Government Employee; ಪ್ರಭಾರ ಭತ್ಯೆ ನೌಕರರಿಗೆ ಮಹತ್ವದ ಮಾಹಿತಿ
ಬೆಂಗಳೂರು, ಜನವರಿ 25: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದೆ. ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಪ್ರಭಾರ ಭತ್ಯೆ ದರವನ್ನು ಪರಿಷ್ಕರಣೆ ಮಾಡಿ ಆದೇಶವನ್ನು ಹೊರಡಿಸಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಅಜಯ್ ಎಸ್. ಕೊರಡೆ, ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಪ್ರಭಾರ ಭತ್ಯೆ ದರವನ್ನು ಪರಿಷ್ಕರಿಸುವ ಕುರಿತು ಎಂಬ ವಿಷಯವನ್ನು ಆದೇಶ ಒಳಗೊಂಡಿದೆ. ಸರ್ಕಾರಿ ಆದೇಶ ದಿನಾಂಕ 30/04/2019 ಉಲ್ಲೇಖ ಮಾಡಲಾಗಿದೆ. ಅಲ್ಲದೇ ಭತ್ಯೆ ಪರಿಷ್ಕರಣೆ ಮಾಡುವಾಗ ಪರಿಗಣಿಸಬೇಕಾದ ಅಂಶಗಳನ್ನು ಸಹ ಆದೇಶದಲ್ಲಿ ವಿವರಿಸಲಾಗಿದೆ.
ಆದೇಶದ ವಿವರಗಳು; ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 32 ಮತ್ತು 68 ರಡಿಯಲ್ಲಿ ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲೀ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆ ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿರಿಸಿದಾಗ ಆ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದಲ್ಲಿ ಮೂರು ತಿಂಗಳವರೆಗೆ ಶೇಕಡ 7.5 ದರದಲ್ಲಿ, ಆ ನಂತರದ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಶೇಕಡ 15ರ ದರದಲ್ಲಿ ಪ್ರಭಾರ ಭತ್ಯೆಯನ್ನು ನಿಗದಿಪಡಿಸಿ ಆದೇಶಿಸಲಾಗಿತ್ತು.
ಪ್ರಸ್ತುತ, ಸರ್ಕಾರದ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಸುಗಮ ಆಡಳಿತಕ್ಕಾಗಿ ಹಲವಾರು ಸಿಬ್ಬಂದಿಗಳನ್ನು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಲ್ಲಿ ಅಧಿಕ ಪ್ರಭಾರ/ ಸಮವರ್ತಿ ಪ್ರಭಾರದಲ್ಲಿರಿಸಲಾಗಿದೆ. ಸದರಿ ಅಧಿಕಾರಿಗಳು ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
ಈ ಅಧಿಕಾರಿ/ ನೌಕರರುಗಳಿಗೆ ಪ್ರಭಾರ ಭತ್ಯೆ ಮಂಜೂರು ಮಾಡಲು ಹಾಲಿ ಅನುಸರಿಸುತ್ತಿರುವ ಕಾರ್ಯವಿಧಾನದ ಜಟಿಲತೆಯಿಂದಾಗಿ ಹಲವು ಸಂದರ್ಭಗಳಲ್ಲಿ ಪ್ರಭಾರ ಭತ್ಯೆ ಪಡೆಯುವುದು ಬಹಳ ಕಷ್ಟಕರವಾಗುತ್ತಿದೆ. ಈ ಕಾರ್ಯವಿಧಾನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಪ್ರಸ್ತುತ ಎರಡು ಹಂತದಲ್ಲಿ ನೀಡುತ್ತಿರುವ ಪ್ರಭಾರ ಭತ್ಯೆಯನ್ನು ವಿಲೀನಗೊಳಿಸಿ ಒಂದೇ ಹಂತದಲ್ಲಿ ನೀಡುವ ಬಗ್ಗೆ ಸ್ವೀಕೃತವಾದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಆದೇಶಿಸಲಾಗಿದೆ ಎಂದು ಹೇಳಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 32 ಮತ್ತು 68 ರಡಿಯಲ್ಲಿ ಸರ್ಕಾರಿ ಅಧಿಕಾರಿ/ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಿ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆ ಬೇರೊಂದು ಹುದ್ದೆಯಲ್ಲಿ ಹೆಚ್ಚಿನ ಪ್ರಭಾರದಲ್ಲಿರಿಸಿದ ಸಂದರ್ಭದಲ್ಲಿ ಅಂತಹ ಪ್ರಭಾರದಲ್ಲಿರಿಸಿದ ಅಧಿಕಾರಿಯ ಮೂಲ ವೇತನದ ಶೇಕಡ 15ರ ದರದಲ್ಲಿ ಪ್ರಭಾರ ಭತ್ಯೆಯನ್ನು ನಿಗದಿಪಡಿಸಿ ಆದೇಶಿಸಲಾಗಿದೆ.
ಪ್ರಭಾರ ಭತ್ಯೆಯನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಪ್ರಭಾರ ಭತ್ಯೆಯನ್ನು ಪ್ರತಿ ಮಾಸಿಕ ವೇತನ ಬಿಲ್ಲಿನೊಂದಿಗೆ ಪಾವತಿಸತಕ್ಕದ್ದು. ಪ್ರಭಾರ ಭತ್ಯೆಯನ್ನು ಪ್ರಭಾರದಲ್ಲಿರಿಸಿದ ಹುದ್ದೆಗೆ ಸಂಬಂಧಪಟ್ಟ DDO ಅಥವಾ ವರದಿ ಪ್ರಾಧಿಕಾರವು (Reporting Authority) ಯಾವುದು ಉನ್ನತವೋ ಅಂತಹ ಅಧಿಕಾರಿ ಮಂಜೂರು ಮಾಡತಕ್ಕದ್ದು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ನೇಮಿಸಲಾಗುವ ಇಲಾಖಾ ಮುಖ್ಯಸ್ಥರ ಹಂತದಲ್ಲಿನ ಪ್ರಭಾರದ ಸಂದರ್ಭದಲ್ಲಿ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು/ ಡ್ರಾ ಮಾಡಲು ಇಲಾಖಾ ಮುಖ್ಯಸ್ಥರು ಸಕ್ಷಮರಾಗಿರುತ್ತಾರೆ.
ಸಚಿವಾಲಯದ ಅಧಿಕಾರಿ/ ಸಿಬ್ಬಂದಿಗಳಿಗೆ ಸಂದರ್ಭಾನುಸಾರ ಸಿ.ಆ.ಸು. ಇಲಾಖೆ (ಲೆಕ್ಕಪತ್ರ)/ ಐ.ಆರ್. ಎಲ್. ಎ. ಶಾಖೆಗಳಿಂದ ಮಾಸಿಕ ವೇತನದ ಬಿಲ್‌ಗಳೊಂದಿಗೆ ಪ್ರಭಾರ ಭತ್ಯೆಯನ್ನು ಸೆಳೆದು ಪಾವತಿಸತಕ್ಕದ್ದು.
ಪ್ರಭಾರ ಭತ್ಯೆಯ ಪರಿಷ್ಕೃತ ದರಗಳು ದಿನಾಂಕ 01/09/2022 ರಿಂದ ಜಾರಿಗೆ ಬರತಕ್ಕದ್ದು. ಪ್ರಸ್ತುತ ಇತ್ಯರ್ಥವಾಗದಿರುವ ಪ್ರಭಾರ ಭತ್ಯೆಯ ಕ್ಷೇಮುಗಳನ್ನು ಮೇಲಿನ ವಿಧಾನದಂತೆ ಇತ್ಯರ್ಥಪಡಿಸತಕ್ಕದ್ದು. ಉಳಿದಂತೆ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 32 ಮತ್ತು 68ರ ಎಲ್ಲಾ ಷರತ್ತು ಮತ್ತು ಉಪಬಂಧಗಳು ಅನ್ವಯವಾಗಲಿದೆ ಎಂದು ಆದೇಶ ಸ್ಪಷ್ಟಪಡಿಸಿದೆ.












Click it and Unblock the Notifications