ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚಳ; ಸೊಳ್ಳೆ ಕಡಿತದ ಬಗ್ಗೆ ಎಚ್ಚರ
ಬೆಂಗಳೂರು, ಸೆಪ್ಟೆಂಬರ್ 10 : ಕರ್ನಾಟಕದಲ್ಲಿ ಡೆಂಗ್ಯೂ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 8 ತಿಂಗಳಿನಲ್ಲಿ ರಾಜ್ಯದಲ್ಲಿ 6 ಮಂದಿ ಡೆಂಗ್ಯೂನಿಂದಾಗಿ ಮೃತಪಟ್ಟಿದ್ದಾರೆ.
ಡೆಂಗ್ಯೂ ಸೋಂಕು ಈಡೀಸ್ ಈಜಿಪ್ಟ್ ಸೊಳ್ಳೆ ಕಚ್ಚುವಿಕೆಯಿಂದ ಪ್ರಮುಖವಾಗಿ ಹರಡುತ್ತದೆ. ಜನವರಿಯಿಂದ ಇಲ್ಲಿಯ ತನಕ ರಾಜ್ಯದಲ್ಲಿ 10, 524 ಡೆಂಗ್ಯೂ ಪ್ರಕರಣಗಳು ದಾಖಲವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಎಂದರೆ 6515 ಡೆಂಗ್ಯು ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ (948), ಶಿವಮೊಗ್ಗ (384), ಹಾವೇರಿ (272), ಚಾಮರಾಜನಗರ (199) ಪ್ರಕರಣಗಳು ದಾಖಲಾಗಿವೆ.

ಈಡೀಸ್ ಈಜಿಪ್ಟ್ ಸೊಳ್ಳೆ ಸೂರ್ಯೋದಯದ ಬಳಿಕ ಎರಡು ಗಂಟೆ, ಸೂರ್ಯಸ್ತಕ್ಕೂ ಕೆಲವು ಗಂಟೆಗಳ ಮೊದಲು ಸಕ್ರಿಯವಾಗಿರುತ್ತವೆ. ಹಗಲಿನಲ್ಲಿಯೇ ಈ ಸೊಳ್ಳೆಗಳು ಹೆಚ್ಚಾಗಿ ಕಚ್ಚುತ್ತವೆ. ಸಾಮಾನ್ಯ ಸೊಳ್ಳಯ ಕಡಿತಕ್ಕೆ ಹೋಲಿಕೆ ಮಾಡಿದರೆ ಈಜಿಪ್ಟ್ ಸೊಳ್ಳೆ ಕಚ್ಚಿದರೆ ಹೆಚ್ಚು ಊರಿಯಾಗುತ್ತದೆ.
ಮನೆ, ಕಚೇರಿ ಸೇರಿದಂತೆ ಒಳ ಪ್ರದೇಶದಲ್ಲಿಯೇ ಈ ಸೊಳ್ಳೆಗಳು ಕಚ್ಚುವುದು ಹೆಚ್ಚು. ಸೊಳ್ಳೆಯ ಹಾರಾಟ ನಿಮ್ಮ ಗಮನಕ್ಕೆ ಬಾರದಂತೆ ಹಿಮ್ಮಡಿ, ಮೊಣಕಾಲಿನ ಭಾಗದಲ್ಲಿ ಈ ಸೊಳ್ಳೆಗಳು ಹೆಚ್ಚಾಗಿ ಕಚ್ಚುತ್ತವೆ.
ಈಡೀಸ್ ಈಜಿಪ್ಟ್ ಸಾಮಾನ್ಯವಾಗಿ ಸಂಗ್ರಹವಾಗಿರುವ ನೀರಿನ ಪ್ರದೇಶದಲ್ಲಿ ಮೊಟ್ಟೆ ಇಡುತ್ತದೆ. ಬಜೆಟ್, ಹೂವಿನಕುಂಡ, ಟಿನ್ ಕ್ಯಾನ್‌ಗಳು ಸೇರಿದಂತೆ ನೀರು ಸಂಗ್ರಹವಾಗಿರುವ ಪ್ರದೇಶಗಳನ್ನು ಸ್ವಚ್ಛವಾಗಿಟ್ಟರೆ ಸೊಳ್ಳೆ ಕಡಿತದಿಂದ ಪಾರಾಗಬಹುದಾಗಿದೆ.
ತೀರಾ ತಂಪಾದ ವಾತಾವರಣದಲ್ಲಿ ಈ ಸೊಳ್ಳೆಗಳು ಬದುಕುವುದಿಲ್ಲ. ಡೆಂಗ್ಯೂಗೆ ನಿಗದಿತವಾದ ಯಾವುದೇ ಚಿಕಿತ್ಸೆ ಇಲ್ಲ. ಆದ್ದರಿಂದ, ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸುವುದು ಮುಖ್ಯವಾಗಿದೆ. ಫುಲ್ ಕೈ ಶರ್ಟ್, ಫ್ಯಾಂಟ್ ಧರಿಸುವ ಮೂಲಕ ಸೊಳ್ಳೆಗಳಿಂದ ಪಾರಾಗಬಹುದು.
ಡೆಂಗ್ಯೂ ಸೋಂಕು ತಗುಲಿದರೆ ಜ್ವರ, ತಲೆನೋವು, ವಾಂತಿ ಕಾಣಿಸಿಕೊಳ್ಳುತ್ತದೆ. ಜ್ವರ ಬಂದಾಗ ವೈರಲ್ ಫೀವರ್, ಫ್ಲೂ ಇರಬಹುದು ಎಂದು ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.












Click it and Unblock the Notifications