹಾರವಲ್ಲ, ಅಥವಾ ಸಂಸ್ಥೆ ನಷ್ಟ ಅನುಭವಿಸುತ್ತಿರುವುದಕ್ಕೆ ತೈಲ ಬೆಲೆ ಏರಿಕೆ ಮಾತ್ರ ಕಾರಣವಲ್ಲ. ಮೊದಲು ಸಂಸ್ಥೆಯಲ್ಲಿ ಹಣ ಪೋಲಾಗುವುದನ್ನು ತಪ್ಪಿಸಿದರೆ ಪರಿಹಾರ ಸಿಕ್ಕಿದ ಹಾಗೆ.

ದಿನದ ಮತ್ತು ತಿಂಗಳ ಬಸ್ ಪಾಸ್ ದರವನ್ನು ಜೊತೆಗೆ ಇತರ ಪ್ರಯಾಣದ ದರವನ್ನು ಕಡಿತಗೊಳಿಸಿದರೆ ಇದನ್ನೇ ನಂಬಿಕೊಂಡಿರುವ ಬಡವರ ಮತ್ತು ಸಾಮಾನ್ಯ ವರ್ಗದ ಜನತೆಯ ಬದುಕು ಸ್ವಲ್ಪ ಮಟ್ಟಿಗಾದರೂ ಹಸನಾಗಲು ಸಹಾಯವಾಗಲಿವೆ ಎನ್ನುವುದು ಸರಕಾರಕ್ಕೊಂದು ಮನವಿ ಮತ್ತಿ ವಿನಂತಿ.

English summary
Deregulating the diesel prices, Karnataka government not interested in roll back the BMTC and KSRTC bus fare. Karnataka government increased the bus fare in May 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X